ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಿಂದ ಅನಂತಕುಮಾರ್ ಹೆಗಡೆ ಹೆಸರು ಕೈಬಿಟ್ಟ ಕಾರವಾರ ಜಿಲ್ಲಾಡಳಿತ

Update: 2018-11-08 17:00 GMT

ಕಾರವಾರ, ನ.8: 10ರಂದು ನಡೆಯಲಿರುವ ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಪ್ರಸ್ತಾಪಿಸುವುದು ಬೇಡ ಎಂದು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರಿಂದ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಹೆಸರನ್ನು ಕೈಬಿಡಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. 

ಟಿಪ್ಪು ಜಯಂತಿಯ ಒಂದು ವಾರದ ಮೊದಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವಿಜಯಕುಮಾರ್ ತೋರಗಲ್ ಮೂಲಕ ಪತ್ರ ಬರೆದು ತಮ್ಮ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಪ್ರಸ್ತಾಪಿಸುವುದು ಬೇಡ ಎಂದು ಸೂಚನೆ ನೀಡಿದ್ದರು.
 
ಸಚಿವ ಅನಂತಕುಮಾರ್ ಹೆಗಡೆ ಅವರ ಪತ್ರಕ್ಕೆ ಮನ್ನಣೆ ನೀಡಿರುವ ಜಿಲ್ಲಾಡಳಿತ ಈ ಬಾರಿಯ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರನ್ನು ತೆಗೆದು ಹಾಕಿದೆ. ಶಿಷ್ಟಾಚಾರಕ್ಕೂ ತಮ್ಮ ಹೆಸರನ್ನು ಹಾಕದಂತೆ ಅವರು ಪತ್ರದಲ್ಲಿ ಉಲ್ಲೇಖಿಸಿರುವುದರಿಂದ ಅವರ ಹೆಸರನ್ನು ಆಮಂತ್ರಣ ಪತ್ರಿಕೆ ಪ್ರಸ್ತಾಪಿಸದೆ ಕೈಬಿಡಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟನೆಯಲ್ಲಿ ತಿಳಿಸಿದೆ.

ಸಚಿವ ಪತ್ರದಲ್ಲೆನಿದೆ?

ಕರ್ನಾಟಕ ಸಮ್ಮಿಶ್ರ ಸರಕಾರವು ಜನತೆಯ ತೀವ್ರ ವಿರೋಧದ ನಡುವೆಯೂ ನ.10ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಣೆಗೆ ನಿರ್ಧರಿಸಿದೆ. ಇದನ್ನು ನಾನು ನಿಷ್ಠುರವಾಗಿ ಖಂಡಿಸುತ್ತಿದ್ದೇನೆ. ಟಿಪ್ಪು ಜಯಂತಿಗೆ ಪ್ರಾರಂಭದಿಂದಲೂ ಸಾರ್ವಜನಿಕರು ಹಾಗೂ ನಾಡಿನ ವಿಚಾರವಾದಿಗಳು ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಟಿಪ್ಪು ಕನ್ನಡ ವಿರೋಧಿ. ಮತ್ತು ಹಿಂದೂ ವಿರೋಧಿಯಾಗಿರುವುದು ಇತಿಹಾಸದಿಂದ ತಿಳಿಯುತ್ತದೆ. ಇದಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿರೋಧ ಹಾಗೂ ಪ್ರತಿಭಟನೆಗಳು ನಡೆದು ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದೆ. ಈ ರೀತಿಯ ಒಬ್ಬ ಸಮಾಜ ಘಾತುಕ ವ್ಯಕ್ತಿಯನ್ನು ವೈಭವೀಕರಿಸಿ ಆತನ ಜಯಂತಿಯನ್ನು ಆಚರಿಸಲು ಹೊರಟಿರುವುದು ನಿಜಕ್ಕೂ ಖಂಡನೀಯ. ಹೀಗಾಗಿ ಶಿಷ್ಟಾಚಾರದ ಪ್ರಕಾರ ನನ್ನ ಹೆಸರನ್ನು ನಮೂದಿಸಬೇಡಿ ಎಂದು ಅವರು ತಮ್ಮ ವಿಶೇಷ ಕರ್ತವ್ಯಾಧಿಕಾರಿ ವಿಜಯಕುಮಾರ್ ತೋರಗಲ್ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬೆಳಗಾವಿ, ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಅವರು ಪತ್ರ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News