ಬಂಡೀಪುರ ಅಭಯಾರಣ್ಯ: ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸದಂತೆ ಆಗ್ರಹಿಸಿ ಆನ್‌ಲೈನ್ ಅಭಿಯಾನ

Update: 2018-11-10 15:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.10: ಸಂರಕ್ಷಿತ ಬಂಡೀಪುರ ಅಭಯಾರಣ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬಾರದು ಎಂದು ವನ್ಯಜೀವಿ ಸಂರಕ್ಷಣಾ ಹೋರಾಟಗಾರರು ಆನ್‌ಲೈನ್ ಅಭಿಯಾನ ನಡೆಸುತ್ತಿದ್ದಾರೆ.

ಬಂಡೀಪುರ ಟ್ರಾಫಿಕ್ ಬೇಡ ಎಂಬ ಶೀರ್ಷಿಕೆ ಅಡಿಯಲ್ಲಿ ‘ಪ್ಲೀಸ್ ಸೇವ್ ಬಂಡೀಪುರ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಅಭಿಯಾನವನ್ನು ಆರಂಭ ಮಾಡಿದ್ದು, ಶನಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ವನ್ಯಜೀವಿ ಸಂರಕ್ಷಣಾ ಹೋರಾಟಗಾರರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ಪುನರಾರಂಭಿಸುವ ಬಗ್ಗೆ ಕೇಂದ್ರ ಸರಕಾರದ ಮೂಲಕ ಕೇರಳ ರಾಜ್ಯ ಲಾಬಿ ಆರಂಭಿಸಿದೆ ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ಆರಂಭಿಸಿ, ಕೇರಳ ಸರಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇದಕ್ಕೆ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳದಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಆಗ್ರಹಿಸಿದ್ದಾರೆ.

ಅಭಿಯಾನ ಹೇಗೆ: ‘ಪ್ಲೀಸ್ ಸೇವ್ ಬಂಡೀಪುರ’ ಹೆಸರಿನಲ್ಲಿ ಆರಂಭಿಸಿರುವ ಅಭಿಯಾನದಲ್ಲಿ ಬಂಡೀಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಮಯದಲ್ಲಿ ವಾಹನ ಸಂಚಾರ ನಿಷೇಧಿಸಿರುವ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ. ಈಗಾಗಲೇ ವಾಟ್ಸಪ್, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಭಿಯಾನದ ಮನವಿಗೆ ಈವರೆಗೆ 24 ಸಾವಿರಕ್ಕೂ ಹೆಚ್ಚು ಮಂದಿ ಸಹಿ ಹಾಕುವ ಮೂಲಕ ಬೆಂಬಲ ನೀಡಿದ್ದಾರೆ. ಈ ಸಂದೇಶವನ್ನು ತಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಹೀಗೆ ಒಬ್ಬರಿಂದ ಒಬ್ಬರಿಗೆ ರವಾನಿಸಿ ಅಭಿಯಾನಕ್ಕೆ ಕೈಜೋಡಿಸುವಂತೆ ಕೋರಲಾಗಿದೆ.

ಮನವಿಯಲ್ಲಿ ಏನಿದೆ: ಬಂಡೀಪುರ ಅಭಯಾರಣ್ಯ ಹುಲಿ ಸಂರಕ್ಷಣಾ ಪ್ರದೇಶವಾಗಿದ್ದು, ದೇಶದ ಅತಿ ದೊಡ್ಡ ಅರಣ್ಯಪ್ರದೇಶಗಳಲ್ಲಿ ಒಂದಾಗಿದೆ. ಹೀಗಾಗಿ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿ(ಎನ್‌ಎಚ್-67 ಮತ್ತು ಎನ್‌ಎಚ್-212)ಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸುವುದರಿಂದ ಅನೇಕ ಕಾಡು ಪ್ರಾಣಿಗಳ ಉಳಿವಿಗೆ ಕಾರಣವಾಗಿದೆ.

ಅಲ್ಲದೆ ಈ ಹಿಂದೆ ಹೈಕೋರ್ಟ್ ಆದೇಶದಂತೆ ಬಂಡೀಪುರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಬಂದ್ ಮಾಡಲಾಗಿದೆ. ಹೀಗಿದ್ದರೂ ತುರ್ತು ವಾಹನಗಳು ಹಾಗೂ 16 ಸಾರಿಗೆ ಬಸ್‌ಗಳು ರಾತ್ರಿ ಹೊತ್ತಿನಲ್ಲಿ ಇದೇ ಮಾರ್ಗವಾಗಿ ಸಂಚರಿಸಲು ಅನುಮತಿ ನೀಡಲಾಗಿದೆ. ಅಲ್ಲದೆ ಇಲ್ಲಿನ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರದಿಂದ ವನ್ಯಜೀವಿಗಳ ಸಾವಿನ ಬಗ್ಗೆ ಸಾಕಷ್ಟು ದಾಖಲೆಗಳು ಮತ್ತು ವೈಜ್ಞಾನಿಕ ಅಧ್ಯಯನಗಳು ಇವೆ. ಜತೆಗೆ ಬಂಡಿಪುರ- ನಾಗರಹೊಳೆ-ಮುದುಮಲೈನಲ್ಲಿ ನಡೆಸಿದ ವೈಜ್ಞಾನಿಕ ಅಧ್ಯಯನದಿಂದ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರದಿಂದ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.

ಕೋರ್ಟ್ ನೀಡಿದ ತೀರ್ಪಿನ ಆದೇಶದ ಹಿನ್ನೆಲೆಯಲ್ಲಿ ನೇಮಕಗೊಂಡಿದ್ದ ವಿಶೇಷ ಸಮಿತಿ ಬೆಳಗ್ಗೆ 6 ರಿಂದ ಸಂಜೆ 6 ರವರೆಗೂ ನಿಷೇಧ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ, ಹಿಂದಿನ ಮುಖ್ಯಮಂತ್ರಿಗಳು ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧ ಮಾಡುವುದಕ್ಕೆ ಆದೇಶಿಸಿದ್ದರು. ಆದುದರಿಂದಾಗಿ, ಇಂದಿನ ಸಿಎಂ ಕುಮಾರಸ್ವಾಮಿಯೂ ರಾತ್ರಿ ವಾಹನ ಸಂಚಾರ ನಿಷೇಧಕ್ಕೆ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News