×
Ad

ನಾಡಿನ ಅಭಿವೃದ್ದಿಗೆ ಟಿಪ್ಪು ನೀಡಿದ ಕೊಡುಗೆಯನ್ನು ಕನ್ನಡಿಗರು ಮರೆಯುವಂತಿಲ್ಲ: ಸಂಸದ ಮುದ್ದಹನುಮೇಗೌಡ

Update: 2018-11-10 22:03 IST

ತುಮಕೂರು,ನ.10: ಸ್ವಾತಂತ್ರ ಹೋರಾಟಕ್ಕೆ ಟಿಪ್ಪು ನೀಡಿದ ಕೊಡುಗೆಯನ್ನು ಕನ್ನಡಿಗರಾದ ನಾವುಗಳು ಮರೆಯುವಂತಿಲ್ಲ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದ್ದಾರೆ.

ನಗರದ ಬಾಲಭವನದಲ್ಲಿ ಜಿಲ್ಲಾಡಳಿತ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಹಾಗೂ ನಗರಪಾಲಿಕೆ ವತಿಯಿಂದ ಆಯೋಜಿಸಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅವರ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಸಾಮಾಜ್ರ್ಯ ವಿಸ್ತರಣೆಯ ಕಾಲದಲ್ಲಿ ಆದ ಕೆಲ ಘಟನಗಳನ್ನೇ ಮುಂದಿಟ್ಟುಕೊಂಡು ಸಣ್ಣತನ ಪ್ರದರ್ಶಿಸುವುದನ್ನು ಬಿಟ್ಟು, ಹೃದಯ ವೈಶಾಲ್ಯತೆ ತೋರುವುವಂತೆ ಟಿಪ್ಪು ಜಯಂತಿ ವಿರೋಧಿಸುತ್ತಿರುವ ಬಿಜೆಪಿ, ಬಜರಂಗದಳ, ವಿಹೆಚ್‍ಪಿ ಹಾಗೂ ಇನ್ನಿತರ ಸಂಘಟನೆಳಿಗೆ ಕಿವಿ ಮಾತು ಹೇಳಿದರು.

ಕರ್ನಾಟಕ ಇಡೀ ವಿಶ್ವದಲ್ಲಿಯೇ ಶಾಂತಿ, ಸೌಹಾರ್ದತೆಗೆ ಹೆಸರುವಾಸಿಯಾದ ನಾಡು. ಇದನ್ನೇ ರಾಷ್ಟ್ರಕವಿ ಕುವೆಂಪು ಅವರು ಸರ್ವಜನಾಂಗದ ಶಾಂತಿಯ ತೋಟ ಎಂದು ಹೆಸರಿಸಿದ್ದಾರೆ. ಒಂದು ಕಾಲದಲ್ಲಿ ಟಿಪ್ಪು ಪೇಟ, ಖಡ್ಗ ಹಿಡಿದು ವಿಜೃಂಭಿಸಿದ್ದ ಬಿಜೆಪಿ ನಾಯಕರು ತಮ್ಮ ರಾಜಕೀಯ ಕಾರಣಕ್ಕಾಗಿ ಈ ವಿರೋಧಿಸುತ್ತಿರುವುದು ನಿಜಕ್ಕೂ ಶೋಭೆ ತರುವಂತಹದ್ದಲ್ಲ ಎಂದು ಮುದ್ದಹನುಮೇಗೌಡ ನುಡಿದರು.

ದೇಶದ ಸ್ವಾತಂತ್ರ್ಯಕ್ಕೆ ದೇಶದ ಲಕ್ಷಾಂತರ ಜನರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಒಬ್ಬ ವ್ಯಕ್ತಿಯಲ್ಲಿ ಒಳ್ಳೆಯದು, ಕೆಟ್ಟದ್ದು ಎರಡು ಇರುತ್ತದೆ. ಕೆಟ್ಟದನ್ನು ಬದಿಗಿರಿಸಿ, ಒಳ್ಳೆಯದನ್ನು ಸ್ವೀಕರಿಸುವ ಕೆಲಸ ಆಗಬೇಕು. ಎಲ್ಲವನ್ನು ಕಾಮಾಲೆ ಕಣ್ಣಿನಿಂದ ನೊಡುವುದನ್ನು ಬಿಡಬೇಕು. ಮೈಸೂರು ರಾಜರಾಗಿದ್ದ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಕಾಲದಲ್ಲಿ ಹಲವಾರು ದೇವಾಲಯಗಳ ಜೀಣೋದ್ದಾರ, ಹೊಸ ದೇವಾಲಯಗಳ ನಿರ್ಮಾಣ ನಡೆದಿದೆ ಎಂದು ಮುದ್ದಹನುಮೇಗೌಡ ನುಡಿದರು.

