×
Ad

ಗಣಿಗಾರಿಕೆ ನಿಲ್ಲಿಸದಿದ್ದರೆ ಕೆಆರ್‍ಎಸ್‍ಗೆ ಉಳಿಗಾಲವಿಲ್ಲ: ಹೋರಾಟಗಾರ ಪ.ಮಲ್ಲೇಶ

Update: 2018-11-07 23:53 IST

ಮಂಡ್ಯ, ನ.7: ಪಾಂಡವಪುರ ತಾಲೂಕಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸದಿದ್ದರೆ ಕೆಆರ್‍ಎಸ್ ಜಲಾಶಯಕ್ಕೆ ಉಳಿಗಾಲವಿಲ್ಲ ಎಂದು ಸಮಾಜವಾದಿ ಹೋರಾಟಗಾರ ಪ.ಮಲ್ಲೇಶ ಆತಂಕ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ನಡೆಯುತ್ತಿರುವ ಪಾಂಡವಪುರ ತಾಲೂಕಿನ ಬೇಬಿಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಪ್ರಗತಿಪರ ಸಂಘಟನೆಗಳ ಜತೆ ಬುಧವಾರ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅಕ್ರಮ ಗಣಿಗಾರಿಕೆಯು ಅಷ್ಟು ಸುಲಭವಾಗಿ ನಿಲ್ಲುವುದಿಲ್ಲ. ಚುನಾವಣಾ ರಾಜಕಾರಣವೂ ಅಕ್ರಮ ಗಣಿಗಾರಿಕೆಯ ಹಣದಲ್ಲಿ ನಡೆಯುತ್ತಿರುವುದರಿಂದ ಅದಕ್ಕೆ ರಾಜಕೀಯ ಪಕ್ಷಗಳ ಒತ್ತಾಸೆಯೂ ಇದೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಲು ಜನಾಂದೋಲನ ದೊಡ್ಡಮಟ್ಟದಲ್ಲಿ ನಡೆಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಗಣಿಗಾರಿಕೆಯಿಂದ ಪ್ರಕೃತಿ ಸಂಪತ್ತು ನಾಶವಾಗುವುದಷ್ಟೇ ಅಲ್ಲದೆ, ಪರಿಸರ ಅಸಮತೋಲನವೂ ಉಂಟಾಗುತ್ತದೆ. ಜನರ ಬದುಕು ಅತಂತ್ರವಾಗುತ್ತದೆ. ಈ ದಂಧೆಯಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಅವರು ಹೇಳಿದರು.

ನ.17 ರಂದು ಸಭೆ:
ನ,17ರಂದು ಮಂಡ್ಯದ ಗಾಂಧಿಭವನದಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಮುಖಂಡರ ಸಭೆ ಕರೆದು ಚರ್ಚೆ ನಡೆಸಿ ಬೇಬಿ ಬೆಟ್ಟದ ಗಣಿಗಾರಿಕೆ ವಿರುದ್ಧ ಯಾವುದೇ ಹಂತದಲ್ಲೂ ಹೋರಾಟ ನಿಲ್ಲದಂತೆ ತೀವ್ರವಾಗಿ ನಡೆಸಲು ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ಪ.ಮಲ್ಲೇಶ್ ತಿಳಿಸಿದರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಕಳೆದ ಸೆ.25ರಂದು ಕೆಆರ್‍ಎಸ್ ಭೂಕಂಪನ ಕೇಂದ್ರದಲ್ಲಿ ದಾಖಲು ಮಾಡಲಾದ ಗಣಿಗಾರಿಕೆಗೆ ಬಳಸಿರುವ ಮೆಗ್ಗರ್ ಬ್ಲಾಸ್ಟ್‍ನಿಂದ ಉಂಟಾಗಿರುವ ಕಂಪನದ ಅಲೆಗಳು ಭೂಕಂಪನದಷ್ಟೇ ಅಪಾಯಕಾರಿಯಾಗಿವೆ ಎಂದು ದೃಢಪಟ್ಟಿದೆ. ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರವು ಜಿಲ್ಲಾಧಿಕಾರಿಗೆ ವರದಿ ನೀಡಿ, ಶಾಶ್ವತ ಗಣಿಗಾರಿಕೆ ನಿಷೇಧದ ಅಗತ್ಯವನ್ನು ಮನಗಾಣಿಸಿದೆ ಎಂದರು.

ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, ಮನುಷ್ಯನ ಸ್ವಾರ್ಥಕ್ಕೆ ಬೆಟ್ಟ-ಗುಡ್ಡ ನಾಶವಾಗುತ್ತಿದೆ. ಬಿಲಿಷ್ಠರೆ ಗಣಿಗಾರಿಕೆ ನಡೆಸುತ್ತಿದ್ದಾರೆ. ರಾಜಕಾರಣವೂ ಅವಬರ ವಶದಲ್ಲಿದೆ. ಅಧಿಕಾರಿಗಳು ರಾಜಕಾರಣಿಗಳ ಅಣತಿಯಂತೆ ವರ್ತನೆ ಮಾಡುತ್ತಿದ್ದಾರೆ. ಈ ಹಿಂದೆ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಗಣಿ ವಿರುದ್ಧ ಧನಿ ಎತ್ತಿದಾಗ ಪುಟ್ಟಣ್ಣಯ್ಯ ಅವರ ಧನಿ ಅರ್ಥೈಸಿಕೊಳ್ಳದ ಜನರು `ಇದು ಪುಟ್ಟರಾಜು-ಪುಟ್ಟಣ್ಣಯ್ಯರ ರಾಜಕೀಯದ ಭಾಗ' ಎಂದು ಮೂದಲಿಸಿದರು. ಕನ್ನಂಬಾಡಿ ಕಟ್ಟೆ ತ್ಯಾಗ, ಬಲಿದಾನದಿಂದ ಆಗಿದೆ. ಹೀಗಾಗಿ ಗಣಿ ಹೋರಾಟ ಜನರ ಕೂಗಾಟವಾಗಬೇಕಿದೆ ಎಂದು ಪ್ರತಿಪಾದಿಸಿದರು.

ಚಿಂತಕ ಪ್ರೊ.ಹುಲ್ಕೆರೆ ಮಹದೇವು, ಸಿಐಟಿಯುನ ಸಿ.ಕುಮಾರಿ, ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು, ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ತಾಲೂಕು ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ದಯಾನಂದ, ಜಿಪಂ ಮಾಜಿ ಸದಸ್ಯರಾದ ಕೆ.ಟಿ.ಗೋವಿಂದೇಗೌಡ, ಕೆ.ಬೋರಯ್ಯ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News