×
Ad

ಸ್ವಯಂ ಪ್ರೇರಿತ ಕೊಡಗು ಬಂದ್‍ಗೆ ಕರೆ: ಹಲವೆಡೆ ಪೊಲೀಸ್ ಸರ್ಪಗಾವಲು

Update: 2018-11-09 22:26 IST

ಮಡಿಕೇರಿ, ನ.9 : ಟಿಪ್ಪು ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಕೊಡಗು ಪೊಲೀಸ್ ಇಲಾಖೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ವಿವಿಧ ಪೊಲೀಸ್ ತುಕುಡಿಗಳು ಮಡಿಕೇರಿ ನಗರದಲ್ಲಿ ಪಥಸಂಚಲನ ನಡೆಸಿದವು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಅವರ ನೇತೃತ್ವದಲ್ಲಿ ನಗರದ ವಿವಿಧ ರಸ್ತೆ ಹಾಗೂ ಬಡಾವಣೆಗಳಲ್ಲಿ ಪಥಸಂಚಲ ನಡೆಸಿದ ಶಸ್ತ್ರ ಸಜ್ಜಿತ ಪೊಲೀಸರು ಜನರಲ್ಲಿ ನಿರಾತಂಕವನ್ನು ಮೂಡಿಸಿದರು. ಟಿಪ್ಪು ಜಯಂತಿಯ ಬಂದೋಬಸ್ತ್ ಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ 1500 ರಿಂದ 2 ಸಾವಿರ ಪೊಲೀಸ್ ಸಿಬ್ಬಂದಿಗಳು ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಚಾಮರಾಜನಗರದ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು ಜಿಲ್ಲೆಗೆ ನಿಯುಕ್ತಿಮಾಡಲಾಗಿದೆ, 6 ಡಿವೈಎಸ್‍ಪಿ, 20 ಪೊಲೀಸ್ ಇನ್ಸ್ ಪೆಕ್ಟರ್, 46 ಸಬ್ ಇನ್ಸ್ ಪೆಕ್ಟರ್, 104 ಎಎಸ್‍ಐ, 300 ಹೋಂ ಗಾಡ್ರ್ಸ್, 850 ಪೊಲೀಸ್ ಸಿಬ್ಬಂದಿಗಳು, 21 ಡಿಎಆರ್ ತುಕಡಿಗಳು, 10 ಕೆಎಸ್‍ಆರ್‍ಪಿ ತುಕಡಿಗಳನ್ನು ಹಾಗೂ ರ್ಯಾಪಿಡ್ ಆಕ್ಷನ್ ಫೋರ್ಸ್‍ನ್ನು ನಿಯುಕ್ತಿಗೊಳಿಸಲಾಗಿದೆ. ಜಿಲ್ಲೆಯ ಮಡಿಕೇರಿ ನಗರ, ಸೋಮವಾರಪೇಟೆ ಹಾಗೂ ವಿರಾಜಪೇಟೆ ಪಟ್ಟಣದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಮೂರೂ ತಾಲೂಕುಗಳಲ್ಲಿ ಪೊಲೀಸ್ ಸರ್ಪಗಾವಲಿದೆ. 

ಬಂದ್‍ಗೆ ಕರೆ
ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ನ.10 ರಂದು ಸ್ವಯಂ ಪ್ರೇರಿತ ಕೊಡಗು ಬಂದ್‍ಗೆ ಕರೆ ನೀಡಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಂದ್ ನಡೆಯಲಿದೆ ಎಂದು ಸಮಿತಿಯ ಸಂಚಾಲಕ ಅಭಿಮನ್ಯುಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News