×
Ad

ಹನೂರು: ದೀಪಾವಳಿ ಪ್ರಯುಕ್ತ ಸಂಭ್ರಮದ ಮಹಾರಥೋತ್ಸವ

Update: 2018-11-08 21:05 IST

ಹನೂರು,ನ.8: ತಾಲೂಕಿನ ಮಲೈ ಮಲೇಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಹಬ್ಬದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

ಬೆಳಿಗ್ಗೆ 4 ಗಂಟೆಯಿಂದ ಮಹದೇಶ್ವರ ಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆ, ಪೂಜಾ ಕಾರ್ಯಗಳು ಜರುಗಿದವು. ಬೇಡಗಂಪಣ ಜನಾಂಗದ 101 ಹೆಣ್ಣು ಮಕ್ಕಳು ಕಳಸ ಹಿಡಿದು ಆರತಿ ಎತ್ತಿ ತೇರಿಗೆ ಸ್ವಾಗತಿಸಿದರು. ಬಳಿಕ ರಥೋತ್ಸವದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಸಾಲೂರು ಮಠಾಧೀಶರಾದ ಗುರುಸ್ವಾಮಿಗಳು ಚಾಲನೆ ನೀಡಿದರು. 

8 ಗಂಟೆಗೆ ಆರಂಭವಾದ ರಥೋತ್ಸವ ಬೆಳಿಗ್ಗೆ 9 ಗಂಟೆಯವರೆಗೆ ನಡೆಯಿತು. ಈ ಸಂದರ್ಭ ಹರಕೆ ಹೊತ್ತ ಮಾದಪ್ಪನ ಭಕ್ತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಧವಸ ಧಾನ್ಯಗಳು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ರಥೋತ್ಸವದಲ್ಲಿ ತೇರಿಗೆ ಎಸೆದು ಹರಕೆ ಸಮರ್ಪಿಸಿದರು.

ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ದೇವಸ್ಥಾನ, ಲಾಡು ಕೌಂಟರ್, ರಥೋತ್ಸವ ನಡೆಯುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡಿತ್ತು.

ಈ ವೇಳೆ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ.ಗಾಯತ್ರಿ, ಉಪ ಕಾರ್ಯದರ್ಶಿ ರಾಜಶೇಖರ ಮೂರ್ತಿ ಮತ್ತು ಅಧೀಕ್ಷಕ ಬಸವರಾಜು ಹಾಗೂ ಪ್ರಾಧಿಕಾರದ ಎಲ್ಲಾ ನೌಕರ ವರ್ಗದವರು ಮತ್ತು ಅರ್ಚಕ ವೃಂದದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News