ಮಡಿಕೇರಿ: ನ.11 ರಂದು ತಾಜುಲ್ ಉಲಮಾ ಮಸೀದಿ ಉದ್ಘಾಟನೆ

Update: 2018-11-08 12:30 GMT

ಮಡಿಕೇರಿ, ನ.8 : ಮೂರ್ನಾಡು ಸಮೀಪದ ಐಕೊಳ ತಾಜ್ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಾಜುಲ್ ಉಲಮಾ ಮಸೀದಿಯ ಉದ್ಘಾಟನಾ ಸಮಾರಂಭ ನ.11 ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಕೇರಳದ ಅಸ್ಸಯ್ಯಿದ್ ಸುಹೈಲ್ ಅಸ್ಸಖಾಫ್ ತಂಗಳ್ ಅವರು ಮಸೀದಿಯನ್ನು ಲೋಕಾರ್ಪಾಣೆಗೊಳಿಸಲಿದ್ದಾರೆ ಎಂದು ಮಸೀದಿ ಸಮಿತಿಯ ಕಾರ್ಯದರ್ಶಿ ಎಂ.ಜಿ.ಅಬ್ದುಲ್ ಲತೀಫ್ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಸೀದಿ ಉದ್ಘಾಟನಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಕೊಡಗು ಸಹಾಯಕ ಖಾಝಿ ಕೆ.ಎ.ಮುಹಮ್ಮದ್ ಮುಸ್ಲಿಯಾರ್, ಕೊಡಗು ಜಂಇಯ್ಯತುಲ್ ಉಲಮಾ ಅಧ್ಯಕ್ಷ ಶರಫುಲ್‍ ಉಲಮಾ ಅಬ್ಬಾಸ್ ಉಸ್ತಾದ್, ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಕೆ.ಯೂಸುಫ್ ಹಾಜಿ, ಸಯ್ಯದ್ ಮುಹಮ್ಮದ್ ಜಮಲುಲ್ಲೈಲಿ ತಂಙಳ್ ಕಡಲುಂಡಿ, ಕೊಂಡಂಗೇರಿ ಮುದರ್ರಿಸ್ ಅಬ್ದುಲ್ ಹಕೀಮ್ ತ್ವಯ್ಯಿಬ್, ಉಮರ್ ಸಖಾಫಿ, ಆಹಾರ ಮತ್ತು ಹಜ್ ಖಾತೆ ಸಚಿವ ಝಮೀರ್ ಅಹ್ಮದ್, ವಸತಿ ಮತ್ತು ನಾಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸೇರಿದಂತೆ ಹಲವು ಮಂದಿ ಗಣ್ಯ ವ್ಯಕ್ತಿಗಳು, ಸೆಯ್ಯಿದರು, ಉಲಮಾ-ಉಮರಾ ಪಂಡಿತ ನೇತಾರರು ಭಾಗವಹಿಸಲಿದ್ದಾರೆ ಎಂದು ಅಬ್ದುಲ್ ಲತೀಫ್ ತಿಳಿಸಿದರು.

ಇದೇ ಸಂದರ್ಭ ಅತಿವೃಷ್ಟಿ ಹಾನಿಯಿಂದ ಸಂತ್ರಸ್ತರಾದ ಕುಟುಂಬಗಳಿಗೆ ಆಶ್ರಯ ನೀಡಲು ಭೂದಾನ ಮಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಎಂ.ಲತೀಫ್ ಹಾಗೂ ದರ್ಸ್ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿರುವ ದಕ್ಷಿಣ ಕನ್ನಡದ ಉಮರ್ ಸಖಾಫಿ ಅವರನ್ನು ಕೂಡ ಸನ್ಮಾನಿಸಲಾಗುವುದು.

ಹಿನ್ನೆಲೆ ಗಾಯಕರಾದ ಅಬ್ದುಲ್ ಸಮದ್ ಅಮಾನಿ ಮತ್ತು ಸಂಗಡಿಗರಿಂದ ಬುರ್ದಾ ಆಲಾಪನೆ, ನಹತೇ ಶರೀಫ್ ಗಾಯಕರಾದ ಬೆಂಗಳೂರಿನ ಅಹ್ಮದ್‍ ನಬೀಲ್ ಬರಕಾತಿ, ಮುಹೀನುದ್ದೀನ್ ಖಾದ್ರಿ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ಅಬ್ದುಲ್ ಲತೀಫ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಕೆ.ಕೆ.ಅಬ್ದುಲ್ ಆಸೀಫ್ ಉಪಾಧ್ಯಕ್ಷ ಶಾಹುಲ್ ಹಾಜಿ ಹಾಗೂ ಕೋಶಾಧಿಕಾರಿ ಪಿ.ಎ.ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News