ಟಿಪ್ಪು ಯಾರ ಹೆಮ್ಮೆ?

Update: 2018-11-09 18:47 GMT

ಭಾರತದಲ್ಲಿ ಜಯಂತಿಗಳು ನಮ್ಮ ನಾಯಕರ ಹಿರಿಮೆಯನ್ನು ಕಿರಿದುಗೊಳಿಸಿವೆಯೇ ಹೊರತು, ಅದು ಅವರ ಆದರ್ಶಗಳನ್ನು ಎಲ್ಲರಿಗೂ ವಿಸ್ತಾರಗೊಳಿಸುತ್ತಾ ಬಂದದ್ದು ಕಡಿಮೆ ಅದಕ್ಕೆ ಮುಖ್ಯ ಕಾರಣವೇ, ಈ ಜಯಂತಿಗಳ ಘೋಷಣೆಗಳ ಹಿಂದಿರುವ ರಾಜಕಾರಣ. ಬಹುಶಃ ಗಾಂಧಿಜಯಂತಿಯೊಂದನ್ನು ಹೊರತು ಪಡಿಸಿದರೆ, ಉಳಿದೆಲ್ಲ ಜಯಂತಿಗಳ ಘೋಷಣೆಗಳ ಹಿಂದೆ ರಾಜಕೀಯ ಕೆಲಸ ಮಾಡಿದೆೆ. ಅಂಬೇಡ್ಕರ್ ಜಯಂತಿ ದಲಿತರಿಗೆ, ವಾಲ್ಮೀಕಿ ಬೇಡರಿಗೆ, ಕನಕ ಜಯಂತಿ ಕುರುಬರಿಗೆ, ನಾರಾಯಣಗುರು ಬಿಲ್ಲವರಿಗೆ, ಶಂಕರ ಜಯಂತಿ ಬ್ರಾಹ್ಮಣರಿಗೆ...  ಎಂದು ಒಬ್ಬೊಬ್ಬ ನಾಯಕನ ಹೆಸರಲ್ಲಿ ಜಯಂತಿಗಳನ್ನು ಘೋಷಿಸುತ್ತಾ ಆ ನಾಯಕನನ್ನು ರಾಜಕೀಯ ಪಕ್ಷಗಳು ಒಂದೊಂದು ಜಾತಿಗೆ ಸೀಮಿತಗೊಳಿಸಲು ಹೊರಡುತ್ತಿವೆೆ. ಅಂತೆಯೇ ಇದೀಗ ಮೈತ್ರಿ ಸರಕಾರ ಟಿಪ್ಪು ಸುಲ್ತಾನನನ್ನು ಈ ನಾಡಿನ ಮುಸ್ಲಿಮರ ತಲೆಗೆ ಕಟ್ಟಲು ಮುಂದಾಗಿದೆ.

ತಾವು ಆಚರಿಸದೇ ಇದ್ದರೆ, ಎಲ್ಲಿ ನಾಡಿನ ಮುಸ್ಲಿಮರು ಮುನಿದು ಕೊಳ್ಳುವರೋ ಎನ್ನುವ ಆತಂಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ್ದಾಗಿದ್ದರೆ, ಇದನ್ನು ವಿರೋಧಿಸುವುದರಿಂದಲಾದರೂ ಜನರನ್ನು ಹಿಂದೂ-ಮುಸ್ಲಿಮ್ ಎಂದು ಒಡೆದು ಒಂದಿಷ್ಟು ಮತಗಳನ್ನು ಸಂಪಾದಿಸಬಹುದೋ ಎನ್ನುವ ದುರಾಸೆಯ ಲೆಕ್ಕಾಚಾರ ಬಿಜೆಪಿ ಯದ್ದಾಗಿದೆ. ಇಲ್ಲಿ ಟಿಪ್ಪು ಸುಲ್ತಾನ್ ಒಂದು ನೆಪ ಮಾತ್ರ. ಟಿಪ್ಪು ಸುಲ್ತಾನ್ ಜಯಂತಿ ಈ ನಾಡಿನ ಮುಸ್ಲಿಮರ ಜೀವನ ಮರಣದ ಪ್ರಶ್ನೆ ಎಂದೂ ಆಗಿಲ್ಲ. ಟಿಪ್ಪು ಈ ನಾಡಿನ ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದವನೂ ಅಲ್ಲ. ಈ ನಾಡಿನ ಮುಸ್ಲಿಮರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಬೇಡಿಕೆಗಳಿಗೂ ಈ ಜಯಂತಿಗೂ ಸಂಬಂಧವೂ ಇಲ್ಲ.

ಟಿಪ್ಪುವಿನಂತಹ ನೂರಾರು ಮುಸ್ಲಿಮ್ ರಾಜರುಗಳು ಈ ದೇಶದ ವಿವಿಧ ಪ್ರಾಂತಗಳನ್ನು, ರಾಜ್ಯಗಳನ್ನು ಆಳಿ ಅಳಿದಿದ್ದಾರೆ. ದೇಶದ ಮುಸ್ಲಿಮರು ಒಬ್ಬ ರಾಜನ ಜೊತೆಗೆ ತಮ್ಮ ತಮ್ಮ ಅಸ್ಮಿತೆಗಳನ್ನೂ ಯಾವತ್ತೂ ಜೋಡಿಸಿಕೊಂಡಿಲ್ಲ. ಅದೇ ರೀತಿ ಹಿಂದೂ ಹೆಸರಿರುವ ಅರಸನೊಬ್ಬನ ಜೊತೆಗೆ ಹಿಂದೂಗಳೂ ಗುರುತಿಸಿಕೊಂಡಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ, ಶಿವಾಜಿ ಮೊಗಲರನ್ನು ಎದುರಿಸಲು ಮುಂದೆ ನಿಂತಾಗ ಆತನಿಗೆ ಹೆಗಲು ಕೊಟ್ಟವರು, ಪ್ರಾಣಕೊಟ್ಟವರು ಮುಸ್ಲಿಮರು ಮತ್ತು ದಲಿತರು. ಇದೇ ಸಂದರ್ಭದಲ್ಲಿ ಶಿವಾಜಿಗೆ ಎದುರಾಗಿ ಮೊಗಲರ ಪರವಾಗಿ ಹೋರಾಟ ಮಾಡಿದವರು ಬ್ರಾಹ್ಮಣರು, ರಜಪೂತರು. ಶಿವಾಜಿಯ 11 ಪ್ರಮುಖ ದಳಪತಿಗಳೂ ಮುಸ್ಲಿಮರಾಗಿದ್ದರು. ಆತನ ಅಂಗರಕ್ಷಕರಾಗಿದ್ದವರೂ ಮುಸ್ಲಿಮರು ಮತ್ತು ದಲಿತರು. ಶಿವಾಜಿಯನ್ನು ಹಿಂದೂ ನಾಯಕನೆಂದು ಧಾರ್ಮಿಕ ಅಸ್ಮಿತೆಯ ಮೂಲಕ ಬಿಂಬಿಸಲು ಅದೆಷ್ಟು ಪ್ರಯತ್ನಿಸಿದರೂ ಸಂಘಪರಿವಾರ ವಿಫಲವಾಗುವುದು ಇದೇ ಕಾರಣಕ್ಕೆ. ಹಾಗೆಯೇ ಟಿಪ್ಪು ಸುಲ್ತಾನ್ ಕೂಡ ಇದಕ್ಕೆ ಹೊರತಾಗಿಲ್ಲ. ಆತನ ಸೇನೆಯಲ್ಲಿ ಕೇವಲ ಮುಸ್ಲಿಮರಷ್ಟೇ ಇದ್ದುದಲ್ಲ. 1799ರ ಮೇ 4ರಂದು ನಡೆದ ಭೀಕರ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಯುದ್ಧ ಮಾಡುತ್ತಲೇ ತಮ್ಮ ಸೈನಿಕರ ಜೊತೆಗೆ ಹತನಾಗುತ್ತಾನೆ. ಈ ಸಂದರ್ಭದಲ್ಲಿ ಟಿಪ್ಪುವಿನ ಜೊತೆಗೇ 11 ಸಾವಿರ ಸೈನಿಕರ ಮಾರಣಹೋಮ ನಡೆಯುತ್ತದೆ. ಬ್ರಿಟಿಷರ ಸೇನೆಗೆ ಬಲಿಯಾದ ಈ 11 ಸಾವಿರ ಸೈನಿಕರು ಕೇವಲ ಮುಸ್ಲಿಮರು ಮಾತ್ರ ಅಲ್ಲ. ಎಲ್ಲ ಧರ್ಮಗಳಿಗೆ ಮುಖ್ಯವಾಗಿ ಹಿಂದುಳಿದ ಜಾತಿಗೆ ಸೇರಿದ ಸೈನಿಕರು ದೊಡ್ಡ ಸಂಖ್ಯೆಯಲ್ಲಿದ್ದರು. ಟಿಪ್ಪುವಿನ ಹೋರಾಟವನ್ನು ಅವಮಾನಿಸುವುದೆಂದರೆ ಈ 11 ಸಾವಿರ ಸೈನಿಕರ ಬಲಿದಾನವನ್ನು ಅವಮಾನಿಸಿದಂತೆ ಎನ್ನುವ ಎಚ್ಚರ ನಮಗಿರಬೇಕು.

