ಟಿಪ್ಪು ಸುಲ್ತಾನ್ ಹಿಂದೂ ವಿರೋಧಿಯಾಗಿರಲಿಲ್ಲ: ಸಾಹಿತಿ ರಂಜಾನ್ ದರ್ಗಾ
ವಿಜಯಪುರ, ನ.10: ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಹಿಂದೂಗಳ ವಿರೋಧಿಯಾಗಿರಲಿಲ್ಲ. ಅದೇ ರೀತಿ ಛತ್ರಪತಿ ಶಿವಾಜಿ ಕೂಡ ಮುಸ್ಲಿಮರ ವಿರೋಧಿಯಾಗಿರಲಿಲ್ಲ ಎಂದು ಹಿರಿಯ ಸಾಹಿತಿ, ‘ವಾರ್ತಾಭಾರತಿ’ ಅಂಕಣಕಾರ ರಂಜಾನ್ ದರ್ಗಾ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಲಾಗಿದ್ದ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಬ್ರಿಟಿಷರು ಇತಿಹಾಸವನ್ನು ತಿರುಚಿದ ಪರಿಣಾಮವಾಗಿ ಟಿಪ್ಪು ಸುಲ್ತಾನ್‌ರನ್ನು ಹಿಂದೂಗಳ ವಿರೋಧಿ ಎಂದು ಕೆಲವರು ತಮ್ಮ ಸ್ವಾರ್ಥ, ಮತ ರಾಜಕೀಯಕ್ಕಾಗಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು.
ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಪ್ರಥಮ ಹೋರಾಟಗಾರ ಟಿಪ್ಪುಸುಲ್ತಾನ್. ದೀನ, ದಲಿತರು, ಹಿಂದುಳಿದವರ ಏಳಿಗೆಗೆ ಅವರು ಶ್ರಮಿಸಿದ್ದರು. ರಾಜಕೀಯ ಸ್ವಾರ್ಥಕ್ಕಾಗಿ ಟಿಪ್ಪು ಜಯಂತಿಯನ್ನು ವಿರೋಧಿಸುವುದು ಸರಿಯಲ್ಲ ಎಂದು ರಂಜಾನ್ ದರ್ಗಾ ಹೇಳಿದರು.
ಬ್ರಿಟಿಷರ ವಿರುದ್ಧ ಟಿಪ್ಪುಸುಲ್ತಾನ್ ಹೋರಾಟ ಮಾಡುವಾಗ, ಹೈದರಾಬಾದಿನ ನಿಜಾಮರು ಬ್ರಿಟಿಷರೊಂದಿಗೆ ಕೈ ಜೋಡಿಸಿದ್ದರು. ಏಕಾಂಗಿಯಾಗಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು. ಇತಿಹಾಸವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬ್ರಿಟಿಷರು ತಿರುಚಿದ್ದಾರೆ. ಇದನ್ನೆ ಮುಂದಿಟ್ಟುಕೊಂಡು ಕೆಲವು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಅವರು ತಿಳಿಸಿದರು..
ಛತ್ರಪತಿ ಶಿವಾಜಿ ಕೇವಲ ಹಿಂದೂಗಳ ದೊರೆಯಾಗಿರಲಿಲ್ಲ. ತಮ್ಮ ಮನೆಯ ಪಕ್ಕದಲ್ಲೆ ಅವರು ಮಸೀದಿ ನಿರ್ಮಿಸಿದ್ದರು. ಅದೇ ರೀತಿ ಟಿಪ್ಪು ಸುಲ್ತಾನ್ ಶೃಂಗೇರಿಯ ಶಾರದಾಪೀಠದ ರಕ್ಷಣೆ ನಿಂತಿದ್ದರು. ಇಂದಿಗೂ ನಮ್ಮ ರಾಜ್ಯದ ಸುಮಾರು 156 ಮಂದಿರಗಳಲ್ಲಿ ಟಿಪ್ಪುಸುಲ್ತಾನ್ ಹೆಸರಿನಲ್ಲಿ ಪ್ರತಿನಿತ್ಯ ಪ್ರಾರ್ಥನೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಮುಸ್ಲಿಮ್ ಯುವಕರು ಶಿವಾಜಿಯ ಜಯಂತಿಯನ್ನು ಆಚರಿಸಬೇಕು. ಟಿಪ್ಪು ಸುಲ್ತಾನ್‌ಗೆ ನೀಡುವ ಗೌರವವನ್ನು ಶಿವಾಜಿಗೂ ನೀಡಬೇಕು. ಶಿವಾಜಿ ತಮ್ಮ ಆಡಳಿತಾವಧಿಯಲ್ಲಿ 23 ಮಂದಿ ಮುಸ್ಲಿಮ್ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದರು ಎಂದು ರಂಜಾನ್ ದರ್ಗಾ ಹೇಳಿದರು.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯ ಸರಕಾರದ ವತಿಯಿಂದ ಪ್ರಕಟವಾದ ಪ್ರೊ.ಬಿ.ಶೇಖ್ ಅಲಿ ಅವರ ಪುಸ್ತಕದಲ್ಲಿ ಟಿಪ್ಪುಸುಲ್ತಾನ್ ಸಾಧನೆಗಳನ್ನು ಕೊಂಡಾಡಿದ್ದಾರೆ. ಆದರೆ, ಇವತ್ತು ಮತಗಳಿಗಾಗಿ ಟಿಪ್ಪುವನ್ನು ವಿರೋಧ ಮಾಡುತ್ತಿದ್ದಾರೆ. ಇಂತಹವರಿಂದ ಹಿಂದೂ ಹಾಗೂ ಮುಸ್ಲಿಮರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದರು.