ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಜೀವಜಂತುಗಳನ್ನು ಕತ್ತರಿಸುವ ಹಾಗಿಲ್ಲ: ಶಿಕ್ಷಣ ಇಲಾಖೆ ಸುತ್ತೋಲೆ
ಬೆಂಗಳೂರು, ನ. 10: ವಿಜ್ಞಾನ ವಿದ್ಯಾರ್ಥಿಗಳು ಅಂಗರಚನೆ ಅಧ್ಯಯನ ಮಾಡಲು ಇನ್ನು ಮುಂದೆ ಪ್ರಾಣಿಗಳು ಹಾಗೂ ಜೀವ ಜಂತುಗಳನ್ನು ಕತ್ತರಿಸುವ ಹಾಗಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಪೀಪಲ್ ಫಾರ್ ದಿ ಯಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ ಸಂಸ್ಥೆ ಸಲಹೆಗಾರ ಡಾ.ರೋಹಿತ್ ಭಾಟಿಯಾ ಈ ಕುರಿತು ಶಿಕ್ಷಣ ಇಲಾಖೆಗೆ ಪತ್ರ ಬರೆದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಉಭಯ ಚರಗಳು ಹಾಗೂ ಕೆಲವು ಕೀಟಗಳನ್ನು ಕೊಲ್ಲುವಂತಿಲ್ಲ ಎಂದು ಸೂಚಿಸಿದ್ದರು. ಇದನ್ನು ಪರಿಗಣಿಸಿರುವ ಪಿಯು ಶಿಕ್ಷಣ ಇಲಾಖೆ ಇದೀಗ ಸುತ್ತೋಲೆ ಹೊರಡಿಸುವ ಮೂಲಕ ಜೀವಜಂತುಗಳ ರಕ್ಷಣೆಗೆ ಕೈಜೋಡಿಸಲು ಮುಂದಾಗಿದೆ.
ಈ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿ ಪ್ರಾಣಿ ಹಾಗೂ ಜೀವಜಂತುಗಳನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸುವುದು ಭೂಮಿ ತಾಪಮಾನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪದವಿಪೂರ್ವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಜೀವಶಾಸ್ತ್ರ ಕುರಿತಂತೆ ತರಬೇತಿ ನೀಡುವ ವೇಳೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಅಂಗರಚನೆ ಕುರಿತಂತೆ ಬೋಧಿಸುವ ಮೂಲಕ ಜೀವವೈವಿಧ್ಯತೆಯನ್ನು ರಕ್ಷಿಸಬೇಕಿದೆ ಹಾಗೂ ಕಾಲೇಜು ಪ್ರಾಂಶುಪಾಲರು, ಅಧ್ಯಾಪಕರು ಇಲಾಖೆಯ ನಿರ್ಧಾರವನ್ನು ಬೆಂಬಲಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ವಿಜ್ಞಾನ ವಿದ್ಯಾರ್ಥಿಗಳು ಜೀರ್ಣಾಂಗ ವ್ಯವಸ್ಥೆ, ರಕ್ತಪರಿಚಲನೆ, ಅಂಗರಚನೆ ಅಧ್ಯಯನಕ್ಕಾಗಿ ಕಪ್ಪೆ, ಮೀನು, ಜಿರಲೆ ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಡಿಸೆಕ್ಷನ್ ಮಾಡುವ ಮೂಲಕ ಅರಿತುಕೊಳ್ಳಲು ಯತ್ನಿಸುತ್ತಿದ್ದರು. ಆದರೆ, ಇಂತಹ ಅಧ್ಯಯನಕ್ಕೆ ಇನ್ನು ಮುಂದೆ ಪ್ರಾಣಿಗಳನ್ನು ಬಳಸಿಕೊಳ್ಳುವಂತಿಲ್ಲ.