ಇಷ್ಟಕ್ಕೂ, ಯಾವುದೇ ರಾಜರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟಗಳನ್ನು ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ ಹೋರಾಟ ಎಂದು ಕರೆಯುವುದಕ್ಕೆ ಸಾಧ್ಯವೇ ಇಲ್ಲ. ಎಲ್ಲ ರಾಜರುಗಳು ತಮ್ಮ ತಮ್ಮ ಸಾಮ್ರಾಜ್ಯಗಳ ಉಳಿಯುವಿಕೆಗಾಗಿ ಹೋರಾಟ ನಡೆಸಿದರೇ ಹೊರತು, ಬ್ರಿಟಿಷರನ್ನು ಭಾರತದಿಂದ ಹೊರದಬ್ಬುವುದಕ್ಕಲ್ಲ. ಈ ಕಾರಣದಿಂದಲೇ ಎರಡನೇ ಸ್ವಾತಂತ್ರ ಹೋರಾಟವನ್ನು ಕೂಡ ಸಂಪೂರ್ಣ ಸ್ವಾತಂತ್ರ ಹೋರಾಟ ಎಂದು ಭಾವಿಸುವಂತಿಲ್ಲ. ಎಲ್ಲ ತುಂಡರಸರುಗಳು ತಮ್ಮ ತಮ್ಮ ಪದವಿಗೆ ಕುತ್ತು ಬಂದಾಗ ಅದನ್ನು ಉಳಿಸಿಕೊಳ್ಳುವ ಒಂದೇ ಕಾರಣಕ್ಕಾಗಿ ಬ್ರಿಟಿಷರ ವಿರುದ್ಧ ಕತ್ತಿ ಹಿರಿದರು. ಮರಾಠರ ಅರಸ ಎರಡನೆ ಬಾಜೀರಾಯ ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಸೋತ ಬಳಿಕ ನಾನಾ ಸಾಹೇಬನ ಸ್ಥಿತಿ ಚಿಂತಾಜನಕವಾಗಿತ್ತು. ಆತನಿಗೆ ನೀಡುವ ಗೌರವಧನಕ್ಕೆ ಬ್ರಿಟಿಷರು ತಡೆ ಹಾಕಿದಾಗಷ್ಟೇ ಆತನ ದೇಶಪ್ರೇಮ ಕಣ್ಣು ಬಿಟ್ಟಿತು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನು ಲಕ್ಷ್ಮೀ ಬಾಯಿ ರಾಣಿಯಾಗಲು ತೊಡಕಾದಾಗ ಆಕೆಯೂ ಯುದ್ಧದಲ್ಲಿ ಕೈಜೋಡಿಸಿದಳು. ಬಹಾದೂರ್  ಶಾನಂತೂ ದಿಲ್ಲಿಗೆ ಸೀಮಿತವಾಗಿದ್ದ. ಈ ಕಾರಣದಿಂದ ಅನಿವಾರ್ಯವಾಗಿ ಒಂದಾಗಿ ಬ್ರಿಟಿಷರನ್ನು ಎದುರಿಸಿದರು. ಇದು ಜನರನ್ನು ತೊಡಗಿಸಿಕೊಂಡ ಹೋರಾಟವಾಗಿರಲಿಲ್ಲ.

