ಗಬ್ಬುನಾರುತ್ತಿದೆ ಚಿಕ್ಕಮಗಳೂರು ನಗರದ ಸಂತೆ ಮಾರುಕಟ್ಟೆ: ಅಸಮರ್ಪಕ ಕಸ ವಿಲೇವಾರಿಗೆ ಸಾರ್ವಜನಿಕರ ಆಕ್ರೋಶ

Update: 2018-11-08 16:56 GMT

ಚಿಕ್ಕಮಗಳೂರು, ನ.8: ನಗರದ ಸ್ವಚ್ಛತೆ ಕಾಪಾಡುವಲ್ಲಿ ನಗರಸಭೆ ಆಡಳಿತ ಉತ್ತಮ ಕೆಲಸ ಮಾಡುತ್ತಿದೆ ಎಂದು ಸದಸ್ಯರು ಒಂದೆಡೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ನಗರದ ಹೃದಯ ಭಾಗದಲ್ಲಿರುವ ಸಂತೇ ಮೈದಾನ ತ್ಯಾಜ್ಯ ವಸ್ತುಗಳಿಂದ ತುಂಬಿ ತುಳುಕುತ್ತಾ ಗಬ್ಬು ನಾರುತ್ತಿದ್ದರೂ ಸಂತೇ ಮೈದಾನದ ಆವರಣದಲ್ಲಿ ದಿಂಡಿಯಾಗಿ ಬಿದ್ದಿರುವ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸದ ಬಗ್ಗೆ ಸಾರ್ವಜನಿಕರು, ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ಸಂತೇಮೈದಾನ ಇಡೀ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರ ತರಕಾರಿ, ಮೀನು, ಮಾಂಸ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸುವ ಪ್ರಮುಖ ವ್ಯಾಪಾರಿ ಕೇಂದ್ರವಾಗಿ ಬೆಳೆದಿದೆ. ಅಗತ್ಯ ಮೂಲ ಸೌಕರ್ಯಗಳಿಲ್ಲದಿದ್ದರೂ ಸಂತೇ ವ್ಯಾಪಾರಿಗಳು ಇಲ್ಲಿ ವಾರಕ್ಕೊಮ್ಮೆ ಸಂತೆ ವ್ಯಾಪಾರ ನಡೆಸುತ್ತಾರೆ. ಪ್ರತೀ ಬುಧವಾರದಂದು ಇಲ್ಲಿ ಸಂತೆ ನಡೆಯುತ್ತಿದ್ದು, ಸಂತೆ ನಡೆದ ಮಾರನೇ ದಿನ ಇಡೀ ಆವರಣ ತರಕಾರಿ ಮತ್ತಿತರ ತ್ಯಾಜ್ಯಗಳ ರಾಶಿಯಿಂದ ತುಂಬಿ ತುಳುಕುತ್ತಿರುತ್ತದೆ. ವಿಪರ್ಯಾಸವೆಂದರೆ ಹೀಗೆ ಎಲ್ಲೆಂದರಲ್ಲಿ ಬಿದ್ದಿರುವ ತರಕಾರಿ ತ್ಯಾಜ್ಯ ವಸ್ತುಗಳು ವಾರ ಕಳೆದರೂ ವಿಲೇವಾರಿಯಾಗುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಸಂತೆಯ ಮಾರನೇ ದಿನ ಇಡೀ ಸಂತೆ ಮಾರುಕಟ್ಟೆಯ ಚರಂಡಿಗಳು ತ್ಯಾಜ್ಯ ವಸ್ತುಗಳಿಂದ ತುಂಬಿರುತ್ತವೆ. ಇದರಿಂದಾಗಿ ಚರಂಡಿಗಳಲ್ಲಿನ ತ್ಯಾಜ್ಯ ನೀರು ಸರಾಗವಾಗಿ ಹರಿಯದೇ ಕೊಳಚೆ ನೀರು ಸಂಗ್ರಹವಾಗಿ ಇಡೀ ಆವರಣ ಸೊಳ್ಳೆಗಳ ಬೀಡಾಗಿದೆ. ಸಂತೆ ಮಾರುಕಟ್ಟೆಗೆ ಹೊಂದಿಕೊಂಡಂತೆ ನಗರಸಭೆಯ ಮೀನು, ಮಾಂಸದ ವಾಣಿಜ್ಯ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಈ ಮಳಿಗೆಗೆಳ ಕೊಳಚೆ ನೀರು ಕೂಡ ಚರಂಡಿಗಳ ಮೂಲಕವೇ ಹರಿಯ ಬಿಡುತ್ತಿರುವುದರಿಂದ ಇಡೀ ಮಾರುಕಟ್ಟೆ ಆವರಣ ಗಬ್ಬು ನಾರುತ್ತಿದೆ. ಸಂತೆ ವ್ಯಾಪಾರಕ್ಕೆ ಬರುವ ಗ್ರಾಹಕರು ಹಾಗೂ ವ್ಯಾಪಾರಿಗಳು ಗಬ್ಬು ವಾಸನೆ ಸಹಿಸಿಕೊಂಡೇ ವ್ಯಾಪಾರ ಮಾಡಬೇಕಾಗಿದೆ. ಸಂತೆ ಮಾರುಕಟ್ಟೆಗೆ ಹೊಂದಿಕೊಂಡಂತೆ ಶಂಕರಪುರ, ತಮಿಳು ಕಾಲನಿ ಬಡಾವಣೆ ಇದ್ದು, ಇಲ್ಲಿನ ನಿವಾಸಿಗಳೂ ಪ್ರತಿನಿತ್ಯ ಗಬ್ಬು ವಾಸನೆ ಹಾಗೂ ಸೊಳ್ಳೆಗಳ ಕಾಟವನ್ನು ಸಹಿಸಿಕೊಳ್ಳಬೇಕಿದೆ. ಮಾರುಕಟ್ಟೆ ಮೂಲಕ ಪ್ರತಿದಿನ ಹಾದು ಹೋಗುವ ಸಾರ್ವಜನಿಕರು ಹಾಗೂ ನಿವಾಸಿಗಳು ಚರಂಡಿಗಳ ಗಬ್ಬು ವಾಸನೆ ಸಹಿಸದೇ ಮೂಗು ಮುಚ್ಚಿಕೊಂಡು ತಿರುಗಾಡುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿವೆ. 

