ಜೆಡಿಎಸ್-ಕಾಂಗ್ರೆಸ್ ನ ಹಣದ ಪ್ರಭಾವದಿಂದ ಸೋಲು: ಬಿಜೆಪಿ ಪರಾಜಿತ ಅಭ್ಯರ್ಥಿ ಡಾ.ಸಿದ್ದರಾಮಯ್ಯ

Update: 2018-11-07 18:17 GMT

ಮಂಡ್ಯ,ನ.7: ಜೆಡಿಎಸ್-ಕಾಂಗ್ರೆಸ್ ಹಣದ ಪ್ರಭಾವದಿಂದ ತಾನು ಸೋತಿದ್ದಾಗಿ ಲೋಕಸಭೆ ಉಪ ಚುನಾವಣೆ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಒಲವು ನನ್ನ ಪರವೇ ಇತ್ತು. ಇದರಿಂದ ಆತಂಕಗೊಂಡ ಪ್ರತಿಪಕ್ಷಗಳು ಗೆಲುವಿಗೆ ವಾಮಮಾರ್ಗ ಅನುಸರಿಸಿದವು. ಅದರಲ್ಲಿ ಹಣದ ಪ್ರಭಾವವೇ ಪ್ರಧಾನವಾಗಿತ್ತೆಂದು ದೂರಿದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಚುನಾವಣಾ ಕಣದಿಂದ ಸಿದ್ದರಾಮಯ್ಯ ಹಿಂದೆ ಸರಿದಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದ್ದೂ ದೊಡ್ಡ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಿತು. ಗೋಪಾಲಕೃಷ್ಣ ವಿರುದ್ಧ ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದು ಅವರು ಹೇಳಿದರು.

ಪರಾಜಿತನಾಗಿದ್ದರೂ ಗಣನೀಯ ಮತಗಳು ಬಂದಿರುವುದು ಸಂತಸ ತಂದಿದೆ ಎಂದ ಅವರು, ಈ ಮೊದಲೇ ಮಾತುಕೊಟ್ಟಂತೆ ಜಿಲ್ಲೆಯ ಜನರ ನಡುವೆ ಇದ್ದು, ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ತಮಗೆ ರೈತ ಸಂಘದ ಕಾರ್ಯಕರ್ತರು ಬೆಂಬಲ ನೀಡಿರುವುದು ಹೆಚ್ಚು ಮತಗಳಿಸಲು ಸಾಧ್ಯವಾಯಿತು. ರೈತಸಂಘದ ಕಾರ್ಯಕರ್ತರು ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಬಿಜೆಪಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್, ಸ್ಲಂಮೋರ್ಚಾ ಅಧ್ಯಕ್ಷ ವಿವೇಕ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಮೇಶ್, ಸುರೇಶ್ ಹಾಗೂ ಬಿ.ಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News