ವೈಜ್ಞಾನಿಕವಲ್ಲದ ವೈದ್ಯಕೀಯ ಪದ್ಧತಿಗಳು ಮತ್ತು ಸ್ವಾಮಿ ವಿವೇಕಾನಂದರು

Update: 2018-11-09 18:35 GMT

ಇದೇ ನವೆಂಬರ್ 3 ಮತ್ತು 4ರಂದು ಮಂಗಳೂರಿನ ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆದ ‘ಮಂಗಳೂರು ಲಿಟ್ ಫೆಸ್ಟ್’ ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇಳೆ ಆಯುರ್ವೇದದ ಮಹತ್ವ, ವಿದೇಶಿಯರೂ ಅದರತ್ತ ಆಕರ್ಷಿತರಾಗಿರುವುದು ಮುಂತಾದ ಮಾತುಗಳು ಕೇಳಿಬಂದವು. ಎಂದಿನಂತೆ ಆಯುರ್ವೇದ ಪದ್ಧತಿಯ ಅತಿಯಾದ ಗುಣಗಾನವೂ ನಡೆಯಿತು. ಈ ‘ಮಂಗಳೂರು ಲಿಟ್ ಫೆಸ್ಟ್’ ನ ಆಯೋಜಕರು, ಪ್ರಾಯೋಜಕರು, ಆಹ್ವಾನಿತರು, ಅಲ್ಲಿ ಕೇಳಿಬಂದ ಮಾತುಗಳು, ನಡೆದ ಸ್ತುತಿಪಾಠ ಇತ್ಯಾದಿಗಳನ್ನು ಗಮನಿಸಿದವರಿಗೆ ಅದೊಂದು ಸಂಘ ಪರಿವಾರ ಪ್ರಾಯೋಜಿತ ಕಾರ್ಯಕ್ರಮವೆಂದು ತೋರಿಬಂದಿದ್ದರೆ, 2019ರ ಚುನಾವಣಾಪೂರ್ವ ಪ್ರಚಾರದ ಭಾಗವೆಂಬಂತೆ ಭಾಸವಾಗಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ.

ಅಲೊಪಥಿ ಸಂಪೂರ್ಣ ನಂಬಿಕೆಗೆ ಅರ್ಹವಲ್ಲ, ಕೆಲವೊಂದು ಅಲೊಪಥಿ ಔಷಧಗಳು ಅನಪೇಕ್ಷಿತ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತವೆ ಎನ್ನುವುದು ನಿಜ. ಇಂದು ಔಷಧಿ ತಯಾರಕರು ಮತ್ತು ಖಾಸಗಿ ಆಸ್ಪತ್ರೆಗಳ ಕಾರ್ಪೊರೇಟ್ ಮಾಫಿಯದಿಂದಾಗಿ ಅಲೊಪಥಿ ದುಬಾರಿಯಾಗಿರುವುದೂ ನಿಜ. ಹೀಗಾಗಿ ಜನರು ಪರ್ಯಾಯ ವೈದ್ಯಕೀಯ ಪದ್ಧತಿಗಳತ್ತ ಮುಖಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಅಲೊಪಥಿಗೆ ಇರುವಂತಹ ಒಂದು ಸುಭದ್ರ ವೈಜ್ಞಾನಿಕ ತಳಹದಿ ಆಯುರ್ವೇದ ಮತ್ತಿತರ ಪದ್ಧತಿಗಳಿಗೆ ಇಲ್ಲ. ಯಾವುದೇ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಅದರ ಪರಿಣಾಮಗಳು ಮತ್ತು ಅಡ್ಡಪರಿಣಾಮಗಳ ಬಗ್ಗೆ ಅಧ್ಯಯನ ಮತ್ತು ಪ್ರಯೋಗಗಳನ್ನು ನಡೆಸುವ ಸಂಪ್ರದಾಯ ಆಯುರ್ವೇದದಲ್ಲಿ ಇಲ್ಲ. ಅಲ್ಲಿ ಎಲ್ಲ ಜ್ಞಾನವೂ ವಂಶಪಾರಂಪರಿಕ.

ಭಾರತದ ಕೀರ್ತಿಯನ್ನು ವಿಶ್ವದ ಮೂಲೆಮೂಲೆಗಳಿಗೂ ಪಸರಿಸಿದ ಸ್ವಾಮಿ ವಿವೇಕಾನಂದರನ್ನು ಗುತ್ತಿಗೆಗೆ ಪಡೆದುಕೊಂಡವರಂತೆ ವರ್ತಿಸುವ ಸಂಘ ಪರಿವಾರಿಗರು ಕೊಂಚ ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆ ಸ್ವಾಮಿ ವಿವೇಕಾನಂದರ ನಿಲುವು ಏನಾಗಿತ್ತು ಎನ್ನುವುದನ್ನೂ ತಿಳಿದುಕೊಂಡರೆ ಒಳ್ಳೆಯದು. ಮಣಿ ಶಂಕರ್ ಮುಖರ್ಜಿ ಓರ್ವ ಹೆಸರಾಂತ, ಜನಪ್ರಿಯ ಬಂಗಾಳಿ ಲೇಖಕರು. ಆತ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಆತನ ‘ಸೀಮಬದ್ಧ’ ಮತ್ತು ‘ಜನ ಅರಣ್ಯ’ ಎಂಬ ಪುಸ್ತಕಗಳನ್ನು ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರು ಸಿನೆಮಾ ರೂಪಕ್ಕೆ ತಂದಿದ್ದಾರೆ. ಸ್ವಾಮಿ ವಿವೇಕಾನಂದರನ್ನು ಒಂದು ವಿಭಿನ್ನ ದೃಷ್ಟಿಕೋನದಿಂದ ನೋಡಿದ ಶಂಕರ್‌ಸ್ವಾಮೀಜಿಯ ಜೀವನಚರಿತ್ರೆಯೊಂದನ್ನು ಬರೆದಿದ್ದಾರೆ.