ನಗರಸಭೆ ಆಡಳಿತ ನಗರದ ತ್ಯಾಜ್ಯ ಸಂಗ್ರಹಣೆಗೆ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಿದ್ದು, ಈ ಸಂಸ್ಥೆ ಆಟೊ ಟಿಪ್ಪರ್ ಗಳ ಮೂಲಕ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುತ್ತಿದೆ. ಈ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ನಗರಸಭೆ ಸದಸ್ಯರು ಪ್ರತೀ ಸಭೆಗಳಲ್ಲಿ ಹೇಳುತ್ತಾರಾದರೂ ಸಂತೆ ಮೈದಾನದಲ್ಲಿನ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂಬುವುದು ನಾಗರಿಕರ ದೂರಾಗಿದ್ದು, ಚರಂಡಿ ಸ್ವಚ್ಛತೆ ಹಾಗೂ ಪ್ರತಿದಿನ ಇಲ್ಲಿನ ತ್ಯಾಜ್ಯ ವಿಲೇವಾರಿಗೆ ನಗರಸಭೆ ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ದೂರುತ್ತಾರೆ.

ಸಂತೆ ಮಾರುಕಟ್ಟೆ ಆವರಣದಲ್ಲಿ ಶೌಚಾಲಯ ಹೊರತು ಪಡಿಸಿ ಅಗತ್ಯ ಮೂಲ ಸೌಕರ್ಯಗಳಿಲ್ಲ ಎಂಬುದು ಸಂತೆ ವ್ಯಾಪಾರಿಗಳ ಅಳಲಾಗಿದ್ದು, ಮಾರುಕಟ್ಟೆಯಲ್ಲಿ ಮಳೆ, ಬಿಸಿಲಿಗೆ ರಕ್ಷಣೆ ಇಲ್ಲದಿರುವುದರಿಂದ ಮಳೆ ಬಂದರಂತೂ ವ್ಯಾಪಾರಿಗಳ ಪಾಡು ದೇವರಿಗೆ ಪ್ರೀತಿ ಎಂಬ ಸ್ಥಿತಿ ಇದೆ. ವ್ಯಾಪಾರಿಗಳು ಸಂತೆ ದಿನದಂತೆ ತಾವೇ ಟೆಂಟ್ ನಿರ್ಮಿಸಿಕೊಂಡು ವ್ಯಾಪಾರ ಮಾಡಬೇಕಿದ್ದು, ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲು ಇಲ್ಲಿ ಯಾವುದೇ ಸೌಕರ್ಯಗಳಿಲ್ಲ. ಮಾರುಕಟ್ಟೆಗೆ ಆಧುನಿಕತೆಗೆ ತಕ್ಕಂತೆ ಹೊಸದಾಗಿ ಮೂಲ ಸೌಕರ್ಯಗಳನ್ನು ಒದಗಿಸಿ, ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಿದಲ್ಲಿ ಸಂತೆ ಮಾರುಕಟ್ಟೆ ಆವರಣದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಸಾಧ್ಯ. ಇಲ್ಲಿನ ಹಳೆಯ ಮಾರುಕಟ್ಟೆ ಹಾಗೂ ಹರಕು ಮುರುಕಿನ ಚರಂಡಿಗಳಿಂದಾಗಿ ಇಡೀ ಮಾರುಕಟ್ಟೆ ಆವರಣ ಗಬ್ಬುನಾರುವಂತಾಗಿದೆ. ಇಲ್ಲಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕೆಂಬುದು ಸಂತೇ ವ್ಯಾಪಾರಿಗಳ ಆಗ್ರಹವಾಗಿದೆ.

ನಗರಸಭೆಗೆ ನಾವು ಶುಲ್ಕವನ್ನು ತಪ್ಪದೇ ಪಾವತಿಸುತ್ತಿದ್ದೇವೆ. ಆದರೆ ಮಾರುಕಟ್ಟೆ ಆವರಣದಲ್ಲಿನ ಸ್ವಚ್ಛತೆ ಕಾಪಾಡುವಲ್ಲಿ ನಗರಸಭೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪ್ರತೀ ವಾರ ಮೂಗು ಮುಚ್ಚಿಕೊಂಡೇ ವ್ಯಾಪಾರ ಮಾಡಬೇಕಿದೆ. ಇದರಿಂದ ಗ್ರಾಹಕರೂ ತೊಂದರೆ ಅನುಭವಿಸುತ್ತಿದ್ದಾರೆ. ಮಳೆ ಬಂದರಂತೂ ಇಲ್ಲಿನ ವಾತಾವರಣ ತೀರಾ ಹದಗೆಡುತ್ತದೆ. ಕೆಸರಿನಲ್ಲೇ ನಿಂತು ವ್ಯಾಪಾರ ಮಾಡಬೇಕಿದೆ. ಈ ಮಾರುಕಟ್ಟೆಗೆ ಮೂಲಸೌಕರ್ಯ ಒದಗಿಸುವುದರಿಂದ ವ್ಯಾಪಾರಿಗಳಿಗೆ, ಗ್ರಾಹಕರಿಗೆ ವ್ಯಾಪಾರ ಮಾಡಲು ಅನುಕೂಲವಾಗುತ್ತದೆ. ಮಾರುಕಟ್ಟೆಯ ಸ್ವಚ್ಛತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
- ಸುರೇಶ್ ನಾಯ್ಕ, ಸಂತೆ ವ್ಯಾಪಾರಿ

Writer - ಕೆ.ಎಲ್. ಶಿವು

contributor

Editor - ಕೆ.ಎಲ್. ಶಿವು

contributor

Similar News