ಬಿಜೆಪಿಯ ಸೋಲು ಪ್ರಧಾನಿ ಮೋದಿಯ ಸರ್ವಾಧಿಕಾರಕ್ಕೆ ಜನತೆ ನೀಡಿದ ಉತ್ತರ: ವಿ.ಎಸ್.ಉಗ್ರಪ್ಪ

Update: 2018-11-08 12:58 GMT

ಬೆಂಗಳೂರು, ನ.8: ರಾಜ್ಯದಲ್ಲಿ ನಡೆದ ಐದು ಉಪಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿರುವುದು ಪ್ರಧಾನಿ ನರೇಂದ್ರ ಮೋದಿಯ ಸುಳ್ಳು ಹಾಗೂ ಸರ್ವಾಧಿಕಾರಕ್ಕೆ ಜನತೆ ನೀಡಿರುವ ತಕ್ಕ ಪ್ರತ್ಯುತ್ತರ ಎಂದು ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದರು.

ಬಳ್ಳಾರಿ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ಮೌರ್ಯ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದ ಜನತೆ ಉಪಚುನಾವಣೆಯ ಮೂಲಕ ಪ್ರಧಾನಿ ಮೋದಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಬಳ್ಳಾರಿಯ ನನ್ನ ಗೆಲುವು ಮತದಾರರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅರ್ಪಿಸುತ್ತೇನೆಂದು ತಿಳಿಸಿದರು.

ಬಳ್ಳಾರಿ ಜನ ಅತಿ ಹೆಚ್ಚು ಮತಗಳಿಂದ ನನ್ನನ್ನ ಗೆಲ್ಲಿಸಿದ್ದಾರೆ. ಪಕ್ಷದ ಕಾರ್ಯಕರ್ತರು, ನಾಯಕರ ಪರಿಶ್ರಮದಿಂದ ದಾಖಲೆ ಮತಗಳಲ್ಲಿ ಗೆಲುವು ಸಾಧಿಸಿದ್ದೇನೆ. ಬಳ್ಳಾರಿ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಕಡಿಮೆ ಸಮಯವಿದ್ದರೂ, ಅಭಿವೃದ್ಧಿ ಕಾರ್ಯಕ್ಕೆ ಸಮಯದ ಮಿತಿ ಎದುರಾಗಲ್ಲ ಎಂದು ಅವರು ಹೇಳಿದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ಮೇಲೆ ಸಿಸಿಬಿ ದಾಳಿ ಮಾಡಿರುವುದು ರಾಜಕೀಯ ಪ್ರೇರಿತವಲ್ಲ. ಜನರ ದುಡ್ಡನ್ನು ವಂಚನೆ ಮಾಡಿರುವ ಸಂಬಂಧ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸುತ್ತಿದೆ. ಇದರಲ್ಲಿ ಸಮ್ಮಿಶ್ರ ಸರಕಾರದ ಯಾವುದೆ ಪಾತ್ರವಿಲ್ಲವೆಂದು ಅವರು ಸ್ಪಷ್ಟ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News