ಪ್ರವಾದಿಯ ಅವಹೇಳನ: ಕ್ಷಮೆಯಾಚನೆಗೆ ಕೊಡಗು ಜಿಲ್ಲಾ ಸುನ್ನೀ ಯುವಜನ ಸಂಘ ಒತ್ತಾಯ

Update: 2018-11-08 11:59 GMT

ಮಡಿಕೇರಿ, ನ.8: ಟಿಪ್ಪು ಜಯಂತಿ ಆಚರಿಸುವ ರಾಜ್ಯ ಸರಕಾರದ ಕಾರ್ಯಕ್ರಮವನ್ನ ವಿರೋಧಿಸುವ ನೆಪದಲ್ಲಿ ಪ್ರವಾದಿಯನ್ನು ಅವಹೇಳನ ಮಾಡಿದ ವ್ಯಕ್ತಿ ಹಾಗೂ ಅದನ್ನು ಪ್ರಕಟಿಸಿದ ಪತ್ರಿಕೆಯ ಸಂಪಾದಕರು ಕ್ಷಮೆ ಕೇಳುವ ಮೂಲಕ ಜಿಲ್ಲೆಯ ಮುಸ್ಲಿಂ ಸಮೂಹದ ಭಾವನೆಗಳನ್ನ ಗೌರವಿಸಬೇಕು ಎಂದು ಸುನ್ನಿ ಯುವಜನ ಸಂಘದ ಜಿಲ್ಲಾ ಘಟಕ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ಯು.ಹನೀಫ್ ಸಖಾಫಿ ಅವರು, ಟಿಪ್ಪು ಜಯಂತಿ ಇಸ್ಲಾಮಿನ ಆಚರಣೆಯಲ್ಲ. ಅಂತಹ ಜಯಂತಿಯ ಬೇಡಿಕೆಯನ್ನು ಮುಸ್ಲಿಮರು ಇಟ್ಟಿದ್ದೂ ಇಲ್ಲ. ಅದು ಕೇವಲ ಸರ್ಕಾರಿ ಕಾರ್ಯಕ್ರಮವಾಗಿದ್ದು, ಈ ವಿವಾದದಲ್ಲಿ ಪತ್ರಿಕಾ ಅಂಕಣಕಾರರೊಬ್ಬರು ವಿನಾಕಾರಣ ಪ್ರವಾದಿಯನ್ನು ಎಳೆದು ತರುವ ಮೂಲಕ ಮುಸ್ಲಿಮರ ಮನನೋಯಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.

ಇಸ್ಲಾಂ ಮತ್ತು ಪ್ರವಾದಿಯವರ ಸಿದ್ಧಾಂತಗಳು ಶಾಂತಿ ಸೌಹಾರ್ದತೆಯ ಉದಾತ್ತ ಸಂದೇಶಗಳೆಂದು ಶ್ರೇಷ್ಠ ಹಿಂದೂ ಧರ್ಮ ಬೋಧಕ ಸ್ವಾಮಿ ವಿವೇಕಾನಂದರಿಂದ ಹಿಡಿದು ಹಾಲಿ ಪ್ರಧಾನಿ ನರೇಂದ್ರ ಮೋದಿ ತನಕ ಸರ್ವರು ಸಮ್ಮತಿಸಿದ ಸತ್ಯವಾಗಿದೆ. ಯಾವುದೇ ಅಲ್ಪ ಜ್ಞಾನಿಗಳ ಅಸಂಬದ್ಧ ಹೇಳಿಕೆಗಳಿಂದ ಆ ಸಿದ್ಧಾಂತ ಎಂದಿಗೂ ಕೆಡುವುದಿಲ್ಲ. ಎಲ್ಲಾ ವಿರೋಧಗಳ ನಡುವೆಯೇ ಇಸ್ಲಾಂ 14 ಶತಮಾನಗಳಿಂದ ಬೆಳೆದು ನಿಂತಿದ್ದು, ಜಗತ್ತಿನಲ್ಲಿ ಇಂದಿಗೂ ಅತೀ ಹೆಚ್ಚು ಪ್ರಚಾರವಾಗುತ್ತಿರುವ ಧರ್ಮವೆಂದು ದಾಖಲಾಗಿದೆಯೆಂದು ಹನೀಫ್ ಸಖಾಫಿ ಪ್ರತಿಪಾದಿಸಿದರು.

ಧರ್ಮವೊಂದನ್ನು ಹೀಯಾಳಿಸುವ ಮೂಲಕ ಪುಕ್ಕಟೆ ಪ್ರಚಾರ ಪಡೆಯುವುದು ಕೆಲವು ಪ್ರಚಾರ ಪ್ರಿಯರ ತೆವಲಾಗಿದ್ದು, ಸಮಾಜದಲ್ಲಿ ಶಾಂತಿ ಸಂರಕ್ಷಣೆಗಾಗಿ ಜವಾಬ್ದಾರಿಯುತವಾಗಿ ವರ್ತಿಸಬೇಕಾದ ಪತ್ರಿಕೆಗಳು ಇಂತಹ ಬೇಜವಾಬ್ದಾರಿ ಹೇಳಿಕೆಗಳಿಗೆ ಪ್ರಾಧಾನ್ಯತೆ ನೀಡಿರುವುದು ಪತ್ರಿಕಾ ಧರ್ಮಕ್ಕೆ ಹೇಳಿಸಿದ್ದಲ್ಲ. ಈ ಮೂಲಕ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನ ವಿಫಲವಾಗಿದ್ದು, ಇದರಿಂದ ನಿರಾಸೆಗೊಂಡಿರುವ ಕೆಲವು ಕೋಮುವಾದಿ ಮನಸ್ಸುಗಳು ಮುಸ್ಲಿಮರನ್ನು ಬಲವಂತವಾಗಿ ಎಳೆದು ತಂದು ಕೋಮು ಸಂಘರ್ಷ ಹುಟ್ಟು ಹಾಕಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ ಅವರು, ಮುಸ್ಲಿಮರು ಭಾವುಕತೆಗೆ ಒಳಗಾಗದೆ ಪ್ರಬುದ್ಧತೆಯಿಂದ ಶಾಂತಿ ಕಾಪಾಡುವ ಮೂಲಕ ಸಮಾಜ ದ್ರೋಹಿಗಳ ಕುತಂತ್ರವನ್ನು ವಿಫಲಗೊಳಿಸಬೇಕೆಂದು ಕರೆ ನೀಡಿದರು.

