ಸಹಕಾರ ಸಪ್ತಾಹಕ್ಕೆ ಮುಖ್ಯಮಂತ್ರಿ ಚಾಲನೆ: ಸಚಿವ ಬಂಡೆಪ್ಪ ಕಾಶೆಂಪೂರ್

Update: 2018-11-08 15:41 GMT

ಬೀದರ್, ನ. 8: ಸಹಕಾರ ಸಪ್ತಾಹ ಅಂಗವಾಗಿ ನ.14ರಂದು ನಡೆಯಲಿರುವ ರೈತರೊಂದಿಗಿನ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಾಗತ ಕೋರುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಗುರುವಾರ ನಗರದ ಹಬ್ಸಿಕೋಟೆ ಅತಿಥಿ ಗೃಹದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ ಅವರು, ನ.14ರ ಬೆಳಗ್ಗೆ 11.50ಕ್ಕೆ ಬೀದರ್ ಬಸ್ ನಿಲ್ದಾಣದ ಆವರಣದಿಂದ ಪ್ರಮುಖ ರಸ್ತೆಗಳ ಮೂಲಕ ನೆಹರೂ ಕ್ರೀಡಾಂಗಣದವರೆಗೆ ಸಹಕಾರಿ ಜಾಥಾವನ್ನು ನಡೆಸಲಾಗುವುದು.

ಮಧ್ಯಾಹ್ನ 12.30ಕ್ಕೆ ಸಹಕಾರಿ ಸಪ್ತಾಹಕ್ಕೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದು, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಆ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಯ ಪ್ರಗತಿಪರ ರೈತರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯುವ ಈ ರೈತ ಸ್ಪಂದನ ಕಾರ್ಯಕ್ರಮಕ್ಕೆ ಬೀದರ್ ಜಿಲ್ಲೆಯಿಂದಲೇ ಸಿಎಂ ಕುಮಾರಸ್ವಾಮಿ ಚಾಲನೆ ನೀಡಲಿದ್ದು, ಈ ಮಹತ್ವದ ಕಾರ್ಯಕ್ರಮವು ವೈವಿಧ್ಯಪೂರ್ಣವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವೇಳೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಉಮಾಕಾಂತ್, ನಗರಸಭೆ ಪೌರಾಯುಕ್ತ ಮನೋಹರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವಗೆ, ಸಂಸ್ಕೃತಿ ಇಲಾಖೆಯ ರಾಜಶೇಖರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News