ಶಿವಮೊಗ್ಗ: ಕಾಮಗಾರಿ ಪೂರ್ಣಗೊಂಡರೂ ವಾಹನಗಳ ಸಂಚಾರಕ್ಕೆ ಮುಕ್ತವಾಗದ ಸೇತುವೆ

Update: 2018-11-09 17:02 GMT

ಶಿವಮೊಗ್ಗ, ನ. 9: ಶಿವಮೊಗ್ಗ-ರಾಮನಗರ ಜಿಲ್ಲಾ ಹೆದ್ದಾರಿಯ ಸಹ್ಯಾದ್ರಿ ನಗರ ಬಡಾವಣೆಯ ಚೌಡಮ್ಮ ದೇವಾಲಯದ ಬಳಿ, ಲೋಕೋಪಯೋಗಿ ಇಲಾಖೆಯು ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆ ಕಾಮಗಾರಿ ಪೂರ್ಣಗೊಂಡು ಐದಾರು ತಿಂಗಳುಗಳೇ ಕಳೆದಿದೆ. ಆದರೆ ಇಲ್ಲಿಯವರೆಗೂ ವಾಹನಗಳ ಸಂಚಾರಕ್ಕೆ ಸೇತುವೆ ಮುಕ್ತವಾಗಿಲ್ಲ. 

ಈ ಕುರಿತಂತೆ ಈಗಾಗಲೇ ಪಿಡಬ್ಲ್ಯೂಡಿ ಇಲಾಖೆಯ ಗಮನಕ್ಕೆ ತರಲಾಗಿದೆ. ಸೇತುವೆಯ ಎರಡೂ ಕಡೆ ಸಂಪರ್ಕ ರಸ್ತೆ ನಿರ್ಮಿಸಿ, ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದೆವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. 

ಪೂರ್ಣಗೊಂಡಿದೆ: ಸಹ್ಯಾದ್ರಿ ನಗರ ಹಾಗೂ ಸೋಮಿನಕೊಪ್ಪ ಕೆ.ಹೆಚ್.ಬಿ. ಪ್ರೆಸ್ ಕಾಲೋನಿಯ ಬಳಿಯಿದ್ದ ಸೇತುವೆಗಳು ದುಃಸ್ಥಿತಿಯಲ್ಲಿದ್ದವು. ಜೊತೆಗೆ ಕಿರಿದಾಗಿದ್ದವು. ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಈ ಕಾರಣದಿಂದ ಈ ಎರಡು ಸ್ಥಳಗಳಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ರಾಜ್ಯ ಸರ್ಕಾರ ಸೇರಿದಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಅರ್ಪಿಸಿದ್ದರು. 

ನಿವಾಸಿಗಳ ಹೋರಾಟದ ಫಲವಾಗಿ ಹಾಗೂ ಈ ಹಿಂದಿನ ಪಿಡಬ್ಲ್ಯೂಡಿ ಅಧೀಕ್ಷಕ ಎಂಜಿನಿಯರ್ ಬಾಲಕೃಷ್ಣರವರ ಕಾಳಜಿಯಿಂದ, ಎರಡೂ ಕಡೆ ಹೊಸ ಸೇತುವೆ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅನುದಾನ ಬಿಡುಗಡೆಯಾಗಿತ್ತು. ಎರಡೂ ಕಡೆಯು ಈಗಾಗಲೇ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಸೋಮಿನಕೊಪ್ಪ ಬಳಿಯ ಸೇತುವೆಯಲ್ಲಿ ವಾಹನಗಳ ಸಂಚಾರ ಕೂಡ ಆರಂಭವಾಗಿದೆ. 

ಆರಂಭವಾಗಿಲ್ಲ: ಆದರೆ ಸಹ್ಯಾದ್ರಿ ನಗರ ಬಳಿಯ ಸೇತುವೆ ಮಾತ್ರ, ಇಲ್ಲಿಯವರೆಗೂ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿಲ್ಲವಾಗಿದೆ. ಸದ್ಯ ಸೇತುವೆ ನಿರ್ಮಾಣಗೊಳಿಸಲಾಗಿರುವ ಜಾಗ ತನಗೆ ಸೇರಿದ್ದೆಂದು ಖಾಸಗಿ ವ್ಯಕ್ತಿಯೋರ್ವರು ಪ್ರತಿಪಾದಿಸುತ್ತಿದ್ದಾರೆ. ಅವರ ಅಡ್ಡಿಯ ಕಾರಣದಿಂದಲೇ ವಾಹನಗಳ ಸಂಚಾರಕ್ಕೆ ಸೇತುವೆ ಮುಕ್ತವಾಗಿಲ್ಲವೆಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ. 