ಸಮಾಜದಲ್ಲಿ ಶಾಂತಿ ಕದಡುವ ವ್ಯಕ್ತಿ ಹಾಗೂ ಶಕ್ತಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ದುಷ್ಕೃತ್ಯಗಳನ್ನು ಸರ್ಕಾರವೆ ನಿಯಂತ್ರಿಸಬೇಕೆಂದು ಒತ್ತಾಯಿಸಿದರು. ಪ್ರವಾದಿಯವರಿಗೆ ಅಗೌರವ ನೀಡಿದ ಹೇಳಿಕೆ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿಯೂ ಪಿ.ಯು.ಹನೀಫ್ ಸಖಾಫಿ ತಿಳಿಸಿದರು.

ಎಸ್‍ಎಂಎ ಜಿಲ್ಲಾಧ್ಯಕ್ಷ ಹಾಗೂ ಜಿ.ಪಂ ಸದಸ್ಯ ಪಿ.ಎಂ.ಅಬ್ದುಲ್ ಲತೀಫ್ ಮಾತನಾಡಿ, ಕೋಮು ಸೌಹಾರ್ದತೆಗೆ ವಿರುದ್ಧವಾಗಿ ಕುರಾನ್‍ನಲ್ಲಿ ಪ್ರವಾದಿಯವರು ಎಲ್ಲಿಯಾದರು ಪ್ರಸ್ತಾಪಿಸಿದ್ದಲ್ಲಿ ಅದನ್ನು ಸಾಬೀತುಪಡಿಸುವಂತೆ ಅಂಕಣಕಾರ ಸಂತೋಷ್ ತಮ್ಮಯ್ಯ ಅವರಿಗೆ ಸವಾಲು ಹಾಕಿದರು. 

ಟಿಪ್ಪು ಜಯಂತಿಯನ್ನು ಮುಸಲ್ಮಾನರು ಮಸೀದಿ, ಮದರಸ, ಹಾಲ್ ಅಥವಾ ಮನೆಗಳಲ್ಲಿ ಆಚರಿಸುವುದಿಲ್ಲ. ಟಿಪ್ಪು ಜಯಂತಿ ಬೇಕೆಂದು ಮುಸಲ್ಮಾನರು ಬೇಡಿಕೆ ಇಟ್ಟಿಲ್ಲ. ಸರಕಾರ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಈ ನೆಪದಲ್ಲಿ ಕೋಮು ಭಾವನೆಯನ್ನು ಕೆಣಕುವ ಕೆಲಸ ಯಾಕೆ ಎಂದು ಪ್ರಶ್ನಿಸಿದರು.

ಪ್ರಚೋದನೆ ಅಥವಾ ಭಯೋತ್ಪಾದನೆಯನ್ನು ಕುರಾನ್ ಬೆಂಬಲಿಸುವುದಿಲ್ಲ, ಇತರ ಧರ್ಮಗಳನ್ನು ಅಗೌರವದಿಂದ ಕಾಣುವಂತೆಯೂ ಅದು ಹೇಳುವುದಿಲ್ಲ. ಕುರಾನ್‍ನ ಕನ್ನಡದ ಅವತರಣಿಕೆಯಿದ್ದು, ಅದನ್ನು ಸಂತೋಷ್ ತಮ್ಮಯ್ಯ ಓದಿ ಅರಿತುಕೊಳ್ಳಲಿ ಎಂದು ಲತೀಫ್ ಒತ್ತಾಯಿಸಿದರು.

ಪ್ರವಾದಿ ಅವರಿಗೆ ಅಗೌರವ ತೋರಿದ ಸಂತೋಷ್ ತಮ್ಮಯ್ಯ ಅವರ ವಿರುದ್ಧ ನಮ್ಮ ಹೋರಾಟವೇ ಹೊರತು ಹಿಂದೂಗಳ ವಿರುದ್ಧವಲ್ಲವೆಂದು ಅವರು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‍ವೈಎಸ್ ಜಿಲ್ಲಾಧ್ಯಕ್ಷ ಎಂ.ವೈ.ಅಬ್ದುಲ್ ಹಫೀಳ್ ಸಅದಿ, ಕೋಶಾಧಿಕಾರಿ ಪಿ.ಎ.ಯೂಸುಫ್ ಕೊಂಡಂಗೇರಿ, ಹಾಗೂ ಜಿಲ್ಲಾ ನೇತಾರ ಅಬ್ದುಲ್ ಹಮೀದ್ ಮುಸ್ಲಿಯಾರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News