ವಿವೇಕಾನಂದರು ಸನ್ಯಾಸಿಯಾಗಿಯೂ ಒಬ್ಬ ಮನುಷ್ಯನಾಗಿ ಹೇಗೆ ಬದುಕಿದ್ದರು, ಹೇಗೆ ತಮ್ಮ ಕೌಟುಂಬಿಕ ಸಂಬಂಧಗಳನ್ನು ಮುರಿಯದೆ ಮುಂದುವರಿಸಿದ್ದರು, ಅವರ ಸಾಧನೆಗಳೇನು, ಅವರ ಅಭಿರುಚಿಗಳೇನು, ಅವರ ಆರೋಗ್ಯ ಹೇಗಿತ್ತು ಮುಂತಾದ ವಿಷಯಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿದ ಬಳಿಕ ಬರೆದ ‘ದ ಮಂಕ್ ಆಸ್ ಮ್ಯಾನ್’ (The Monk As Man, ಪೆಂಗ್ವಿನ್ ಬುಕ್ಸ್, 2011) ಎಂಬ ಕೃತಿಯ ನಾಲ್ಕನೇ ಅಧ್ಯಾಯ ಸ್ವಾಮೀಜಿಯ ಆರೋಗ್ಯದ ಕುರಿತಾಗಿದೆ. ಅದರಲ್ಲಿ ಶಂಕರ್ ಹೇಳುವಂತೆ ‘‘ಸ್ವಾಮೀಜಿ ತನ್ನ ತಂದೆಯ ಹಾಗೆ ಮಧುಮೇಹ ಕಾಯಿಲೆಯಿಂದ ನರಳುತ್ತಿದ್ದರು. ಆ ಕಾಲದಲ್ಲಿ ಸೂಕ್ತ ಔಷಧಿಗಳು ಲಭ್ಯವಿರದ ಕಾರಣ ಅವರು ಅಲೊಪಥಿ, ಹೋಮಿಯೊಪಥಿ, ಆಯುರ್ವೇದ ಮೊದಲಾದ ವಿವಿಧ ವೈದ್ಯಕೀಯ ಪದ್ಧತಿಗಳನ್ನು ಪ್ರಯೋಗಿಸಿ ನೋಡಿದ್ದರು. ವಿವಿಧ ದೇಶಗಳ ಎಲ್ಲಾ ಬಗೆಯ ಅರೆ ವೈದ್ಯಕೀಯ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುವುದರೊಂದಿಗೆ ತನಗೆ ಚಿಕಿತ್ಸೆ ನೀಡಲು - ಒಂದು ವಿಧದಲ್ಲಿ ತನ್ನ ದೇಹದ ಮೇಲೆ ಪ್ರಯೋಗಗಳನ್ನು ನಡೆಸಲು-ಅವರೆಲ್ಲರಿಗೂ ಅನುಮತಿ ನೀಡಿದ್ದರು. ಆದರೂ 1901ರ ಜೂನ್‌ಗಾಗುವಾಗ ಈ ಎಲ್ಲಾ ಚಿಕಿತ್ಸೆಗಳು ಅವರ ತಾಳ್ಮೆಗೆಡಿಸಿದ್ದವು. ಆ ಸಂದರ್ಭದಲ್ಲಿ ಅವರು ‘ಅವು ಪರಿಣಾಮಕಾರಿ ಆಗಿದ್ದರೂ ಆಗದೆ ಇದ್ದರೂ ಕೇವಲ ತನ್ನ ಸೋದರ ಸನ್ಯಾಸಿಗಳ ಮೇಲಿನ ಗೌರವದಿಂದಾಗಿ ಅವುಗಳನ್ನು ಸಹಿಸಿಕೊಂಡಿದ್ದೇನೆ’ ಎಂದರು. ಆಗ ಶಿಷ್ಯನೊಬ್ಬ ತನ್ನ ಅಭಿಪ್ರಾಯದಲ್ಲಿ ಆಯುರ್ವೇದವೇ ಅತ್ಯಂತ ಪರಿಣಾಮಕಾರಿ ಎಂದು ಹೇಳುವ ಧೈರ್ಯ ಮಾಡಿದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸ್ವಾಮೀಜಿ ‘ನನ್ನ ಅಭಿಪ್ರಾಯದಲ್ಲಿ ಊಹಾಪೋಹ ಮಾಡುವ, ಪ್ರಾಚೀನ ಗ್ರಂಥಗಳಿಂದ ಉಲ್ಲೇಖಿಸುವ, ಒಂದೆರಡು ಮಂದಿಯನ್ನು ಗುಣಪಡಿಸಲೂಬಹುದಾದ ಅಳಲೆಕಾಯಿ ಪಂಡಿತನಿಗಿಂತಲೂ ವಿಜ್ಞಾನ ಬಲ್ಲ ವೈದ್ಯನೊಬ್ಬನ ಕೈಲಿ ಸಾವನ್ನಪ್ಪುವುದೆ ಉತ್ತಮ’ ಎಂದು ಮಾರುತ್ತರ ನೀಡಿದ್ದರು.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News