ಒಂದು ರೀತಿಯಲ್ಲಿ ಜಮೀನ್ದಾರಿ ಒಲವುಳ್ಳ ಪಾಳೇಗಾರರು, ತುಂಡರಸರು, ಸರ್ವಾಧಿಕಾರಿ ರಾಜರುಗಳು ಮತ್ತು ಬ್ರಿಟಿಷರ ನಡುವೆ ಜನರಿಗೆ ದೊಡ್ಡ ವ್ಯತ್ಯಾಸವೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಟಿಪ್ಪು ತನ್ನ ರಾಜ್ಯವನ್ನು ಉಳಿಸುವುದಕ್ಕಾಗಿಯೇ ಶತಾಯಗತಾಯ ಹೋರಾಟ ನಡೆಸಿದ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ನಮಗಿಂದು ಟಿಪ್ಪು ಮುಖ್ಯವಾಗಬೇಕಾರುವುದು ಆತನ ಬ್ರಿಟಿಷರ ವಿರುದ್ಧದ ಹೋರಾಟಕ್ಕಿಂತಲೂ, ಒಬ್ಬ ರಾಜನಾಗಿದ್ದುಕೊಂಡು, ಆತ ನಡೆಸಿದ ಜನಪರ ಆಡಳಿತ, ಈ ನಾಡಿಗೆ ಆತ ನೀಡಿದ ಕೊಡುಗೆಗಳು ಮಾತ್ರ. ಆ ಕಾರಣಕ್ಕಾಗಿ ಸರಕಾರ ಟಿಪ್ಪುವನ್ನು ನೆನೆಯುವುದಕ್ಕೆ ಇಷ್ಟ ಪಡುತ್ತದೆ ಎಂದಾದರೆ ಮಾತ್ರ ಟಿಪ್ಪು ಜಯಂತಿ ಅರ್ಥಪೂರ್ಣತೆಯನ್ನು ಪಡೆಯುತ್ತದೆ. ಆತ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುತ್ತಾನೆ ಎನ್ನುವ ಸಣ್ಣ ಚಿಂತನೆಯನ್ನು ಇಟ್ಟುಕೊಂಡು ಟಿಪ್ಪು ಜಯಂತಿಯನ್ನು ಸರಕಾರ ಆಚರಿಸಲು ಹೊರಟರೆ ಅದು ಟಿಪ್ಪು ಎಂಬ ಮುತ್ಸದ್ದಿ, ಜನಪರ ಆಡಳಿತಗಾರನಿಗೆ ಮಾಡುವ ಅಪಮಾನವಾಗುತ್ತದೆ. ಕರ್ನಾಟಕಕ್ಕೆ ಟಿಪ್ಪು ಯಾಕೆ ಮುಖ್ಯ? ಕನ್ನಂಬಾಡಿ ಅಣಿಕಟ್ಟಿನ ಕನಸು ಕಂಡದ್ದಕ್ಕೆ.

