ಟಿ.ಬಿ.ಜಯಚಂದ್ರರನ್ನು ಗಲ್ಲಿಗೇರಿಸಿ: ಮಾಜಿ ಸಚಿವ ಸೊಗಡು ಶಿವಣ್ಣ
ತುಮಕೂರು,ನ.10: ನೋಟು ಬ್ಯಾನ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಜೀವಂತ ಸುಡಬೇಕೆಂಬ ಹೇಳಿಕೆ ನೀಡಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ವಿರುದ್ಧ ಸರಕಾರ ಸ್ವಯಂ ಪ್ರೇರಿತ ದೇಶವಿರೋಧಿ ಪ್ರಕರಣ ದಾಖಲಿಸಿ ಗಲ್ಲಿಗೇರಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇಡೀ ಪ್ರಪಂಚವೇ ನರೇಂದ್ರ ಮೋದಿ ಅವರನ್ನು ಒಪ್ಪಿಕೊಂಡಿರುವಾಗ, ಅವರ ಮುಂದೆ ಒಂದು ಕೆಟ್ಟ ಸೊಳ್ಳೆಯಂತಿರುವ ಟಿ.ಬಿ.ಜಯಚಂದ್ರ, ಅರೆಪ್ರಜ್ಞಾವಂತನಂತೆ ಜೀವಂತ ಸುಡುವ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಸರಕಾರ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಸ್ವಯಂ ಪ್ರೇರಿತ ದೂರು ದಾಖಲಿಸಿ, ಬಂಧಿಸಿ, ಗೆಲ್ಲಿಗೇರಿಸಬೇಕು ಎಂದರು.
ಕಳೆದ 70 ವರ್ಷಗಳಿಂದ ನೆಹರೂ ಅವರ ಕೆಟ್ಟ ಸಂತತಿಯನ್ನು ಹೊತ್ತು ತಿರುಗುತ್ತಿರುವ ಟಿ.ಬಿ.ಜಯಚಂದ್ರನಂತಹ ಕೆಟ್ಟ ಸೊಳ್ಳೆಗಳಿಂದ ದೇಶಕ್ಕೆ ಒದಗಿದ್ದ ಭಯೋತ್ಪಾದನೆಯಂತಹ ಆಪತ್ತುಗಳನ್ನು ತಡೆಯುವ ಉದ್ದೇಶದಿಂದ ನೋಟು ಬ್ಯಾನ್ ಮಾಡಲಾಯಿತು. ಇದರ ಫಲವಾಗಿ ದೇಶದ 18 ಸಾವಿರ ಹಳ್ಳಿಗಳು ವಿದ್ಯುತ್ ಕಾಣುವಂತಾಗಿದೆ. ನಕ್ಸಲೇಟ್ ಹಾವಳಿಯನ್ನು ಮಟ್ಟಹಾಕಲಾಗಿದೆ ಎಂದರು.
ಶಿರಾ ನಗರಕ್ಕೆ ಕಸ್ತೂರಿ ರಂಗಪ್ಪ ನಾಯಕ ಕೋಟೆ ಎಂದು, ಶಿರಾ ತಾಲೂಕಿಗೆ ಸ್ಪಟಿಕಪುರಿ ಎಂದು ಮರು ನಾಮಕರಣ ಮಾಡಬೇಕು. ಶಿರಾ ಪಟ್ಟಣ ನಿರ್ಮಾಣಕ್ಕೆ ಕಸ್ತೂರಿ ರಂಗಪ್ಪನಾಯಕನ ಕೊಡುಗೆ ಆಪಾರ. ಇದನ್ನು ಮನಗಾಣಬೇಕು ಎಂದರು. ಉಪ್ಪು ತಿಂದವನು ನೀರು ಕುಡಿಯುತ್ತಾನೆ. ಜನಾರ್ದನ ರೆಡ್ಡಿ ತಪ್ಪು ಮಾಡಿದ್ದರೆ ಜೈಲು ಶಿಕ್ಷೆ ಅನುಭವಿಸಲಿ. ಈಗಾಗಲೇ ಪಕ್ಷದ ಮುಖಂಡರು ಈ ವಿಚಾರದಲ್ಲಿ ಸ್ಪಷ್ಟಣೆ ನೀಡಿದ್ದಾರೆ ಎಂದು ಸೊಗಡು ಶಿವಣ್ಣ ನುಡಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ಶಾಂತರಾಜು, ಮೋಹನ್, ಬನಶಂಕರಿ ಬಾಬು ಮತ್ತಿತರರು ಉಪಸ್ಥಿತರಿದ್ದರು.