'ಸೇತುವೆಯ ಎರಡು ಕಡೆ ಕೆಲ ಮೀಟರ್ ದೂರದಷ್ಟು ಸಂಪರ್ಕ ರಸ್ತೆ ನಿರ್ಮಾಣವಾಗಬೇಕು. ತತ್‍ಕ್ಷಣವೇ ಈ ನಿಟ್ಟಿನಲ್ಲಿ ಪಿಡಬ್ಲ್ಯೂಡಿ ಇಲಾಖೆ ಕ್ರಮಕೈಗೊಳ್ಳಬೇಕು. ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ' ಎಂದು ಪ್ರಗತಿಪರ ಹೋರಾಟಗಾರ ಜಿ.ಎಂ.ಸುರೇಶ್‍ಬಾಬುರವರು ಎಚ್ಚರಿಕೆ ನೀಡಿದ್ದಾರೆ. 

"ಹೋರಾಟ ಅನಿವಾರ್ಯ"
'ಸಹ್ಯಾದ್ರಿ ನಗರ ಬಡಾವಣೆ ಬಳಿಯಿರುವ ಸೇತುವೆ ಕಿರಿದಾಗಿರುವ ಕಾರಣದಿಂದ ಅಪಘಾತಗಳು ಸರ್ವೇಸಾಮಾನ್ಯ ಎಂಬಂತಾಗಿತ್ತು. ಕಳೆದ ಕೆಲ ವರ್ಷಗಳ ಹಿಂದೆ ಸೇತುವೆ ಬಳಿ ನಡೆದ ಅಪಘಾತದಲ್ಲಿ ಯುವತಿಯೋರ್ವರು ಅಸುನೀಗಿದ್ದರು. ಈ ವೇಳೆ ತಮ್ಮ ನೇತೃತ್ವದಲ್ಲಿಯೇ ಹೊಸ ಸೇತುವೆ ನಿರ್ಮಾಣಕ್ಕೆ ಪಿಡಬ್ಲ್ಯೂಡಿ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಲಾಗಿತ್ತು. ಈ ಎಲ್ಲದರ ಕಾರಣದಿಂದ ಇದೀಗ ಹೊಸ ಸೇತುವೆ ನಿರ್ಮಾಣವಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡು ಐದಾರು ತಿಂಗಳಾಗುತ್ತ ಬಂದರೂ ಇಲ್ಲಿಯವರೆಗೂ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡದಿರುವ ಕ್ರಮ ಸರಿಯಲ್ಲ. ಕಾಲಮಿತಿಯಲ್ಲಿ ವಾಹನಗಳ ಸಂಚಾರಕ್ಕೆ ಸೇತುವೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ' ಎಂದು ಪ್ರಗತಿಪರ ಹೋರಾಟಗಾರ ಜಿ.ಎಂ.ಸುರೇಶ್‍ಬಾಬು ಎಚ್ಚರಿಕೆ ನೀಡಿದ್ದಾರೆ. 

ಸೇತುವೆ ನಿರ್ಮಾಣವಾಗಿರುವ ಜಾಗ ತನ್ನದೆನ್ನುತ್ತಿರುವ ಲೇಔಟ್ ಮಾಲಕ

ಸಹ್ಯಾದ್ರಿ ನಗರದ ಬಳಿ ಪಿಡಬ್ಲ್ಯೂಡಿ ಇಲಾಖೆಯು ಸೇತುವೆ ನಿರ್ಮಿಸಿರುವ ಜಾಗ ತನ್ನದೆಂದು ಸಮೀಪದ ಲೇಔಟ್‍ವೊಂದರ ಮಾಲಕ ತಕರಾರು ತೆಗೆದಿದ್ದಾರೆ. ಅವರ ಅಡ್ಡಿಯ ಕಾರಣದಿಂದಲೇ ಇಲ್ಲಿಯವರೆಗೂ ವಾಹನಗಳ ಸಂಚಾರಕ್ಕೆ ಸೇತುವೆ ಮುಕ್ತವಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಜಿಲ್ಲಾಡಳಿತ ಸೂಕ್ತ ಗಮನಹರಿಸಬೇಕಾಗಿದೆ. ದಾಖಲಾತಿಗಳ ಪರಿಶೀಲನೆ ನಡೆಸಬೇಕು. ಕಾಲಮಿತಿಯಲ್ಲಿ ಸಮಸ್ಯೆ ಪರಿಹರಿಸಬೇಕು ಎಂದು ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿ ಡಾ. ಕೆ. ಎ. ದಯಾನಂದ್‍ರವರಿಗೆ ಮನವಿ ಮಾಡುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News