ನೋಟು ಬ್ಯಾನ್ ನಂತರ ಭ್ರಷ್ಟಾಚಾರ ಹೆಚ್ಚಾಗಿದೆ: ಮಂಡ್ಯ ಕಾಂಗ್ರೆಸ್ ಉಸ್ತುವಾರಿ ಎನ್.ಸಂಪಂಗಿ

Update: 2018-11-09 17:31 GMT

ಮಂಡ್ಯ,ನ.9: ಪ್ರಧಾನಿ ನರೇಂದ್ರಮೋದಿ ಅವರು ಸುಳ್ಳು ಭರವಸೆಗಳನ್ನು ನೀಡಿ ದೇಶವನ್ನು ನಡೆಸುತ್ತಿದ್ದಾರೆ. ನೋಟು ಅಮಾನ್ಯೀಕರಣದ ನಂತರ ಭ್ರಷ್ಟಾಚಾರ ಹೆಚ್ಚಾಗಿದೆ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿ ಎನ್.ಸಂಪಂಗಿ ಟೀಕಿಸಿದ್ದಾರೆ.

ನೋಟು ಅಮಾನ್ಯೀಕರಣದ 2ನೇ ವರ್ಷದ ಕರಾಳ ದಿನದ ಅಂಗವಾಗಿ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅವರು ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಬಡವರ್ಗದ ಜನತೆಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ನೋಟು ಅಮಾನ್ಯೀಕರಣ ದೇಶದ ಪ್ರಗತಿಗೆ ಮಾರಕವಾಗಿದೆ. ಇದರಿಂದ ಜನಸಾಮಾನ್ಯರು ಹಾಗೂ ಸಣ್ಣ ಉದ್ಯಮಿಗಳು ತೊಂದರೆಗೊಳಗಾಗಿದ್ದಾರೆ. ಇದಲ್ಲದೆ ಕೇಂದ್ರದ ಬಿಜೆಪಿ ಸರಕಾರದ ಯೋಜನೆಗಳು ವಿಫಲವಾಗಿದ್ದು, ದೇಶದಲ್ಲಿ ಮೋದಿ ಆಡಳಿತ ವಿರೋಧಿ ಅಲೆ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.

ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, 2016 ನ.9ರಂದು ಪ್ರಧಾನಿ ನರೇಂದ್ರಮೋದಿ ಅವರು 4 ಆಶ್ವಾಸನೆಗಳನ್ನು ನೀಡಿ ನೋಟು ಅಮಾನ್ಯೀಕರಣಕ್ಕೆ ಮುಂದಾದರು. ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರುವುದು, ಖೋಟಾನೋಟು ತಯಾರಿಕೆ ತಡೆ, ನಿರುದ್ಯೋಗ ಸಮಸ್ಯೆ ಕಡಿಮೆ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ, ನೋಟು ಅಮಾನ್ಯೀಕರಣದಿಂದ ದೇಶವನ್ನು ಆರ್ಥಿಕ ತುರ್ತು ಪರಿಸ್ಥಿತಿಗೆ ದೂಡಿದ್ದಾರೆ ಎಂದರು.

ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ನೋಟು ಅಮಾನ್ಯೀಕರಣ ವಿಷಯವನ್ನು ಕ್ಯಾಬಿನೆಟ್‍ನಲ್ಲಿ ಪ್ರಸ್ತಾಪಿಸಿದೆ ಏಕಾಏಕಿ ಪ್ರಧಾನಿ ಒಬ್ಬರೇ ನಿರ್ಧಾರ ಕೈಗೊಂಡಿದ್ದಾರೆ. ಮೋದಿ ಅವರು ರಾಷ್ಟ್ರದ ಜನತೆಯ ಕ್ಷಮೆಯಾಚಿಸಬೇಕು. ನೋಟು ಅಮಾನ್ಯೀಕರಣದಿಂದ ಉಂಟಾದ ಪರಿಣಾಮಗಳಿಗೆ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎಸ್.ಚಿದಂಬರ್, ಮುಖಂಡರಾದ ಗಣಿಗ ರವಿಕುಮಾರ್, ವಿಜಯಲಕ್ಷ್ಮಿ ರಘುನಂದನ್, ಅಪ್ಪಾಜಿ, ಹಾಲಹಳ್ಳಿ ಅಶೋಕ್, ಸುರೇಶ್ ಕಂಠಿ, ಸಿದ್ದರಾಮೇಗೌಡ, ಸಿ.ಎಂ.ದ್ಯಾವಪ್ಪ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News