ದಾವಣಗೆರೆ: ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

Update: 2018-11-09 18:02 GMT

ದಾವಣಗೆರೆ,ನ.9: ಟಿಪ್ಪು ಸುಲ್ತಾನ್ ಜಯಂತಿ ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಟಿಪ್ಪು ಭಾವಚಿತ್ರ ಸುಡುವ ಮೂಲಕ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಗಾಂಧಿ ವೃತ್ತ ಹಳೆ ಪಿ.ಬಿ.ರಸ್ತೆ ಮಾರ್ಗವಾಗಿ ಎಸಿ ಕಚೇರಿ ಬಳಿ ತೆರಳಿ ಉಪ ವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. 

ಈ ಸಂದರ್ಭ ಉತ್ತರ ಕ್ಷೇತ್ರ ಶಾಸಕ ಎಸ್.ಎ.ರವೀಂದ್ರನಾಥ ಮಾತನಾಡಿ, ರಾಜ್ಯ ಸಮ್ಮಿಶ್ರ ಸರ್ಕಾರ ಮತಾಂಧ, ಕನ್ನಡ ವಿರೋಧಿಯಾಗಿದ್ದ ಟಿಪ್ಪು  ಸುಲ್ತಾನ್ ಜಯಂತಿ ಆಚರಿಸುತ್ತಿರುವುದು ಸರಿಯಲ್ಲ. ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಮೊದಲ ಬಾರಿಗೆ ಟಿಪ್ಪು ಜಯಂತಿಗೆ ಚಾಲನೆ ನೀಡಿದ ಸಂದರ್ಭ ಮಡಿಕೇರಿಯಲ್ಲಿ ಓರ್ವನ ಕೊಲೆಯಾಗಿತ್ತು. ಆಗ ಮೃತನ ಮನೆಗೆ ಭೇಟಿ ನೀಡಿದ್ದ ಇಂದಿನ ಸಿಎಂ ಕುಮಾರಸ್ವಾಮಿ, ತಾವು ಮುಂದೆ ಮುಖ್ಯಮಂತ್ರಿಯಾದರೆ ಟಿಪ್ಪು ಜಯಂತಿ ಆಚರಿಸುವುದಿಲ್ಲವೆಂಬ ಭರವಸೆ ನೀಡಿದ್ದರು. ಆದರೆ, ಈಗ ಕೊಟ್ಟ ಮಾತು ಮರೆತು ಅವರೇ ಟಿಪ್ಪು ಜಯಂತಿ ಆಚರಿಸುತ್ತಿರುವುದು ಸರಿಯಲ್ಲ ಎಂದ ಅವರು, ಅಮಾಯಕ ಹಿಂದೂಗಳು, ಮಡಿಕೇರಿ ಕೊಡವರ ಸಾಮೂಹಿಕ ನರಮೇಧ ಮಾಡಿದ್ದ, ಹಿಂದು ದೇವಾಲಯ ನಾಶ ಮಾಡಿದ ಟಿಪ್ಪು ಜಯಂತಿ ಸರ್ಕಾರ ಆಚರಿಸಬಾರದು ಎಂದು ಅವರು ಒತ್ತಾಯಿಸಿದರು. 

ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಅನೇಕ ಮಹನೀಯರು, ವೀರರು, ಧೀರರು ಆಳಿದಂತಹ ನಾಡು ನಮ್ಮದು. ಆದರೆ, ಕನ್ನಡ ವಿರೋದಿಯಾಗಿದ್ದ ಮತಾಂಧ ಟಿಪ್ಪು ಪರ್ಷಿಯನ್ ಭಾಷೆಯನ್ನು ಇಲ್ಲಿ ಹೇರಿದ್ದ. ಕೇರಳದ ಮಲಬಾರ್ ತೀರದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಷಡ್ಯಂತ್ರ ರೂಪಿಸಿದ್ದ. ತನ್ನ ಆಳ್ವಿಕೆಯಲ್ಲಿ ಕನ್ನಡ ಭಾಷೆ ತುಳಿದು ಪರ್ಷಿಯನ್ ಹೇರಲು ಯತ್ನಿಸಿದ್ದ, ಚಿತ್ರದುರ್ಗದ ವೀರ ಮದಕರಿ ನಾಯಕರನ್ನು ಮೋಸದಿಂದ ಹತ್ಯೆಗೈದಂತಹ ನಂಬಿಕೆ ದ್ರೋಹಿ ಟಿಪ್ಪು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಎಚ್.ಎನ್. ಶಿವಕುಮಾರ, ಬಿ.ಎಂ.ಸತೀಶ, ಮುಕುಂದ, ಓಂಕಾರಪ್ಪ ಮಾತನಾಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಪಿ.ಸಿ. ಶ್ರೀನಿವಾಸ, ವಕೀಲ ಎ.ವೈ. ಪ್ರಕಾಶ, ಎನ್.ರಾಜಶೇಖರ, ರಾಜನಹಳ್ಳಿ ಶಿವಕುಮಾರ ಪೈಲ್ವಾನ್, ಪಿ.ಎಸ್.ಜಯಣ್ಣ, ಬಿ.ರಮೇಶ ನಾಯ್ಕ, ಪ್ರಭು ಕಲ್ಬುರ್ಗಿ, ಸಹನಾ ರವಿ, ಸವಿತಾ ರವಿಕುಮಾರ, ಸರೋಜಮ್ಮ ದೀಕ್ಷಿತ್, ಭಾಗ್ಯ ಪಿಸಾಳೆ, ಚೇತು ಬಾಯಿ, ದೇವೀರಮ್ಮ, ಟಿಂಕರ್ ಮಂಜಣ್ಣ, ಶಿವರಾಜ ಪಾಟೀಲ, ವೈ.ಮಲ್ಲೇಶ, ಕೆ.ಎನ್. ಓಂಕಾರಪ್ಪ, ಪಿ.ಎಸ್.ಬಸವರಾಜ, ಸೋಗಿ ಶಾಂತಕುಮಾರ, ಪಿಸಾಳೆ ಕೃಷ್ಣ, ಕಿರೀಟ್ ಸಿ. ಕಲಾಲ್, ಮಟ್ಟಿಕಲ್ಲು ಕರಿಬಸಪ್ಪ, ಅರುಣಕುಮಾರ ಮಾನೆ, ಎಂ.ಮಾದೇಶ ಮತ್ತಿತರರಿದ್ದರು. 

ಸರ್ಕಾರದ ಆದೇಶದಂತೆ ಟಿಪ್ಪು ಜಯಂತಿಯನ್ನು ಸರಳವಾಗಿ ಆಚರಿಸಿಕೊಳ್ಳಲಿ. ಆದರೆ, ಬೈಕ್ ರ್ಯಾಲಿ, ಮೆರವಣಿಗೆ, ಬಹಿರಂಗ ಸಾರ್ವಜನಿಕ ಕಾರ್ಯಕ್ರಮ ನಡೆಸಿದ್ದೇ ಆದರೆ ಅದನ್ನು ವಿರೋಧಿಸಿ ಬಿಜೆಪಿಯಿಂದ ಉಗ್ರ ಪ್ರತಿಭಟನೆ, ಬೈಕ್ ರ್ಯಾಲಿ ನಡೆಸಲಾಗುವುದು ಎಂದು ಯಶವಂತರಾವ್ ಜಾಧವ್ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News