ಬೆಳಗಾವಿ: ಸಾಲ ವಸೂಲಾತಿ ಪ್ರಕ್ರಿಯೆ ನಿಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

Update: 2018-11-08 14:10 GMT

ಬೆಳಗಾವಿ, ನ.8: ಆಕ್ಸಿಸ್ ಬ್ಯಾಂಕಿನಿಂದ ಬೆಳೆ ಸಾಲ ಪಡೆದುಕೊಂಡು ರಾಜ್ಯ ಸರಕಾರದ ಬೆಳೆಸಾಲ ಮನ್ನಾ ಅರ್ಹತೆ ವ್ಯಾಪ್ತಿಗೆ ಬರುವ ರೈತರ ಸಾಲ ವಸೂಲಾತಿಗೆ ಬ್ಯಾಂಕು ಯಾವುದೇ ರೀತಿಯ ಪ್ರಕ್ರಿಯೆ ಮುಂದುವರಿಸಬಾರದು ಹಾಗೂ ಇತರೆ ಕೃಷಿ ಉದ್ದೇಶಿತ ಸಾಲ ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ 180 ರೈತರ ಸಾಲ ಮರುಪಾವತಿಗೆ ಒಂದೇ ಸಲ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಎಕ್ಸಿಸ್ ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆಕ್ಸಿಸ್ ಬ್ಯಾಂಕಿನಿಂದ ಸಾಲ ಪಡೆದುಕೊಂಡ ಕೆಲವು ರೈತರಿಗೆ ಕೋಲ್ಕತ್ತಾ ನ್ಯಾಯಾಲಯದಿಂದ ಬಂಧನ ವಾರೆಂಟ್ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಆಕ್ಸಿಸ್ ಬ್ಯಾಂಕಿನ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ 180 ರೈತರು ಆಕ್ಸಿಸ್ ಬ್ಯಾಂಕಿನಿಂದ ಬೆಳೆಸಾಲ ಸೇರಿದಂತೆ ಇತರೆ ಕೃಷಿ ಉದ್ದೇಶಿತ ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಇದರಲ್ಲಿ ಶೇ.60 ರಷ್ಟು ಪ್ರಕರಣಗಳು 2009 ಕ್ಕಿಂತ ಹಳೆಯದಾಗಿದ್ದು, ಉಳಿದವು 2009ನೇ ಸಾಲಿನ ನಂತರದ ಪ್ರಕರಣಗಳಾಗಿವೆ ಎಂದು ಅವರು ಹೇಳಿದರು. ಶೇ.50 ರಷ್ಟು ಪ್ರಕರಣಗಳಲ್ಲಿ ರೈತರು ಬೆಳೆಸಾಲ ಪಡೆದುಕೊಂಡಿದ್ದರೆ ಇನ್ನುಳಿದ ಪ್ರಕರಣಗಳಲ್ಲಿ ಟ್ರ್ಯಾಕ್ಟರ್ ಖರೀದಿ, ಪೈಪ್‌ಲೈನ್ ಅಳವಡಿಕೆ, ಭೂ ಅಭಿವೃದ್ಧಿ ಸೇರಿದಂತೆ ಇತರೆ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಸಾಲ ಪಡೆದುಕೊಂಡಿರುತ್ತಾರೆ ಎಂದು ಅವರು ತಿಳಿಸಿದರು.

ಕೆಲವರಿಗೆ ನ್ಯಾಯಾಲಯದಿಂದ ನೋಟಿಸ್ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ನಿರ್ದೇಶನದ ಪ್ರಕಾರ ಬ್ಯಾಂಕಿನ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಸರಕಾರ ಹಾಗೂ ಜಿಲ್ಲಾಡಳಿತ ರೈತರ ಹಿತರಕ್ಷಣೆಗೆ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಬ್ಯಾಂಕುಗಳು ಸಾಲ ವಸೂಲಾತಿ ನೆಪದಲ್ಲಿ ರೈತರಿಗೆ ತೊಂದರೆ ಉಂಟು ಮಾಡಲು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಕಟ್‌ಬಾಕಿದಾರರಾಗಿರುವ ರೈತರ ಸಾಲ ವಸೂಲಾತಿಗೆ ನ್ಯಾಯಾಲಯದ ಮೊರೆ ಹೋಗಿರುವ ಆಕ್ಸಿಸ್ ಬ್ಯಾಂಕಿನ ಕ್ರಮದ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ, ಈ ಸಂದರ್ಭದಲ್ಲಿ ನಿಯಮಾವಳಿಗಳನ್ನು ಸಮರ್ಪಕವಾಗಿ ಪಾಲಿಸದಿರುವ ಬಗ್ಗೆ ಬ್ಯಾಂಕಿನ ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಸಿ.ಎಚ್. ಸುಧೀರ್‌ ಕುಮಾರ್ ರೆಡ್ಡಿ, ಕೃಷಿ ಸಾಲ ಮಂಜೂರು ಮಾಡುವ ಸಂದರ್ಭದಲ್ಲಿ ಬ್ಯಾಂಕಿನ ಅಧಿಕಾರಿಗಳು ರೈತರಿಂದ ಖಾಲಿ ಚೆಕ್ ಪಡೆದುಕೊಂಡು ನಿಯಮಾವಳಿ ಉಲ್ಲಂಘಿಸಿರುವುದು ಹಾಗೂ ಬಡ್ಡಿ ವಿಧಿಸುವ ಸಂದರ್ಭದಲ್ಲಿ ಬಡ್ಡಿದರದಲ್ಲಿ ಏಕರೂಪತೆ ಅನುಸರಿಸದಿರುವ ಕೆಲವೊಂದು ಪ್ರಕರಣಗಳ ಬಗ್ಗೆ ಬ್ಯಾಂಕಿನ ಅಧಿಕಾರಿಗಳ ಗಮನ ಸೆಳೆದರು.

