ನೋಟು ಅಮಾನ್ಯೀಕರಣ ಶತಮಾನದ ವ್ಯವಸ್ಥಿತ ಭ್ರಷ್ಟಾಚಾರ: ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್

Update: 2018-11-09 17:16 GMT

ಚಿಕ್ಕಮಗಳೂರು, ನ.9: ಬಿಜೆಪಿ ನೇತೃತ್ವ ನರೇಂದ್ರ ಮೋದಿ ಸರಕಾರ 8ನೇ ನವೆಂಬರ್ 2016ರಂದು ತೆಗೆದುಕೊಂಡ ನೋಟು ಅಮಾನ್ಯೀಕರಣ ತೀರ್ಮಾನ ಈ ಶತಮಾನದ ವ್ಯವಸ್ಥಿತ ಭ್ರಷ್ಟಾಚಾರ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಆರೋಪಿಸಿದರು. 

ಗುರುವಾರ ರಾತ್ರಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪಂಜಿನ ಮೆರವಣಿಗೆ ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಕಪ್ಪು ಹಣ ಬೆಳಕಿಗೆ ಬರುತ್ತದೆ, ಭಯೋತ್ಪಾದನೆ ನಿಗ್ರಹಿಸಲು ಸಹಾಯವಾಗುತ್ತದೆ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತದೆ ಎಂದು ಸುಳ್ಳಿನ ಭರವಸೆ ನೀಡುವ ಮೂಲಕ ದೇಶವನ್ನು ಆರ್ಥಿಕ ದುಸ್ಥಿತಿಗೆ ತಳ್ಳಿದ ಮೋದಿ ತೀರ್ಮಾನವನ್ನು ಯಾವುದೇ ಆರ್ಥಿಕ ತಜ್ಞರು ಒಪ್ಪುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೀರ್ಮಾನವನ್ನು ತೆಗೆದುಕೊಳ್ಳುವಾಗ ಕನಿಷ್ಠ ಆ ಮನೆಯ ಮುಖ್ಯಸ್ಥರಿಗಾದರೂ ಗೊತ್ತಿರಬೇಕಿತ್ತು. ಆದರೆ ದೇಶಕ್ಕೆ ತಿಳಿದಿರುವಂತೆ ಮೋದಿ ಸರ್ಕಾರ ಹಣಕಾಸು ಸಚಿವರಿಗೂ ತಿಳಿಸಿರಲಿಲ್ಲ ಎನ್ನಲಾಗುತ್ತಿದೆ. ಇಂತಹ ಸರ್ವಾಧಿಕಾರಿ ಧೋರಣೆಯಿಂದ ಮೋದಿ ಅವರು ದೇಶವನ್ನು ಪ್ರಗತಿಯಿಂದ ಹಿಂದಿಕ್ಕುತ್ತಿದ್ದಾರೆ. ಇದು ಸರ್ವತಾ ಒಪ್ಪಲಾಗದ ವಿಚಾರ. ಕಾಂಗ್ರೆಸ್ ಪಕ್ಷ ತನ್ನ ನಾಯಕರು, ಕಾರ್ಯಕರ್ತರ ಮೂಲಕ ಮೋದಿ ಸರ್ಕಾರದ ವಿಫಲತೆಗಳನ್ನು ಜನತೆಗೆ ತಿಳಿಸುವ ಮೂಲಕ ಈ ದೇಶವನ್ನು ಅವರ ಕೈಯಿಂದ ಬಿಡಿಸುವ ಪ್ರಯತ್ನ ನಡೆಸುತ್ತದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ ಮಾತನಾಡಿ, ಮಕ್ಕಳ ವಿಧ್ಯಾಭ್ಯಾಸ, ಮದುವೆ-ಮುಂಜಿ ಮತ್ತು ಆಪತ್ತಿಗಾಗಿ ಡಬ್ಬಿಗಳಲ್ಲಿ ಕೂಡಿಟ್ಟ ಕೋಟ್ಯಾಂತರ ಮಹಿಳೆಯರ ದುಡ್ಡಿಗೆ ಕನ್ನ ಹಾಕಿದ ನರೇಂದ್ರ ಮೋದಿ ವಾಸ್ತವತೆ ತಿಳಿಯದ ಮನುಷ್ಯ. ಭಾರತ ದೇಶದಲ್ಲಿ ಮಹಿಳೆಯರ ಪಾತ್ರ ಕೌಟಂಬಿಕ ವ್ಯವಸ್ಥೆಯಲ್ಲಿ ಬಹುದೊಡ್ಡದು. ಇಂದಿಗೂ ಮಹಿಳೆಯರೇ ಅದೆಷ್ಟೋ ಕುಟುಂಬಗಳನ್ನು ಪುರುಷರಿಗೆ ಹೊರೆಯಾಗದೆ ನಡೆಸುತ್ತಿದ್ದಾರೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ, ನರಕಾಸುರ ಕೊಂದ ದೀಪಾವಳಿ ಸಂದರ್ಭದಲ್ಲಿ ಮೋದಿ ಅವರ ರಾಜಕೀಯ ಅಧಿಕಾರವನ್ನು ಕೊಲ್ಲುವ ಮೂಲಕ ಈ ದೇಶದ ಜನ ಸರ್ವಾಧಿಕಾರಿಯೊಬ್ಬನಿಗೆ ತಕ್ಕ ಪಾಠ ಕಲಿಸಬೇಕೆಂದು ಕರೆ ನೀಡಿದರು. ಬಾಯಲ್ಲಿ ಅಚ್ಚೆದಿನ್ ಮಂತ್ರ ಜಪಿಸುವ ಮೋದಿ ಇಡೀ ದೇಶವನ್ನು ಆರ್ಥಿಕ ಕೂಪಕ್ಕೆ ತಳ್ಳಿದರು. ಸಾಲದ್ದಕ್ಕೆ ಡಿಸೇಲ್, ಪೆಟ್ರೋಲ್, ಗ್ಯಾಸ್ ದರ ಏರಿಸುತ್ತಲೇ ಜಿ.ಎಸ್.ಟಿ. ಮಂತ್ರ ಹೇಳಿಕೊಂಡು ದೇಶದ ಮಧ್ಯಮವರ್ಗ ಹಾಗೂ ಬಡಜನರ ಜೇಬಿಗೆ ಕತ್ತರಿ ಹಾಕಿದ್ದಾರೆ. ಅವರ ತೀರ್ಮಾನಕ್ಕೆ ನಮ್ಮ ಧಿಕ್ಕಾರವಿದೆ ಎಂದರು.

