ಟಿಪ್ಪು ಜಯಂತಿ ಹಿನ್ನೆಲೆ: ಶ್ರೀರಂಗಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಮಂಡ್ಯ, ನ.9: ನ.10 ರಂದು ನಡೆಯಲಿರುವ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀರಂಗಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಪಟ್ಟಣದಲ್ಲಿ 1 ಎಸ್‍ಪಿ, 2 ಎಎಸ್ಪಿ, 4 ಡಿವೈಎಸ್ಪಿ, 12 ಸಿಪಿಐ, 20 ಪಿಎಸೈ, 2 ಕೆಎಸ್‍ಆರ್‍ಪಿ, 5 ಡಿಆರ್ ಸೇರಿದಂತೆ 600ಕ್ಕೂ ಹೆಚ್ಚು ಪೋಲಿಸ್ ಹಾಗೂ 250 ಹೋಮ್ ಗಾರ್ಡ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಪೂರ್ವಭಾವಿಯಾಗಿ ಶುಕ್ರವಾರ ಸಂಜೆ ಶ್ರೀರಂಗಪಟ್ಟಣದ ಮುಖ್ಯ ರಸ್ತೆ, ಬಸ್ ನಿಲ್ದಾಣ, ಬೆಂ-ಮೈಸೂರು ಹೆದ್ದಾರಿ, ಗಂಜಾಂನ ಮುಖ್ಯರಸ್ತೆ ಮಾರ್ಗವಾಗಿ ಗುಂಬಸ್‍ವರೆಗೂ ಪೊಲೀಸರು ಪಥಸಂಚಲನ ನಡೆಸಿದರು.
ಪಟ್ಟಣದ ಜಾಮಿಯಾ ಮಸೀದಿ, ಮುಖ್ಯರಸ್ತೆ ಹಾಗೂ ಗಂಜಾಂನ ವಿವಿಧೆಡೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು 40ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿದ್ದು, ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೆ ಹೆದ್ದಾರಿಯ ನಗುವನಹಳ್ಳಿ ಗೇಟ್, ಬೊಮ್ಮೂರು ಅಗ್ರಹಾರ, ಪಶ್ಚಿಮವಾಹಿನಿ, ಆರ್‍ಎಂಸಿ ಚೆಕ್‍ಪೋಸ್ಟ್ ವರೆಗೂ ಬಿಗಿಭದ್ರತೆಯ ಚೆಕ್ಕಿಂಗ್ ಪಾಯಿಂಟ್‍ಗಳನ್ನು ರಚಿಸಲಾಗಿದೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
ಅಗತ್ಯ ಬಿದ್ದಲ್ಲಿ ವಿಡಿಯೋ ಚಿತ್ರೀಕರಣ ಅಥವಾ ಪೋಲಿಸರು ತಮ್ಮ ಮೊಬೈಲ್‍ಗಳಲ್ಲಿ ವಾಹನಗಳ ನೋಂದಣಿ ಮತ್ತು ವ್ಯಕ್ತಿಗಳ ವಿಡಿಯೋ ಸೆರೆಹಿಡಿಯಲು ಸೂಚಿಸಲಾಗಿದೆ. ಪ್ರಾರ್ಥನೆಗೆ ಆಗಮಿಸುವ ಮುಸ್ಲಿಂ ಸಮುದಾಯದವರಿಗೆ ಗಂಜಾಂನ ಗುಂಬಸ್‍ಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಶ್ರೀರಂಗಪಟ್ಟಣಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಪಟ್ಟಣದ ಮುಖ್ಯ ವೃತ್ತ, ಬಸ್ ಸ್ಟ್ಯಾಂಡ್ ವೃತ್ತ, ಗಂಜಾಂ ಮುಖ್ಯ ರಸ್ತೆ, ಗುಂಬಸ್‍ವರೆಗೂ ಶಸ್ತ್ರಸಜ್ಜಿತ ಹಾಗೂ ಸುರಕ್ಷತಾ ಕವಚಗಳನ್ನು ಧರಿಸಿದ ಪೋಲಿಸರನ್ನು ನೇಮಿಸಿದ್ದು, ಜತೆಗೆ ಪ್ರತಿ ಚೆಕ್ಕಿಂಗ್ ಪಾಯಿಂಟ್‍ಗಳಿಗೂ ತಲಾ ಒಬ್ಬೊಬ್ಬ ಖಾಸಗಿ ವಿಡಿಯೋ ಛಾಯಗ್ರಾಹಕರನ್ನು ನೇಮಿಸಲಾಗಿದೆ.
ಸಚಿವಸಿ.ಎಸ್.ಪುಟ್ಟರಾಜು ಉದ್ಘಾಟನೆ:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ, ವತಿಯಿಂದ ನಾಳೆ (ನ.10) ಬೆಳಗ್ಗೆ 10.30ಕ್ಕೆ ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸಲಿದ್ದಾರೆ.
ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದು, ಸಾರಿಗೆ ಸಚಿವ ಡಿ.ಸಿ.ತಮ್ಮಣ ಆಗಮಿಸಲಿದ್ದಾರೆ. ಸಿ.ಪಿ.ವಿದ್ಯಾಶಂಕರ್ ಮತ್ತು ತಂಡದಿಂದ ಗಾಯನ ಕಾರ್ಯಕ್ರಮ, ಹಾಮಿದುಲ್ ಹಸ್ಸನ್ ಮತ್ತು ಧರ್ಮೇಂದ್ರ ಕುಮಾರ್ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.