ಟಿಪ್ಪು ಜಯಂತಿಗೆ ಕೊಡಗು ಕಾಂಗ್ರೆಸ್‍ನ ವಿವಿಧ ಘಟಕಗಳ ಬೆಂಬಲ

Update: 2018-11-08 17:53 GMT
ಅಬ್ದುಲ್ ರಜಾಕ್, ಕೆ.ಎ.ಯಾಕುಬ್, ಶಾಫಿ

ಮಡಿಕೇರಿ, ನ.8: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲುವ ಆತಂಕವನ್ನು ಎದುರಿಸುತ್ತಿರುವ ಬಿಜೆಪಿ ಟಿಪ್ಪು ಜಯಂತಿಯನ್ನು ನೆಪ ಮಾಡಿಕೊಂಡು ಶಾಂತಿ, ಸೌಹಾರ್ದತೆಯ ಕೊಡಗು ಜಿಲ್ಲೆಯಲ್ಲಿ ಅಶಾಂತಿಯನ್ನು ಮೂಡಿಸಲು ಮುಂದಾಗಿದ್ದು, ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳು ಆರೋಪಿಸಿವೆ.

ಪತ್ರಿಕಾ ಹೇಳಿಕೆ ನೀಡಿರುವ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ.ಯಾಕುಬ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್ ಹಾಗೂ ಯುವ ಕಾಂಗ್ರೆಸ್ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ ಸರಕಾರ ನಡೆಸುತ್ತಿರುವ ಟಿಪ್ಪು ಜಯಂತಿಗೆ ಬೆಂಬಲ ವ್ಯಕ್ತಪಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

ಟಿಪ್ಪು ಜಯಂತಿಯನ್ನು ಆಚರಿಸಲು ಕೊಡಗಿನಿಂದ ಯಾರೂ ಅರ್ಜಿ ಹಾಕಿಲ್ಲ. ಆದರೆ ಒಂದು ಜವಾಬ್ದಾರಿಯುತ ಸರಕಾರ ಒಬ್ಬ ವ್ಯಕ್ತಿಯ ಜಯಂತಿಯನ್ನು ಆಚರಣೆ ಮಾಡುತ್ತದೆ ಎಂದರೆ ಆ ಬಗ್ಗೆ ಸುದೀರ್ಘ ಚಿಂತನೆಗಳು ನಡೆದಿರುತ್ತದೆ ಎಂದು ಅರ್ಥ. ಸರಕಾರ ಒಳ್ಳೆಯ ಉದ್ದೇಶವನ್ನಿಟ್ಟುಕೊಂಡೆ ಟಿಪ್ಪು ಜಯಂತಿಯನ್ನು ಆಚರಿಸುತ್ತಿದ್ದು, ಬಿಜೆಪಿ ಮಂದಿ ಕ್ಷುಲ್ಲಕ ರಾಜಕಾರಣಕ್ಕಾಗಿ ಇದನ್ನು ವಿರೋಧಿಸುತ್ತಿದ್ದಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ವಿಚಾರದ ಕುರಿತು ಪರ, ವಿರೋಧ ಹೇಳಿಕೆಗಳನ್ನು ನೀಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಟಿಪ್ಪು ಜಯಂತಿಯನ್ನು ನೆಪ ಮಾಡಿಕೊಂಡು ಗೋಣಿಕೊಪ್ಪದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಅವರಿಗೆ ಅಗೌರವ ತೋರಿರುವುದು ಖಂಡನೀಯವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಭಾವನೆಯನ್ನು ಕೆರಳಿಸಿ ಸಮಾಜದಲ್ಲಿ ಗಲಭೆಯನ್ನು ಉಂಟು ಮಾಡಲು ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಯಾಕುಬ್, ಅಬ್ದುಲ್ ರಜಾಕ್ ಹಾಗೂ ಶಾಫಿ ಒತ್ತಾಯಿಸಿದ್ದಾರೆ.

ಶಾಂತಿ, ಸೌಹಾರ್ದತೆಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಅಶಾಂತಿ, ಅಸಹಿಷ್ಣುತೆ, ಕೋಮುಗಲಭೆ ಸೃಷ್ಟಿಸುವ ಸಾಧ್ಯತೆಯಿದೆ. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿರುವ ಕೇರಳದ ಮತೀಯ ಅಲ್ಪಸಂಖ್ಯಾತರ ವಿರುದ್ಧ ಕೊಡವ ಜನಾಂಗವನ್ನು ಎತ್ತಿ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಪ್ರಚೋದನಾಕಾರಿ ಭಾಷಣಗಳಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಅಲ್ಲದೆ ಟಿಪ್ಪು ಜಯಂತಿಯನ್ನು ವಿರೋಧಿಸುವ ಭರದಲ್ಲಿ ಕೋಮು ಸೌಹಾರ್ದತೆಗೆ ಆದ್ಯತೆ ನೀಡುತ್ತಿರುವ ಇಲ್ಲಿನ ಮುಸ್ಲಿಂ ಜನಾಂಗವನ್ನು ಗುರಿ ಮಾಡು ಎಲ್ಲಾ ಸಾಧ್ಯತೆಗಳಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಪ್ರವಾದಿ ಅವರಿಗೆ ಅಗೌರವ ಉಂಟು ಮಾಡುವ ಹೇಳಿಕೆಯನ್ನು ಕೊಡಗಿನ ಪತ್ರಿಕೆಯೊಂದು ಪ್ರಕಟಿಸಿದೆ ಎಂದು ಆರೋಪಿಸಿರುವ ಯಾಕುಬ್, ಅಬ್ದುಲ್ ರಜಾಕ್ ಹಾಗೂ ಶಾಫಿ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಹೇಳನ ಮಾಡಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News