ಚಿಕ್ಕಮಗಳೂರು: ಟಿಪ್ಪು ಜಯಂತಿ ಆಚರಣೆ ಖಂಡಿಸಿ ಬಿಜೆಪಿ ಧರಣಿ; ಕಾರ್ಯಕರ್ತರ ಬಂಧನ, ಬಿಡುಗಡೆ

Update: 2018-11-09 12:57 GMT

ಚಿಕ್ಕಮಗಳೂರು, ನ.9: ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನಿಷೇಧಾಜ್ಞೆ ನಡುವೆ ಪ್ರತಿಭಟನೆ ನಡೆಸಲು ಮುಂದಾದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.

ಶುಕ್ರವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕೃತಿ ಹಿಡಿದು ರಸ್ತೆಗಿಳಿದ ಕಾರ್ಯಕರ್ತರು ರಾಜ್ಯ ಸರಕಾರ ಮತ್ತು ಟಿಪ್ಪು ಸುಲ್ತಾನ್ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಲು ಮುಂದಾದರು. ಈ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕಾಗಿಮಿಸಿ ಡಿವೈಎಸ್ಪಿ ಚಂದ್ರಶೇಖರ್ ಹಾಗೂ ನಗರ ವೃತ್ತ ನಿರೀಕ್ಷಕ ನಿರಂಜನ್ ಪ್ರತಿಭಟನಾಕಾರರಿಗೆ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಇದೆ. ಈ ಸಂದರ್ಭದಲ್ಲಿ ನಡೆಸುವಂತಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಇದನ್ನು ಲೆಕ್ಕಿಸದ ಪ್ರತಿಭಟನಾಕಾರರು ಮುಂದಾದರು. ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆ ಪ್ರತಿಭಟನಕಾರರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪ್ರತಿಕೃತಿಯನ್ನು ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಲ್ಲಿಯೇ ಇಟ್ಟು ದಹಿಸಲು ಮುಂದಾಗಿ, ಸಮ್ಮಿಶ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ಮುಂದಾಗುವ ವಿಷಯ ತಿಳಿದಿದ್ದ ಪೊಲೀಸ್ ಇಲಾಖೆ ಬಿಜೆಪಿ ಕಚೇರಿ ಸುತ್ತಮುತ್ತ ಬೀಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಬಿಜೆಪಿ ಕಚೇರಿ ಇರುವ ಎರಡು ರಸ್ತೆಗಳಿಗೆ ಬ್ಯಾರಿಕೇಡ್‍ಗಳನ್ನು ಹಾಕಿ ಯಾರೂ ಹೊರ ಹೋಗದಂತೆ ಮಾಡಲಾಗಿತ್ತು. ಪ್ರತಿಭಟನಕಾರರಗಿಂತ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಿ.ಆರ್.ಪ್ರೇಮ್ ಕುಮಾರ್ ಮಾತನಾಡಿ, ರಾಜ್ಯದ ಸಮ್ಮಿಶ್ರ ಸರಕಾರ ಕುಂಟ ಮತ್ತು ಕುರುಡ ಸರಕಾರವಾಗಿದ್ದು, ಎರಡೂ ಪಕ್ಷಗಳಲ್ಲಿ ಹೊಂದಾಣಿಕೆಯಿಲ್ಲ. ಟಿಪ್ಪು ಜಯಂತಿಯನ್ನು ವಿರೋಧಿಸುವ ಒಂದು ಗುಂಪು ಸರಕಾರದೊಳಗಿದೆ ಎಂದ ಅವರು, ಇದೊಂದು ಓಟ್‍ಬ್ಯಾಂಕ್ ರಾಜಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಬೆಳವಾಡಿ ರವೀಂದ್ರ ಮಾತನಾಡಿ, ಕೊಡವರು, ಕ್ರಿಶ್ಚಿಯನ್ನರು, ಹಿಂದೂಗಳನ್ನು ಕೊಂದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಮುಂದಾಗಿರುವುದು ಅತ್ಯಂತ ಕೆಟ್ಟ ನಿರ್ಧಾರ. ಯಾರೂ ಸಹ ಟಿಪ್ಪು ಜಯಂತಿ ಆಚರಿಸುವಂತೆ ಕೇಳಿಕೊಂಡಿರಲಿಲ್ಲ. ಕೇವಲ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಉದ್ದೇಶದಿಂದ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ ಎಂದರು.

ನಗರಸಭಾ ಉಪಾಧ್ಯಕ್ಷ ಸುಧೀರ್, ನಗರ ಬಿಜೆಪಿ ಅಧ್ಯಕ್ಷ ಕೋಟೆ ರಂಗನಾಥ್ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್, ಜಿ.ಪಂ. ಸದಸ್ಯ ಹಿರಗಯ್ಯ, ಮುಖಂಡರಾದ ಮಧುಕುಮಾರ್ ರಾಜ್ ಅರಸ್, ಕೆ.ಎಸ್.ಪುಷ್ಪರಾಜ್, ವೀಣಾಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News