ಇಂದಿಗೂ ಟಿಪ್ಪುವಿನ ಕನಸನ್ನು ಸಾರಿ ಹೇಳುವ ಫಲಕ ಕನ್ನಂಬಾಡಿಯ ಹೆಬ್ಬಾಗಿಲಲ್ಲಿದೆ. ಫ್ರೆಂಚ್ ಕ್ರಾಂತಿಯ ಫಲವಾಗಿ ಹುಟ್ಟಿದ ‘ಸಿಟಿಜನ್’ ಕಲ್ಪನೆಯನ್ನು ಒಬ್ಬ ಕನ್ನಡಿಗ ರಾಜನಾಗಿ ಮೊತ್ತ ಮೊದಲ ಬಾರಿ ಈ ದೇಶದಲ್ಲಿ ಪ್ರಚುರ ಪಡಿಸಿದ್ದಕ್ಕೆ. ಸಿಟಿಜನ್ ಕ್ಲಬ್, ಲಿಬರ್ಟಿ ಟ್ರೀಯಂತಹ ಆಧುನಿಕ ರಾಜಕೀಯ ಪರಿಭಾಷೆಗಳಿಗೆ ತೆರೆದುಕೊಂಡದ್ದಕ್ಕೆ. ಜಾಗತಿಕ ಕ್ರಾಂತಿಗಳ ಕುರಿತಂತೆ ಟಿಪ್ಪುವಿಗೆ ಇದ್ದ ಅಗಾಧ ಜ್ಞಾನಕ್ಕೆ. ಮಲಬಾರ್‌ನ್ನು ವಶಪಡಿಸಿಕೊಂಡು ಅಲ್ಲಿನ ನಂಬೂದಿರಿ ಬ್ರಾಹ್ಮಣರ ಜಾತೀಯತೆಗೆ ಕಡಿವಾಣ ಹಾಕಿ, ಅಲ್ಲಿನ ಹೆಣ್ಣುಮಕ್ಕಳ ರವಿಕೆ ತೆರಿಗೆಯನ್ನು ರದ್ದು ಪಡಿಸಿದ ಕನ್ನಡಿಗ ಎಂಬ ಕಾರಣಕ್ಕೆ. ಮೈಸೂರು ಸಂಸ್ಥಾನಕ್ಕೆ ಸೀಮಿತವಾಗಿದ್ದ ಕರ್ನಾಟಕವನ್ನು ಮೈಸೂರು ರಾಜ್ಯವಾಗಿ ವಿಸ್ತರಿಸಿದ್ದಕ್ಕೆ. ನಿಜಾಮರು, ಮರಾಠರ ಕೈಯಲ್ಲಿ ಹರಿದು ಹಂಚಿ ಹೋಗಬಹುದಾಗಿದ್ದ ನಾಡನ್ನು ಉಳಿಸಿಕೊಂಡದ್ದಕ್ಕೆ. ಜಮೀನ್ದಾರಿ, ಜಾಗಿರ್ದಾರಿ ಭೂಮಾಲಕತ್ವವನ್ನು ರದ್ದುಗೊಳಿಸಿ ದುಡಿಯುವ ರೈತರಿಗೇ ನೇರವಾಗಿ ಭೂಮಿಯನ್ನು ಹಂಚಿದ್ದಕ್ಕೆ. ಸುಮಾರು 200 ಪಾಳೇಗಾರರ ಕೈಯಲ್ಲಿ ಹರಿದು ಹಂಚಿ ಹೋಗಿದ್ದ ನಾಡನ್ನು ಒಂದುಗೂಡಿಸಿ, ಭೂಮಿಯನ್ನು ಅವರ ಕೈಯಿಂದ ರೈತರ ಕೈಗೆ ಹಸ್ತಾಂತರಿಸಿದ್ದು ದೊಡ್ಡ ಸಾಧನೆಯೇ ಸರಿ.

ಈ ನಾಡಿನ ದಲಿತರು ಮೊತ್ತ ಮೊದಲ ಬಾರಿ ಭೂಮಿಯ ಹಕ್ಕನ್ನು ಅಧಿಕೃತವಾಗಿ ಹೊಂದಿದ್ದು ಟಿಪ್ಪುವಿನ ಕಾಲದಲ್ಲಿ ಎನ್ನುವುದನ್ನು ಸಂಶೋಧಕರು ಹೇಳುತ್ತಾರೆ. ಫ್ರೆಂಚರ ಸಖ್ಯ ಬೆಳೆಸಿ ಅವರಿಂದ ಯಂತ್ರ, ಕೈಗಾರಿಕೆಗಳ ನೆರವು ಪಡೆದದ್ದು ಟಿಪ್ಪುವಿನ ಕಾಲದಲ್ಲಿ . ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನವನ್ನು ತಯಾರಿಸುವ ಕಾರ್ಖಾನೆಗಳ ಬಗ್ಗೆ ಆತ ಕನಸು ಕಂಡ. ಮೈಸೂರು ರೇಷ್ಮೆ ಉದ್ಯಮದ ಅಗ್ರ ರಾಜ್ಯವಾಗಿದ್ದರೆ ಅದಕ್ಕೆ ಕಾರಣ ಟಿಪ್ಪು ಸುಲ್ತಾನ್. ಚೀನಾ ಹಾಗೂ ಮಧ್ಯ ಪ್ರಾಚ್ಯಗಳಿಂದ ರೇಷ್ಮೆ ಉತ್ಪಾದನೆಯ ಜ್ಞಾನವನ್ನು ಆತ ಆಮದು ಮಾಡಿಕೊಂಡ. ಟಿಪ್ಪುವಿನ ಆಡಳಿತ ಕಾಲದಲ್ಲಿ ಕೆಳಸ್ತರದ ಜನರು ಅಧಿಕಾರಗಳನ್ನು, ಭೂಮಿಯನ್ನು ತಮ್ಮದಾಗಿಸಿಕೊಂಡರು. ಮದ್ಯ ನಿಷೇಧವನ್ನು ಘೋಷಿಸಿದ. ತನ್ನ ಬಹುತೇಕ ಬದುಕನ್ನು ಯುದ್ಧರಂಗದಲ್ಲೇ ತೊಡಗಿಸಿಕೊಳ್ಳುತ್ತಲೇ ಇಷ್ಟೆಲ್ಲವನ್ನು ಸಾಧಿಸಿದ ಎನ್ನುವುದು ಒಂದು ವಿಸ್ಮಯವೇ ಸರಿ. ತನ್ನ ವಿರುದ್ಧ ಬ್ರಿಟಿಷರ ಜೊತೆಗೆ ಕೈಜೋಡಿಸಿದ ಕೊಡವರು ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಸಿದ್ದು ಸುಳ್ಳಲ್ಲ. ಆದರೆ ಮತಾಂತರದ ಕುರಿತಂತೆ, ಹತ್ಯಾಕಾಎಂಡಗಳ ಸಂಘಪರಿವಾರ ಪ್ರತಿಪಾದಿಸುತ್ತಿರುವ ಅಂಕಿಅಂಶಗಳೆಲ್ಲವೂ ಸುಳ್ಳು ಎನ್ನುವುದನ್ನು ಈಗಾಗಲೇ ಇತಿಹಾಸಕಾರರು ಸಾಬೀತು ಪಡಿಸಿದ್ದಾರೆ.

ಆತ ಮತಾಂಧನೇ ಆಗಿದ್ದರೆ ನಿಜಾಮರೊಂದಿಗೆ ಕೈ ಜೋಡಿಸುತ್ತಿದ್ದ. ಆದರೆ ಅವರನ್ನು ಪರಮಶತ್ರುವಾಗಿ ಬಗೆದ. ಮರಾಠರು ಶೃಂಗೇರಿ ಶಾರದಾ ಪೀಠವನ್ನು ಧ್ವಂಸಗೊಳಿಸಿದರು. ಟಿಪ್ಪು ಅದನ್ನು ಪುನರುಜ್ಜೀವನಗೊಳಿಸಿದ. ನಂಜನಗೂಡಿನ ದೇವಾಲಯದಲ್ಲಿ ಪಚ್ಚೆಲಿಂಗ ಸ್ಥಾಪನೆ, ದೇವನಕೋಟೆಯ ವೇಣುಗೋಪಾಲ ಸ್ವಾಮಿ, ತಮಿಳುನಾಡಿನ ನಾಮಕಲ್ ಕೋಟೆಯಲ್ಲಿರುವ ರಂಗನಾಥ ಸ್ವಾಮಿ, ನರಸಿಂಹಸ್ವಾಮಿ, ಬಾದಾಮಿ ವಾತಾಪಿ...