ಕರಾಳ ಪ್ರತಿಭಟನೆಯಲ್ಲಿ ಬ್ಯಾರಿ ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಕೆ.ಮುಹಮ್ಮದ್, ಜಿ.ಪಂ. ಮಾಜಿ ಅಧ್ಯಕ್ಷ ಎ.ಎನ್. ಮಹೇಶ್, ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚ್.ಪಿ. ಮಂಜೇಗೌಡ ಮಾತನಾಡಿದರು.

ನಗರದ ಹನುಮಂತಪ್ಪ ವೃತ್ತದಿಂದ ನೂರಾರು ಕಾರ್ಯಕರ್ತರು ಪಂಜು ಹಿಡಿದು, ನೋಟು ಅಮಾನ್ಯೀಕರಣದ ಹಾಗೂ ಮೋದಿ ಸರಕಾರಕ್ಕೆ ಧಿಕ್ಕಾರ ಹೇಳುತ್ತ ಅಜಾದ್ ಪಾರ್ಕ್‍ವರೆಗೆ ಸಾಗಿದರು. ಮುಂಚೂಣಿ ಘಟಕದ ಅಧ್ಯಕ್ಷರುಗಳಾದ ಸಿಲ್ವರ್‍ಸ್ಟರ್, ಜಂಶೀದ್, ಕಾರ್ತಿಕ್.ಜಿ ಚೆಟ್ಟಿಯಾರ್, ಶಿವಕುಮಾರ್, ಯಶೋಧ, ನೇತ್ರಾವತಿ, ಎಪಿಎಂಸಿ ಅಧ್ಯಕ್ಷ ಪ್ರಕಾಶ್ ಹೊಬಳಿ ಅಧ್ಯಕ್ಷರಾದ ಕುಮಾರ್, ನಾಗೇಶ್, ನಾಗಭೂಷಣ್, ನಗರಸಭೆ ಸದಸ್ಯ ರೂಬೇನ್ ಮೊಸಸ್ ಮುಂತಾದವರು ಮೆರವಣಿಗೆಯಲ್ಲಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News