×
Ad

ಪ್ರವಾದಿಯ ಅವಹೇಳನ ಖಂಡನೀಯ: ಎಸ್ಕೆಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ

Update: 2018-11-08 17:24 IST

ಮಡಿಕೇರಿ, ನ.8: ಟಿಪ್ಪುವನ್ನು ತೆಗಳುವ ಭರದಲ್ಲಿ ಪ್ರವಾದಿಗಳನ್ನು ಅವಹೇಳನ ಮಾಡಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕೆಂದು ಎಸ್ಕೆಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಿಸ್ಬಾಹಿ ಅವರು, ಗೋಣಿಕೊಪ್ಪಲಿನಲ್ಲಿ ನಡೆದ ಸಮಾರಂಭವೊದರಲ್ಲಿ ಸಂತೋಷ್ ತಮ್ಮಯ್ಯ ಎಂಬವರು ಟಿಪ್ಪುವಿನ ಕ್ರೌರ್ಯ ವರ್ತನೆಗೆ ಪ್ರವಾದಿಯೊಬ್ಬರು ಧಾರ್ಮಿಕ ಹೆಸರಿನಲ್ಲಿ ಹುಟ್ಟು ಹಾಕಿದ ಅಸಹನೆಯ ಸಿದ್ಧಾಂತ ಕಾರಣವೆಂದು ಆರೋಪಿಸಿದ್ದರು. ಆದರೆ, ಪ್ರವಾದಿ ಮೊಹಮ್ಮದ್ ಪೈಗಂಬರರವರು ಶಾಂತಿಯ ಸಂದೇಶ ವಾಹಕ, ಪರಧರ್ಮ ಸಹಿಷ್ಣುತೆಯ ಪ್ರತಿಪಾದಕರೆಂದು ಜಗತ್ತೆ ಒಪ್ಪಿಕೊಂಡಿದೆ. ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧೀಜಿ, ನಾರಾಯಣ ಗುರು ಮುಂತಾದ ಭಾರತ ಕಂಡ ಮಹಾನ್ ವ್ಯಕ್ತಿಗಳೆ ಪ್ರವಾದಿಗಳ ಸಿದ್ಧಾಂತವನ್ನು ಹಾಡಿಹೊಗಳಿದ್ದಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆಯೆಂದು ಪ್ರತಿಪಾದಿಸಿದರು.

ಜಾತಿ ಧರ್ಮದ ಹೆಸರಿನಲ್ಲಿ ಓರ್ವ ಮನುಷ್ಯನನ್ನು ನೋಯಿಸಿದ ಘಟನೆ ಪ್ರವಾದಿಯವರ ಜೀವನದ ಯಾವ ಹಂತದಲ್ಲೂ ಕಾಣಲು ಸಾಧ್ಯವಿಲ್ಲ. ಮಾತ್ರವಲ್ಲದೆ ಕೋಮುವಾದಕ್ಕೆ ಕರೆಯುವವನು ಕೋಮುವಾದದ ಹೆಸರಿನಲ್ಲಿ ಮರಣ ಹೊಂದುವವನು, ಕೋಮುವಾದದ ಹೆಸರಿನಲ್ಲಿ ಯುದ್ಧ ಮಾಡುವವನು ನಮ್ಮವನಲ್ಲ ಎಂದು ಸುಂದರ ವಚನಗಳ ಮೂಲಕ ಜಾಗತಿಕ ಮಟ್ಟದಲ್ಲಿ ಕೋಮು ಸೌಹಾರ್ದತೆ ಕಾಪಾಡಬೇಕೆನ್ನುವ ಸಂದೇಶವನ್ನು ಪ್ರವಾದಿಯವರು ನೀಡಿದ್ದಾರೆ. ಪ್ರವಾದಿಗಳು ಮೂಕ ಪ್ರಾಣಿಗಳೊಂದಿಗೂ ಕರುಣೆ ಮತ್ತು ಪ್ರೀತಿ ತೋರಿದ ಮಹಾನ್ ನಾಯಕರಾಗಿದ್ದು, ಅಂತಹ ಮಹಾನ್ ನಾಯಕರನ್ನು ಭಯೋತ್ಪಾದನೆ, ಅಶಾಂತಿಯೊಂದಿಗೆ ಸೇರಿಸಿ ವಿವಾದಾತ್ಮಕ ಹೇಳಿಕೆ ನೀಡಿ, ಶಾಂತಿಯುತ ಕೊಡಗಿನಲ್ಲಿ ಶಾಂತಿ ಕದಡುವ ಯತ್ನವನ್ನು ಸಂತೋಷ್ ಅವರು ಮಾಡಿದ್ದು, ಅವರನ್ನು ಪೊಲೀಸರು ಬಂಧಿಸಬೇಕೆಂದು ಅಶ್ರಫ್ ಮಿಸ್ಬಾಹಿ ಆಗ್ರಹಿಸಿದರು.

ಜಿಲ್ಲಾ ಉಪಾಧ್ಯಕ್ಷ ತಮ್ಲಿಕ್ ದಾರಿಮಿ ಮಾತನಾಡಿ, ಟಿಪ್ಪು ಜಯಂತಿ ಆಚರಿಸುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ. ಟಿಪ್ಪು ಜಯಂತಿ ಆಚರಿಸಬೇಕೆಂದಾಗಲಿ ಅಥವಾ ಅದನ್ನು ಕೈಬಿಡಬೇಕೆಂದಾಗಲಿ ನಾವು ಹೇಳುತ್ತಿಲ್ಲ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ, ಮೈಸೂರಿನ ಹುಲಿ ಎಂಬುದನ್ನು ನಾವುಗಳು ಪಠ್ಯದಲ್ಲಿ ಓದಿ ತಿಳಿದಿದ್ದು, ಇದೀಗ ಆ ಪಠ್ಯವನ್ನೆ ತಿರುಚುವ ಪ್ರಯತ್ನ ಕೆಲವರಿಂದ ನಡೆಯುತ್ತಿದೆಯೆಂದು ವಿಷಾದಿಸಿದರು.

ಪ್ರಕೃತಿ ವಿಕೋಪದ ಸಂದರ್ಭ ಕೊಡಗು ಜಿಲ್ಲೆಯಲ್ಲಿ ಪ್ರತಿಯೊಬ್ಬರು ಜಾತಿ ಭೇದವನ್ನು ಬಿಟ್ಟು ಪರಸ್ಪರ ಒಬ್ಬರನ್ನೊಬ್ಬರು ರಕ್ಷಿಸಿದ್ದಾರೆ. ಆ ಮೂಲಕ ಕೊಡಗಿನಲ್ಲಿ ಶಾಂತಿ ಸೌಹಾರ್ದತೆಯ ಸಂದೇಶವನ್ನು ಜಿಲ್ಲೆಯ ಜನತೆ ಸಾರಿದ್ದಾರೆ. ಇದೀಗ ಅಂತಹ ಶಾಂತಿಯನ್ನು ಕದಡುವ ಪ್ರಯತ್ನ ಕೆಲವರಿಂದ ನಡೆಯುತ್ತಿದ್ದು, ರಾಜಕೀಯಕ್ಕೆ ಧರ್ಮವನ್ನು ಬೆರೆಸುವ ಪ್ರವೃತ್ತಿ ಮತಾಂಧರಿಮದ ನಡೆಯುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಮಿತಿ ಸದಸ್ಯ ಇಕ್ಬಾಲ್ ಮುಸ್ಲಿಯಾರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಆರಿಫ್ ಪೈಝಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News