ಹೀಗೆ ಹಲವು ದೇವಸ್ಥಾನಗಳಿಗೆ ಆತ ನೀಡಿದ ಹಣಕಾಸಿನ ನೆರವುಗಳಿಗೆ ಇಂದಿಗೂ ದಾಖಲೆಗಳಿವೆ. ಕೊಲ್ಲೂರು ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಇಂದಿಗೂ ಟಿಪ್ಪುವಿನ ಹೆಸರಿನಲ್ಲಿ ಅರ್ಚನೆಗಳು ನಡೆಯುತ್ತಿವೆ. ಟಿಪ್ಪುವಿನ ರಾಜಧಾನಿಯಾಗಿರುವ ಶ್ರೀರಂಗಪಟ್ಟಣದಲ್ಲೇ ರಂಗನಾಥಸ್ವಾಮಿ ದೇವಸ್ಥಾನ ತಲೆಯೆತ್ತಿ ಸಾರುತ್ತಿದೆ, ಟಿಪ್ಪುವಿನ ಸರ್ವಧರ್ಮಸಮನ್ವಯವನ್ನು. ಟಿಪ್ಪುವಿನ ಕಾಲದ ನಾಣ್ಯಗಳಲ್ಲಿರುವ ಲಾಂಛನಗಳಲ್ಲಿ ತ್ರಿಶೂಲ, ಲಕ್ಷ್ಮೀದೇವಿಯ ಕೆತ್ತನೆಗಳಿವೆ. ವಿಶ್ವದ ಮೊತ್ತ ಮೊದಲ ರಾಕೆಟ್‌ಗಳನ್ನು ಹೈದರ್ ಬಳಸಿದ್ದ. ಇದನ್ನು ಬ್ರಿಟಿಷರೇ ಇತಿಹಾಸದಲ್ಲಿ ದಾಖಲಿಸುತ್ತಾರೆ. ನಾಸಾ ಇಂದಿಗೂ ಅದಕ್ಕಾಗಿ ಟಿಪ್ಪುವನ್ನು ಸ್ಮರಿಸುತ್ತದೆ. ಟಿಪ್ಪುವಿನ ಈ ಸಾಧನೆಗಳೆಲ್ಲವೂ ಕನ್ನಡ ಅಸ್ಮಿತೆಗೆ ಸಲ್ಲಬೇಕಾದವುಗಳು.

ಇವುಗಳನ್ನು ನಿರಾಕರಿಸುವುದೆಂದರೆ ನಾವು ನಮ್ಮ ಕನ್ನಡದ ಶ್ರೇಷ್ಠ ಇತಿಹಾಸದ ಸುವರ್ಣ ಭಾಗವನ್ನೇ ರಾಜಕೀಯ ದುರುದ್ದೇಶಕ್ಕಾಗಿ ಕತ್ತರಿಸಿ ಎಸೆದಂತೆ. ಇತರ ರಾಜ್ಯಗಳ ಜನರು ತಮ್ಮ ರಾಜರ ಬಗ್ಗೆ ಬರೆದಿರುವ ಅಮರ ಚಿತ್ರ ಕತೆಗಳನ್ನೇ ಇತಿಹಾಸವೆಂದು ಬಿಂಬಿಸಿ ನಂಬಿಸಲು ಹೊರಟಿರುವಾಗ, ಟಿಪ್ಪುವಿನಂತಹ ಮಹಾ ನಾಯಕನೊಬ್ಬನನ್ನು ಈ ನಾಡು ವಿಶ್ವಕ್ಕೆ ಕೊಟ್ಟಿದೆ ಎನ್ನುವುದನ್ನು ಘೋಷಿಸುವುದಕ್ಕಾಗಿ ಟಿಪ್ಪು ಜಯಂತಿಯನ್ನು ಆಚರಿಸಬೇಕು. ಆ ಜಯಂತಿಯ ಲಾಭ ಇಡೀ ಕರ್ನಾಟಕದ ಆತ್ಮಗೌರವಕ್ಕೆ ಸಂಬಂಧಪಟ್ಟದ್ದು. ಟಿಪ್ಪುವನ್ನು ಮತಾಂಧ ಎನ್ನುತ್ತಾ ಆತನ ಇತಿಹಾಸವನ್ನು ವಿರೂಪಗೊಳಿಸಲು ಯತ್ನಿಸುವವರು ಪರೋಕ್ಷವಾಗಿ ಈ ನಾಡಿನ ಹಿರಿಮೆಯನ್ನು ವಿರೂಪಗೊಳಿಸುತ್ತಿದ್ದಾರೆ. ಕನಿಷ್ಠ ಟಿಪ್ಪುವಿನ ಆಡಳಿತದ ಸಾಧನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸಲು ಸಾಧ್ಯವಾದರೂ, ಟಿಪ್ಪು ಜಯಂತಿ ಅರ್ಥಪೂರ್ಣವಾದಂತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News