ಹನೂರು: ಕಾಡು ಹಂದಿ ದಾಳಿ; ರೈತ ಮಹಿಳೆಗೆ ಗಾಯ
ಹನೂರು,ನ.8: ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ರೈತ ಮಹಿಳೆ ತೀವ್ರ ಗಾಯಗೊಂಡ ಘಟನೆ ವರದಿಯಾಗಿದೆ.
ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ ಮಹಿಳೆ ಜಯಮ್ಮ (50) ಗಾಯಾಳು ಮಹಿಳೆ. ಗುರುವಾರ ಬೆಳಿಗ್ಗೆ 11ರ ಸಮಯದಲ್ಲಿ ತನ್ನ ಜಮೀನಿನಲ್ಲಿ ಕಳೆ ಕೀಳುತ್ತಿದ್ದಾಗ ಒಂಟಿ ಕಾಡುಹಂದಿ ಏಕಾಏಕಿ ದಾಳಿ ನಡೆಸಿದ್ದು, ಜಯಮ್ಮ ಮತ್ತು ಜೊತೆಯಲ್ಲಿದ್ದ ಮೊಮ್ಮಗಳ ಮೇಲೆ ದಾಳಿ ನಡೆಸಿದೆ. ಮೊಮ್ಮಗಳ ಬಲಕೈಗೂ ಸಹ ಹಂದಿ ಕಚ್ಚಿದ್ದೂ, ತೀವ್ರ ಗಾಯಗೊಂಡ ಜಯಮ್ಮರಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಉಪ ವಿಭಾಗ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸೂಕ್ತ ಪರಿಹಾರಕ್ಕೆ ಒತ್ತಾಯ: ರೈತ ಮಹಿಳೆ ಜಯಮ್ಮ ತೀರಾ ಬಡವರಾಗಿದ್ದು, ಕಾಡುಹಂದಿ ದಾಳಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ಪಡೆದು ಗಾಯಾಳು ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘಟನೆ ಒತ್ತಾಯಿಸಿದೆ.