×
Ad

ಮಡಿಕೇರಿ: ಎಸ್‍ಡಿಪಿಐ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Update: 2018-11-08 17:19 IST

ಮಡಿಕೇರಿ, ನ.8 : ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ‘ಜನಪರ ರಾಜಕೀಯದ ಭಾಗವಾಗಿರಿ ಎಸ್‍ಡಿಪಿಐಯೊಂದಿಗೆ ಮುಂದೆ ಸಾಗಿರಿ’ ಎಂಬ ಘೋಷಣೆಯೊಂದಿಗೆ ನವೆಂಬರ್ ತಿಂಗಳಾದ್ಯಂತ ರಾಷ್ಟ್ರಾದ್ಯಂತ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ  ಟಿ.ಎಚ್.ಅಬೂಬಕರ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮೂರು ಮಂದಿಗೆ ಸಾಂಕೇತಿಕವಾಗಿ ಸದಸ್ಯತ್ವ ನೀಡಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಈ ಒಂದು ತಿಂಗಳಿನಲ್ಲಿ ಮೂರು ಸಾವಿರ ಮಂದಿಯನ್ನು ಸದಸ್ಯರನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ ನಡೆದ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಪಕ್ಷವು ಕುಶಾಲನಗರ ಹಾಗೂ ವೀರಾಜಪೇಟೆ ಪಟ್ಟಣ ಪಂ.ಗಳ ತಲಾ ಎರಡು ಸ್ಥಾನಗಳಿಗೆ ಸ್ಪರ್ಧಿಸಿದ್ದು, ಕುಶಾಲನಗರದ ಒಂದು ವಾರ್ಡ್‍ನಲ್ಲಿ ಕೇವಲ 8 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರೆ, ಮತ್ತೊಂದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‍ನ ಹಣ ಬಲದ ಮುಂದೆ ಸೋಲು ಅನುಭವಿಸಬೇಕಾಯಿತು. ಆದರೂ ಗಣನೀಯ ಪ್ರಮಾಣದಲ್ಲಿ ಮತಗಳನ್ನು ಪಡೆಯುವಲ್ಲಿ ಪಕ್ಷ ಸಫಲವಾಗಿದೆ ಎಂದರು.

ವೀರಾಜಪೇಟೆ ಪಟ್ಟಣ ಪಂ. ನ ಒಂದು ವಾರ್ಡ್‍ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಬೆಂಬಲ ನೀಡಿದ್ದರಿಂದ ತಮ್ಮ ಪಕ್ಷದ ಅಭ್ಯರ್ಥಿ ಎರಡನೇ ಸ್ಥಾನ ಪಡೆಯುವಂತಾಯಿತು ಎಂದು ವಿಶ್ಲೇಷಿಸಿದ ಅವರು, ಆದರೂ ಪಕ್ಷ ಉತ್ತಮ ಸಾಧನೆ ಮಾಡಿದೆ ಎಂದು ಟಿ.ಎಚ್.ಅಬೂಬಕರ್ ಹೇಳಿಕೊಂಡರು.

ಇದೇ ಸಂದರ್ಭ ಎಸ್‍ಡಿಪಿಐ ಪ್ರಮುಖರು ಅಭಿಯಾನದ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News