ಈ ಸಂದರ್ಭದಲ್ಲಿ ಮಾತನಾಡಿದ ಆಕ್ಸಿಸ್ ಬ್ಯಾಂಕ್ ಉಪಾಧ್ಯಕ್ಷ ಪ್ರಶಾಂತ ಶಾ,ಬ್ಯಾಂಕಿನ ಕಾನೂನು ಪರಿಣಿತ ತಂಡದ ಜತೆ ಸಮಾಲೋಚನೆ ನಡೆಸಿ ಪ್ರಕರಣದ ವ್ಯಾಪ್ತಿಯನ್ನು ಬದಲಾಯಿಸುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೂ ಮನವಿ ಮಾಡಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಆಕ್ಸಿಸ್ ಬ್ಯಾಂಕಿನಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಲಾಗಿರುವುದರಿಂದ ರೈತರ ಸಾಲ ಮಾತ್ರವಲ್ಲ, ಎಲ್ಲ ಬಗೆಯ ಸಾಲಕ್ಕೆ ಸಂಬಂಧಿಸಿದ ಪ್ರಕರಣಗಳ ನ್ಯಾಯಾಂಗ ವ್ಯಾಪ್ತಿಯನ್ನು ಕೋಲ್ಕತ್ತಾ ನಗರಕ್ಕೆ ಸೀಮಿತಗೊಳಿಸಲಾಗಿದೆ. ಇದರಲ್ಲಿ ರೈತರಿಗೆ ವಿನಾಕರಣ ತೊಂದರೆ ಅಥವಾ ಕಿರುಕುಳ ನೀಡುವ ಉದ್ದೇಶವಿಲ್ಲ ಎಂದು ಆಕ್ಸಿಸ್ ಬ್ಯಾಂಕಿನ ದಕ್ಷಿಣ ವಲಯ ಕೃಷಿ ಸಾಲ ವಿಭಾಗದ ಮುಖ್ಯಸ್ಥ ದಯಾನಂದ ಸ್ಪಷ್ಟಪಡಿಸಿದರು.

ಸಮಗ್ರ ಮಾಹಿತಿ ಒದಗಿಸಲು ಸೂಚನೆ: ಬ್ಯಾಂಕಿನಿಂದ ಸಾಲ ಪಡೆದುಕೊಂಡು ಸುಸ್ತಿದಾರರಾಗಿರುವ ಜಿಲ್ಲೆಯ 180 ರೈತರ ಹೆಸರು, ಕೃಷಿ ಸಾಲ ಸೇರಿದಂತೆ ಇತರೆ ಸಾಲದ ಸಾಲದ ಸ್ವರೂಪ, ಮೊತ್ತ, ಬಡ್ಡಿ, ಸಾಲದ ಅವಧಿ, ಕಟ್ಟಬೇಕಿರುವ ಒಟ್ಟು ಮೊತ್ತ ಇತ್ಯಾದಿ ವಿವರ ಒಳಗೊಂಡ ಸಮಗ್ರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಅಲ್ಲದೆ, ರಾಜ್ಯ ಸರಕಾರದ ಬೆಳೆಸಾಲ ಮನ್ನಾ ಯೋಜನೆಗೆ ಅರ್ಹತೆ ಹೊಂದಿರುವ ರೈತರ ಪಟ್ಟಿಯನ್ನೂ ಪ್ರತ್ಯೇಕವಾಗಿ ನೀಡುವಂತೆ ಜಿಲ್ಲಾಧಿಕಾರಿ, ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ

ಬೆಳಗಾವಿ ಜಿಲ್ಲೆಯ 180 ರೈತರೂ ಸೇರಿದಂತೆ ರಾಜ್ಯದ ಒಟ್ಟು 744 ರೈತರ ಸಾಲ ವಸೂಲಾತಿಗೆ ಕಾನೂನು ಕ್ರಮಕ್ಕೆ ಬ್ಯಾಂಕು ಮುಂದಾಗಿತ್ತು. ಇದರಿಂದ ರೈತರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ಸರಕಾರದ ನಿರ್ದೇಶನದ ಮೇರೆಗೆ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

-ಪ್ರಶಾಂತ ಶಾ, ಆಕ್ಸಿಸ್ ಬ್ಯಾಂಕ್ ಉಪಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News