ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಮಡಿಕೇರಿಯಲ್ಲಿ ಪಿಎಫ್‍ಐ ಪ್ರತಿಭಟನೆ

Update: 2018-11-07 18:07 GMT

ಮಡಿಕೇರಿ, ನ. 7 : ಪ್ರವಾದಿ ಮುಹಮ್ಮದ್ ಅವರಿಗೆ ಅಗೌರವ ತೋರುವ ಮೂಲಕ ಧಾರ್ಮಿಕ ಭಾವನೆಗೆ ದಕ್ಕೆ ತರಲಾಗಿದೆ ಎಂದು ಆರೋಪಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಇಂದಿರಗಾಂಧಿ ವೃತ್ತದಲ್ಲಿ (ಚೌಕಿ) ಪ್ರತಿಭಟನೆ ನಡೆಸಿದ ಪ್ರಮುಖರು ಧಾರ್ಮಿಕ ಭಾವನೆಗೆ ಧಕ್ಕೆಗೊಳಿಸಿ ಸಮಾಜದಲ್ಲಿ ಗಲಭೆಯನ್ನು ಉಂಟು ಮಾಡಲು ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ನ.5 ರಂದು ಗೋಣಿಕೊಪ್ಪದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿರುವ ಕೆಲವರು ಶಾಂತಿ, ಸೌಹಾರ್ದತೆಯ ಕೊಡಗು ಜಿಲ್ಲೆಯಲ್ಲಿ ಅಶಾಂತಿ, ಅಸಹಿಷ್ಣುತೆ, ಕೋಮುಗಲಭೆ ಸೃಷ್ಟಿಸುವ ಸಾಧ್ಯತೆಯಿದೆ. ಅಲ್ಲದೆ ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿರುವ ಕೇರಳದ ಮತೀಯ ಅಲ್ಪಸಂಖ್ಯಾತರ ವಿರುದ್ಧ ಕೊಡವ ಜನಾಂಗವನ್ನು ಎತ್ತಿ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಈ ರೀತಿಯ ಭಾಷಣಗಳಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೋಮು ಸಂಘರ್ಷ ಉಂಟು ಮಾಡುವ ಸಾಧ್ಯತೆ ಇದೆ. ಅಲ್ಲದೆ ಟಿಪ್ಪು ಜಯಂತಿಯನ್ನು ವಿರೋಧಿಸುವ ಭರದಲ್ಲಿ ಇಲ್ಲಿನ ಮುಸ್ಲಿಂ ಜನಾಂಗವನ್ನು ಅವಮಾನಿಸುವ ಪ್ರಯತ್ನಗಳೂ ನಡೆಯಬಹುದು ಎಂದು ಪ್ರತಿಭಟನಾಕಾರರು ಆರೋಪಿಸಿದರು. 

ಪ್ರವಾದಿ ಅವರಿಗೆ ಅಗೌರವ ಉಂಟು ಮಾಡುವ ಹೇಳಿಕೆಯನ್ನು ಕೊಡಗಿನ ಪತ್ರಿಕೆಯೊಂದು ಪ್ರಕಟಿಸಿದ್ದು, ಪತ್ರಿಕೆಯ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಇಸ್ಲಾಂ ಧರ್ಮವನ್ನು ಹಾಗೂ ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಟಿ.ಎ.ಹ್ಯಾರಿಸ್, ಪ್ರಮುಖರಾದ ಅಬ್ದುಲ್ ಮಜೀದ್, ಅಬೂಬಕರ್, ಅಬ್ದುಲ್ ಅಡ್ಕಾರ್, ನಗರಸಭಾ ಸದಸ್ಯರುಗಳಾದ ಅಮೀನ್ ಮೊಹಿಸಿನ್, ಕೆ.ಜೆ.ಪೀಟರ್ ಮತ್ತಿತರರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News