×
Ad

ಚಿಕ್ಕಮಗಳೂರು: ನ.11 ರಂದು ಮಾಜಿ ಸಿಎಂ ಸಿದ್ದರಾಮಯ್ಯರಿಂದ ಕನಕ ಭವನ ಲೋಕಾರ್ಪಣೆ

Update: 2018-11-09 22:54 IST

ಚಿಕ್ಕಮಗಳೂರು, ನ.9: ಜಿಲ್ಲಾ ಕುರುಬರ ಸಂಘದಿಂದ ನಿರ್ಮಾಣಗೊಂಡಿರುವ ಜಿಲ್ಲಾ ಕನಕ ಸಮುದಾಯಭವನದ ಲೋಕಾರ್ಪಣೆ ಕಾರ್ಯಕ್ರಮ ನ.11ರಂದು ನಡೆಯಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ ಕಟ್ಟಡದ ಎದುರಿನ ವಿಶಾಲವಾದ ನಿವೇಶನದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಕನಕ ಭವನ ನಿರ್ಮಿಸಲಾಗಿದೆ. ನ.11ರಂದು ಮಧ್ಯಾಹ್ನ 2ಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕ ಭವನ ಉದ್ಘಾಟಿಸಲಿದ್ದು, ಕನಕ ಗುರುಪೀಠ ಕಾಗಿನೆಲೆ ಮಹಾಸಂಸ್ಥಾನದ ಶ್ರೀ ಗುರುರೇವಣಸಿದ್ದೇಶ್ವರ ಸಿಂಹಾಸನ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ, ಕನಕ ಗುರುಪೀಠದ ಶಾಖಾ ಮಠದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ.ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಹಕಾರ ಸಚಿವ ಬಂಡೆಪ್ಪಕಾಶಂಪೂರ್, ಅರಣ್ಯ ಸಚಿವ ಶಂಕರ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ, ಮಾಜಿ ಸಚಿವರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‍ನ ಕುರುಬ ಸಮುದಾಯದ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕನಕ ಭವನದಲ್ಲಿ ಅನೇಕ ವಿಶೇಷತೆಗಳಿವೆ. ಏಕ ಕಾಲದಲ್ಲಿ 1 ಸಾವಿರ ಮಂದಿ ಕುಳಿತುಕೊಳ್ಳಬಹುದು. 600 ಮಂದಿ ಏಕಕಾಲದಲ್ಲಿ ಕುಳಿತು ಊಟ ಮಾಡಬಹುದು. ಒಟ್ಟು 10 ಅತ್ಯಾಧುನಿಕ ಕೊಠಡಿಗಳಿವೆ ವಾಹನ ನಿಲುಗಡೆಗೆ ಮೈದಾನವಿದೆ ಎಂದರು.

ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭ ಭವನಕ್ಕೆ 2 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ವಿವಿಧ ಪಕ್ಷದ ಸಂಸದರು, ಶಾಸಕರು, ಸಚಿವರು, ಸರಕಾರಿ ನೌಕರರು, ಅಧಿಕಾರಿಗಳು, ಕುರುಬ ಸಮುದಾಯದ ಸಾಮಾನ್ಯರಿಂದ ಮುಖಂಡರವರೆಗೆ ಎಲ್ಲರೂ ಕೊಡುಗೆ ನೀಡಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಶಾಂತೇಗೌಡ 10 ಲಕ್ಷ ರೂ. ಅಧ್ಯಕ್ಷ ಮಂಜುನಾಥ್ 5 ಲಕ್ಷ ರೂ.ಕೊಡುಗೆ ನೀಡಿದ್ದು ಉಳಿದಂತೆ ಸಮಾಜದ ಮುಖಂಡರು ದೇಣಿಗೆ ನೀಡಿದ್ದಾರೆ ಎಂದರು.

ಕನಕ ಸಮುದಾಯದಿಂದ ಬರುವ ಆದಾಯವನ್ನು ಕುರುಬ ಸಮಾಜದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳಿಗೆ ಬಳಸಿಕೊಳ್ಳಲು ಯೋಜಿಸಲಾಗಿದೆ. 1965 ರಲ್ಲಿ ಸ್ಥಾಪಿತವಾದ ಕುರುಬರ ಸಂಘವನ್ನು ಕಟ್ಟಿ ಬೆಳೆಸುವಲ್ಲಿ ಅನೇಕ ಹಿರಿಯರ ಶ್ರಮವಿದೆ ಎಂದು ಹೇಳಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಶಾಂತೇಗೌಡ, ಜಿ.ಪಂ.ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ಮುಖಂಡರಾದ ಕೆ.ವಿ.ಮಂಜುನಾಥ್, ಎ.ಎನ್.ಮಹೇಶ್, ಚಂದ್ರೇಗೌಡ, ಅಣ್ಣೇಗೌಡ, ಮೋಹನ್‍ಗೌಡ, ಎಚ್.ಎಸ್.ಪುಟ್ಟೇಗೌಡ,  ಗಂಗಪ್ಪ, ಜಯಣ್ಣಗೌಡ, ಬೀರೇಗೌಡ, ಕೆ.ಎಂ.ಕೆಂಪರಾಜ್, ಚಂದ್ರಣ್ಣ, ಮರೀಗೌಡ, ರೇವಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News