ಕೊಡಗು ಬಂದ್ ವಿಫಲಗೊಳಿಸಲು ಎಸ್‍ಡಿಪಿಐ ಮನವಿ

Update: 2018-11-08 11:48 GMT

ಮಡಿಕೇರಿ, ನ.8: ರಾಜ್ಯ ಸರಕಾರದ ವತಿಯಿಂದ ನ.10 ರಂದು ಟಿಪ್ಪು ಜಯಂತಿ ಆಚರಿಸಲ್ಪಡುತ್ತಿದ್ದು, ಅಂದು ಕೊಡಗು ಬಂದ್ ಗೆ ಕರೆ ನೀಡಿರುವ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಕ್ರಮ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ, ಕಾನೂನಿಗೆ ವಿರುದ್ಧವಾದ ಬಂದ್ ನ್ನು ಜಿಲ್ಲೆಯ ಜನತೆ ವಿಫಲಗೊಳಿಸಬೇಕೆಂದು ಮನವಿ ಮಾಡಿದೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಟಿ.ಎಚ್.ಅಬೂಬಕರ್ ಅವರು, ನ.10ರಂದು ಜಿಲ್ಲಾಡಳಿತದಿಂದ ನಡೆಯುವ ಟಿಪ್ಪು ಜಯಂತಿ ಆಚರಣೆಗೆ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುತ್ತದೆ. ಅಂದು ಕರೆ ನೀಡಿರುವ ಕೊಡಗು ಬಂದ್‍ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆ ಈಗಾಗಲೇ ಪ್ರಕೃತಿ ವಿಕೋಪದಿಂದ ತತ್ತರಿಸಿ ಹೋಗಿದ್ದು, ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ. ಬಂದ್‍ನಿಂದಾಗಿ ಆರ್ಥಿಕ ಕ್ಷೇತ್ರ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಬಂದ್ ನಡೆಸುವುದು ಕಾನೂನು ಬಾಹಿರ ಎಂದು ಉಚ್ಛನ್ಯಾಯಾಲಯ ಹಲವು ಬಾರಿ ಸ್ಪಷ್ಪಪಡಿಸಿದ್ದರೂ, ಸಂಘ ಪರಿವಾರ ಜಿಲ್ಲೆಯಲ್ಲಿ ಶಾಂತಿ ಕದಡುವುದಕ್ಕಾಗಿಯೇ ಬಂದ್‍ಗೆ ಕರೆ ನೀಡಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮತ್ತು ಅದರ ಶಾಸಕರು ಟಿಪ್ಪು ಜಯಂತಿ ಬಗ್ಗೆ ತಮ್ಮ ನಿಲುವು ಏನೆಂಬುದನ್ನು ಬಹಿರಂಗಪಡಿಸಬೇಕು ಎಂದು ಟಿ.ಎಚ್.ಅಬೂಬಕರ್ ಒತ್ತಾಯಿಸಿದರು.

ಪ್ರಸ್ತುತ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವ ಸಂಘಪರಿವಾರ ಮತ್ತು ಬಿಜೆಪಿ ನಾಯಕರುಗಳಿಗೆ ತಮ್ಮದೇ ಪಕ್ಷದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್ ಅವರು ಅಧಿಕಾರದಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ ಟಿಪ್ಪು ಸುಲ್ತಾನನ ವೇಷ ಧರಿಸಿದ್ದು ನೆನಪಿಲ್ಲವೇ ಎಂದು ಪ್ರಶ್ನಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೂಡ ಬಿಜೆಪಿಯವರ ಸಮ್ಮುಖದಲ್ಲೇ ವಿಧಾನಸೌಧದಲ್ಲಿ ಟಿಪ್ಪುವನ್ನು ಕೊಂಡಾಡಿದಾಗ ಸುಮ್ಮನಿದ್ದ ಬಿಜೆಪಿ ನಾಯಕರು ಇದೀಗ ವಿರೋಧ ವ್ಯಕ್ತಪಡಿಸುತ್ತಿರುವುದು ಯಾಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ.10ರಂದು ಸಂಘ ಪರಿವಾರದವರು ನೀಡಿರುವ ಬಂದ್ ಕರೆಯನ್ನು ವಿಫಲಗೊಳಿಸಬೇಕು ಎಂದು ಕರೆ ನೀಡಿದ ಅವರು, ಟಿಪ್ಪು ಜಯಂತಿಗೆ ಆಗಮಿಸುವ ಎಲ್ಲರಿಗೂ ಜಿಲ್ಲಾಡಳಿತ ಸೂಕ್ತ ಭದ್ರತೆ ಒದಗಿಸಬೇಕು. ಅಲ್ಲದೆ ಬಂದ್‍ಗೆ ಕರೆ ನೀಡಿರುವ, ಪ್ರತಿಭಟಿಸುವ ಸಂಘಟನೆಗಳ ಮುಖಂಡರನ್ನು ಕೂಡಲೇ ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕು ಎಂದು ಒತ್ತಾಯಿಸಿದರು. ಬಂದ್ ನೆಪದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಐಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, 2015ರಲ್ಲಿ ನಡೆದ ಟಿಪ್ಪು ಜಯಂತಿ ಸಂದರ್ಭ ಸಂಭವಿಸಿದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಅಂದಿನ ಹಿರಿಯ ಅಧಿಕಾರಿ ಶಿಖಾ ಅವರ ನೇತೃತ್ವದಲ್ಲಿ ನಡೆದ ತನಿಖೆಯ ವರದಿಯನ್ನು ಸರಕಾರ ಯಾಕೆ ಇನ್ನು ಕೂಡ ಬಹಿರಂಗಪಡಿಸಿಲ್ಲವೆಂದು ಪ್ರಶ್ನಿಸಿದರು. ವರದಿಯಲ್ಲಿ ಗಲಭೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳ ವಿಚಾರ ಅಡಕವಾಗಿರುವ ಬಗ್ಗೆ ಸಂಶಯಗಳಿದೆ. ಲಕ್ಷಾಂತರ ರೂ. ಹಣ ಖರ್ಚು ಮಾಡಿ ನಡೆಸಿದ ತನಿಖಾ ವರದಿ ಬಹಿರಂಗಗೊಳ್ಳದೆ ಇರುವುದಕ್ಕೆ ರಾಜಕೀಯ ಪ್ರಭಾವವೇ ಕಾರಣವೆಂದು ಅವರು ಅಭಿಪ್ರಾಯಪಟ್ಟರು.

ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ ನೀಡಬೇಕೆ ಹೊರತು ಜಯಂತಿಯನ್ನು ವಿರೋಧಿಸುವವರಿಗಲ್ಲ ಎಂದು ತಿಳಿಸಿದ ಅಮೀನ್ ಮೊಹಿಸಿನ್, ಪ್ರೊಟೋಕಾಲ್ ನೆಪದಲ್ಲಿ ಟಿಪ್ಪು ವಿರೋಧಿ ಭಾಷಣಕಾರರಿಗೆ ವೇದಿಕೆ ಕಲ್ಪಿಸುತ್ತಿರುವುದು ಖಂಡನೀಯವೆಂದರು. ಸಂವಾದದ ರೀತಿಯಲ್ಲಿ ಜಯಂತಿ ಆಚರಿಸಬೇಕೆ ಹೊರತು ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಲು ಅಧಿಕಾರಿಗಳು ಮುಂದಾಗಬಾರದೆಂದು ಒತ್ತಾಯಿಸಿದರು.

ಟಿಪ್ಪು ಜಯಂತಿ ನೆಪದಲ್ಲಿ ಗಲಭೆ ಸೃಷ್ಟಿಸಲು ಯತ್ನಿಸುತ್ತಿರುವವರು ತಮ್ಮ ಷಡ್ಯಂತ್ರ ವಿಫಲವಾಗುತ್ತಿದೆ ಎನ್ನುವ ಹತಾಶೆಯಿಂದ ಪ್ರವಾದಿಗಳಿಗೆ ಅಗೌರವ ತೋರುವ ಮೂಲಕ ಪ್ರಚೋದನೆ ನೀಡುತ್ತಿದ್ದಾರೆ ಎಂದು ಅಮೀನ್ ಮೊಹಿಸಿನ್ ಆರೋಪಿಸಿದರು.

ಸಂವಿಧಾನದ 144 ನೇ ಪುಟದ 16 ನೇ ಶೆಡ್ಯೂಲ್‍ನಲ್ಲಿ ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ಉಲ್ಲೇಖಿಸಲಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರ ದೇಶದ ಸಂವಿಧಾನವನ್ನು ವಿರೋಧಿಸುತ್ತವೆಯೇ ಎಂದು ಪ್ರಶ್ನಿಸಿದರು. ಟಿಪ್ಪು ಜಯಂತಿ ಆಚರಿಸಿದರೆ ಅಧಿಕಾರ ಹೋಗುತ್ತದೆ ಎನ್ನುವ ಮೂಢ ನಂಬಿಕೆಯನ್ನು ಬಿತ್ತಲಾಗುತ್ತಿದೆ. ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದ್ದು, ಇದಕ್ಕೆ ಯಾರು ಕಾರಣ ಎಂದು ಅಮೀನ್ ಮೊಹಿಸಿನ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೆ.ಜಿ.ಪೀಟರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್, ಕಾರ್ಯದರ್ಶಿ ಕೆ.ಹೆಚ್.ಇಬ್ರಾಹಿಂ, ಹಾಗೂ ಕೋಶಾಧಿಕಾರಿ ಮನ್ಸೂರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News