ಮಹಾನ್ ನಾಯಕರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದಿರಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

Update: 2018-11-10 16:16 GMT

ಬೆಳಗಾವಿ, ನ.10: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ‘ಮೈಸೂರು ಹುಲಿ’ ಹಝ್ರತ್ ಟಿಪ್ಪು ಸುಲ್ತಾನ್‌ರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಶನಿವಾರ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಆಯೋಜಿಸಿದ್ದ ಹಝ್ರತ್ ಟಿಪ್ಪುಸುಲ್ತಾನ್ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಟಿಪ್ಪುಸುಲ್ತಾನರ ಧೈರ್ಯ, ಸಾಹಸ, ಹೋರಾಟ, ಸಾಮಾಜಿಕ ಕಳಕಳಿ ಪ್ರತಿಯೊಬ್ಬರಿಗೂ ಮಾದರಿ. ರೈತರು ಹಾಗೂ ದೀನದಲಿತರ ಏಳಿಗೆಗೆ ಅವರು ಶ್ರಮಿಸಿದರು. ಟಿಪ್ಪು ಸುಲ್ತಾನ್ ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷರೊಡನೆ ವೀರಾವೇಶದಿಂದ ಹೋರಾಡಿದರು. ತನ್ನ ಮಕ್ಕಳನ್ನು ಸಹ ಒತ್ತೆ ಇಟ್ಟರು. ತನ್ನ ಉಸಿರಿನ ಕೊನೆಯವರೆಗೂ ರಾಜ್ಯದ ಉಳಿಗಾಗಿ ಹೋರಾಟ ನಡೆಸಿದರು ಎಂದು ಅವರು ಹೇಳಿದರು.

ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ, ಟಿಪ್ಪುಸುಲ್ತಾನ್ ಮಹಾನ್ ನಾಯಕ. ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ಜಾರಿಗೊಳಿಸಿದ್ದರು. ಮೈಸೂರು ಪ್ರಾಂತ್ಯಕ್ಕೆ ಟಿಪ್ಪುವಿನ ಕೊಡುಗೆ ಅಪಾರ ಎಂದರು.

ಟಿಪ್ಪು ಕನ್ನಡಾಭಿಮಾನಿಯಾಗಿದ್ದರು, ತಮ್ಮ ಆಡಳಿತದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡಿದ್ದರು. ಟಿಪ್ಪು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಿಲ್ಲ. ಟಿಪ್ಪು ಪಾರ್ಸಿ ಭಾಷೆಯನ್ನು ಹೇರಿದ್ದರೆ ಮೈಸೂರು ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗಿರುತ್ತಿತ್ತು. ಕರ್ನಾಟಕದಲ್ಲಿ ರೇಷ್ಮೆ ಪ್ರಸಿದ್ಧಿಯಾಗಲು ಟಿಪ್ಪು ಕಾರಣ. ಯುದ್ಧದ ಸಂದರ್ಭದಲ್ಲಿ ಕ್ಷಿಪಣಿಗಳನ್ನು ಬಳಸಿದ ಪ್ರಥಮ ಹೋರಾಟಗಾರ ಟಿಪ್ಪು ಎಂದು ಅವರು ತಿಳಿಸಿದರು.

ಮೌಲಾನ ಮುಶ್ತಾಕ್ ಅಹಮದ್ ಅಶ್ರಫಿ ಉಪನ್ಯಾಸ ನೀಡಿ, ಟಿಪ್ಪುಚಿಕ್ಕ ವಯಸ್ಸಿನಲ್ಲೇ ಶೌರ್ಯ, ಸಾಹಸ ಅಳವಡಿಸಿಕೊಂಡಿದ್ದರು. ಟಿಪ್ಪು ಎಂದಿಗೂ ಸುಳ್ಳು ಹೇಳಲಿಲ್ಲ. ಪರ ಸ್ತ್ರೀಯರೊಂದಿಗೆ ಅಗೌರವದಿಂದ ನಡೆದುಕೊಂಡಿಲ್ಲ. ಇಂದಿನ ಮಕ್ಕಳು, ಯುವಕರು ಟಿಪ್ಪುವಿನ ತತ್ವಾದರ್ಶ ಪಾಲಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಅರುಣ ಕಟಾಂಬಳೆ ವಹಿಸಿದ್ದರು. ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಬಿ.ಬೂದೆಪ್ಪ, ತಹಶೀಲ್ದಾರ್ ಮಂಜುಳಾ ನಾಯಕ, ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಅಧಿಕಾರಿ ಪುಂಡಲೀಕ ಅನವಾಲ, ಸಮಾಜದ ಮುಖಂಡರಾದ ಫಯಾಝ್ ಅಹ್ಮದ್ ಸೌದಾಗರ, ಆರೀಫ್ ಕಟಗೇರಿ, ಫೈಝಲ್ ಮುಲ್ಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News