ಸುಂಟಿಕೊಪ್ಪ: ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ

Update: 2018-11-08 11:44 GMT

ಸುಂಟಿಕೊಪ್ಪ,ನ.8: ಟಿಪ್ಪು ಸುಲ್ತಾನ್ ವಿಚಾರದಲ್ಲಿ ಪೊನ್ನಂಪೇಟೆಯಲ್ಲಿ ಪ್ರವಾದಿ ಮಹಮ್ಮದ್‍ರನ್ನು ಅವಹೇಳನಕಾರಿಯಾಗಿ ಟೀಕಿಸಿರುವುದನ್ನು ಸುಂಟಿಕೊಪ್ಪದ ಮುಸ್ಲಿಂ ಸಮುದಾಯದ ವತಿಯಿಂದ ಕನ್ನಡ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನಾಕಾರರು ಸುಂಟಿಕೊಪ್ಪ ಕನ್ನಡ ವೃತ್ತದ ಬಳಿಗೆ ಬುಧವಾರ ಸಂಜೆ ಮೌನ ಮೆರವಣಿಗೆ ಮೂಲಕ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಜಿ.ಪಂ.ಸದಸ್ಯ ಪಿ.ಎಂ.ಲತೀಫ್ ಮಾತನಾಡಿ, ಪ್ರವಾದಿ ಮಹಮ್ಮದ್ (ಸ.ಅ) ಅವರನ್ನು ಅಂಕಣಕಾರ ಸಂತೋಷ್ ತಮ್ಮಯ್ಯ ಅವರು ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಬಗ್ಗೆ ಮಾತನಾಡುತ್ತಾ ಭಯೋತ್ಪಾದಕ ಎಂದು ಕರೆದಿರುವುದು ಖಂಡನೀಯ. ನೈಜ ಹಿಂದೂವಾಗಿದ್ದರೆ ಈ ಮಾತನ್ನು ಆತ ಹೇಳುತ್ತಿರಲಿಲ್ಲ. ಕೋಮು ಪ್ರಚೋದನೆಯ ಹೇಳಿಕೆ ಪ್ರಕಟಿಸಿದ ಪತ್ರಿಕೆಯ ಸಂಪಾದಕರನ್ನು ಹಾಗೂ ಅಂಕಣಕಾರ ಸಂತೋಷ್ ತಮ್ಮಯ್ಯನನ್ನು ಬಂಧಿಸಬೇಕು. ತಾಕತ್ತಿದ್ದರೆ ಆತ ಸರಕಾರ ಆಚರಿಸುವ ಟಿಪ್ಪು ಜಯಂತಿಯನ್ನು ತಡೆಯಲಿ ಎಂದು ಹೇಳಿದರು.

ಹಮೀದ್ ಮೌಲವಿ ಮಾತನಾಡಿ, ಇತಿಹಾಸ ತಿಳಿಯದ ಅಂಕಣಕಾರ ಸಂತೋಷ್ ತಮ್ಮಯ್ಯ ಪ್ರವಾದಿ ಮಹಮ್ಮದ್ (ಸ.ಅ) ಅವರನ್ನು ಭಯೋತ್ಪಾದನೆ ಹಿಂಸೆಗೆ ತುಲನೆ ಮಾಡಿ ಮಾತನಾಡಿದ್ದು ನಮ್ಮ ಧರ್ಮಕ್ಕೆ ಎಸಗಿದ ಅಪಚಾರವಾಗಿದೆ. ಶಾಂತಿಧೂತ ಸನ್ಮಾರ್ಗ ಸಂದೇಶ ಸಾರಿದ ಮಹಮ್ಮದ್ ಪೈಗಂಬರ್ ರನ್ನು ಪ್ರಪಂಚವೇ ಒಪ್ಪಿಕೊಂಡಿದೆ ಎಂದರು. 

ಈ ಸಂದರ್ಭ ಸುಂಟಿಕೊಪ್ಪ ಮುಸ್ಲಿಂ ಸಂಘಟನೆಯ ನಾಯಕರುಗಳಾದ ಕೆ.ಎ.ಲತೀಫ್, ಬಾಶೀತ್, ಅಣ್ಣಾಶರೀಫ್, ಇಬ್ರಾಹಿಂ ಮತ್ತಿತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News