ಮೈತ್ರಿ ಸರಕಾರವೇ ಕೋಮಾ ಸ್ಥಿತಿಯಲ್ಲಿದೆ: ಶಾಸಕ ಸಿ.ಟಿ.ರವಿ

Update: 2018-11-10 12:31 GMT

ಚಿಕ್ಕಮಗಳೂರು, ನ.10: ಟಿಪ್ಪು ಜಯಂತಿ ಆಚರಣೆಗೆ ಇಡೀ ರಾಜ್ಯ ವಿರೋಧ ವ್ಯಕ್ತಪಡಿಸಿದೆ. ಆದರೂ ಸಿಎಂ ಕುಮಾರಸ್ವಾಮಿ ಓಟ್ ಬ್ಯಾಂಕ್ ತಪ್ಪಿ ಹೋಗುವ ಭಯದಿಂದ ಜಯಂತಿ ಆಚರಣೆಗೆ ಆದೇಶ ನೀಡಿದ್ದಾರೆ. ಇದರ ಪರಿಣಾಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೂ ಸಿಎಂ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ವಿಶ್ರಾಂತಿ ಪಡೆಯುತ್ತಿಲ್ಲ. ಬದಲಾಗಿ ಇಡೀ ಮೈತ್ರಿ ಸರಕಾರವೇ ಕೋಮಾ ಸ್ಥಿತಿಯಲ್ಲಿದೆ ಎಂದು ಶಾಸಕ ಸಿ.ಟಿ.ರವಿ ಟೀಕಿಸಿದ್ದಾರೆ.

ಶನಿವಾರ ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರಕ್ಕೆ ಪ್ರಸಕ್ತ ಅಸ್ತಿತ್ವವಿಲ್ಲದಂತಾಗಿದೆ. ಟಿಪ್ಪು ಜಯಂತಿ ಮೂಲಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಸರಕಾರದ ಇರುವ ಬಗ್ಗೆ ಅಭಿವೃದ್ಧಿಯ ಮೂಲಕ ತೋರಿಸಬೇಕಿತ್ತು. ಆದರೆ ಸಿಎಂ ಟಿಪ್ಪು ಜಯಂತಿ ಮೂಲಕ ಸರಕಾರದ ಬದುಕಿದೆ ಎಂಬುದನ್ನು ಸಾಕ್ಷಾತ್ಕಾರ ಮಾಡಲು ಮುಂದಾಗಿದೆ ಎಂದು ಟೀಕಿಸಿದರು. 

ಸಿಎಂ ಕುಮಾರಸ್ವಾಮಿ ವಿಶ್ರಾಂತಿಗೆ ತೆರಳುತ್ತಿರುವುದು ನಮಗೆ ಮುಖ್ಯವೇ ಅಲ್ಲ. ಅವರದ್ದು ಜನವಿರೋಧಿ ಮೈತ್ರಿ ಸರಕಾರವಾಗಿದ್ದು, ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕೋಮಾ ಸ್ಥಿತಿಯಯಲ್ಲಿದೆ ಎಂದ ಅವರು, ಟಿಪ್ಪು ಜಯಂತಿಗೆ ಜನವಿರೋಧ ಇರುವುದನ್ನು ಗಮನಿಸಿಯಾದರೂ ಮುಂದೆ ಇದನ್ನು ನಿಲ್ಲಸಬೇಕೆಂದರು.

ಮುಂದಿನ ದಿನಗಳಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದನ್ನು ಯಾರೂ ತಡೆಯಲಾಗುವುದಿಲ್ಲ. ಆಗ ಟಿಪ್ಪು ಜಯಂತಿಯನ್ನು ಬಿಜೆಪಿ ಸರಕಾರ ನಿಷೇಧಿಸಲಿದೆ. ಇದಕ್ಕೆ ಬದಲಾಗಿ ಸಂತ ಶಿಶುನಾಳ ಶರೀಫರ ಜಯಂತಿಯನ್ನು ಆಚರಣೆಗೆ ತರದಲಿದೆ ಎಂದ ಅವರು, ಕನ್ನಡ ವಿರೋಧಿ, ಹಿಂದೂ ದೇವಾಲಯಗಳ ಭಜಂಕನಾದ ಟಿಪ್ಪು ಜಯಂತಿಗೆ ಬಿಜೆಪಿಯ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.

ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ಶನಿವಾರ ನಗರದಲ್ಲಿ ಮೌನ ಪ್ರತಿಭಟನೆಯನ್ನು ನಡೆಸಿದ್ದೇನೆ. ಈ ವೇಳೆ ಪೊಲೀಸರು ಅಡ್ಡಿ ಪಡಿಸಿದ್ದಾರೆ. ಈ ಮೂಲಕ ಅವರು ಪ್ರಜಾಪ್ರಭುತ್ವದಲ್ಲಿನ ಪ್ರತಿಭಟನೆಯ ಹಕ್ಕನ್ನು ಕಸಿದಿದ್ದಾರೆ. ಇದು ಮೈತ್ರಿ ಸರಕಾರದ ಸಂವಿಧಾನ ವಿರೋಧಿ ನಿಲುವು ಎಂದು ಆಕ್ರೋಶ ವ್ಯಕ್ತಪಡಿಸಿದರು.
---------------------------------------------------------------------------------------------

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News