ವಿಧಾನಪರಿಷತ್ ಸದಸ್ಯ ಬೆಮಲ್ ಕಾಂತರಾಜು ಮಾತನಾಡಿ, ಅಧುನಿಕ ಕ್ಷಿಪಣಿ ತಂತ್ರಜ್ಞಾನವನ್ನು ಯುದ್ದದಲ್ಲಿ ಬಳಕೆ ಮಾಡಿದ ಟಿಪ್ಪು ಕೇವಲ ಮೈಸೂರು ರಾಜ್ಯಕ್ಕೆ ಹುಲಿಯಲ್ಲ. ಇಡೀ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೇ ಹುಲಿ ಇದ್ದಂತೆ. ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಟಿಪ್ಪುವನ್ನು ಧರ್ಮದ ದೃಷ್ಟಿಯಿಂದ ನೋಡುವುದು ಆತನಿಗೆ ಮಾಡುವ ಅಪಮಾನ. ಜಯಂತಿಗಳನ್ನು ಜಾತಿ, ಧರ್ಮಕ್ಕೆ ಸಿಮೀತಗೊಳಿಸುವುದು ಒಳ್ಳೆಯದಲ್ಲ. ಇಂತಹವರು ಜಯಂತಿಗಳನ್ನು ಎಲ್ಲರೂ ಒಗ್ಗೂಡಿ ಆಚರಿಸಿದರೆ ಹೆಚ್ಚು ಅರ್ಥಪೂರ್ಣ. ಭಯದ ವಾತಾವರಣದಲ್ಲಿ ಇಂತಹ ಜಯಂತಿಗಳು ನಡೆದರೆ, ಯಾರಿಗೂ ಶೋಭೆ ತರುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಜಾನಪದ ತಜ್ಞ ಡಾ.ನಾಗೇಗೌಡ ಕಾಳಾವರ, ಅನಕ್ಷರಸ್ಥನಾಗಿದ್ದ ಹೈದರಾಲಿ, ತನ್ನ ಶ್ರಮದಿಂದಲೇ ಹೆಸರು ಪಡೆದವರು. ಬ್ರಿಟಿಷರು ಭಾರತದಿಂದ ಓಡಿಸಲು ಸ್ಥಳೀಯ ರಾಜರುಗಳ ಒಕ್ಕೂಟ ಸಂಚಾಲಕನಾಗಿ ಕೆಲಸ ಮಾಡಿದ್ದಾರೆ. ಇಂತಹ ವ್ಯಕ್ತಿಗೆ ಹುಟ್ಟಿದ ಟಿಪ್ಪು ಸುಲ್ತಾನ್ ಅಕ್ಷರಶಃ ತನ್ನ ರಕ್ತದ ಕೊನೆಯ ಹನಿ ಇರುವವರಗೂ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಅಪ್ಪಿದವನು. ನಾಡಿಗೆ ರೇಷ್ಮೆ ಬೆಳೆಯನ್ನು ಪರಿಚಿಯಿಸಿದ್ದಲ್ಲದೆ, ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದರು.

ಮುಜರಾಯಿ ಕಾನೂನಿನ ಮೂಲಕ ದಲಿತರಿಗೂ ದೇವಾಲಯದ ಪ್ರಾಹಾಂಗಣ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಲ್ಲದೆ, ದೇವಾಲಯದ ಆರ್ಚಕರಿಗೆ ವೇತನ ಪದ್ದತಿ ಜಾರಿಗೆ ತಂದರು. ಕೇರಳ, ತಮಿಳುನಾಡು, ಆಂಧ್ರ ಪ್ರದೇಶದವರೆಗೆ ತನ್ನ ಸಾಮ್ರಾಜ್ಯ ವಿಸ್ತರಿಸಿದ ಟಿಪ್ಪು, ಗುರುವಾಯೂರು ದೇವಾಲಯಕ್ಕೆ 600 ಎಕರೆ ಭೂಮಿಯನ್ನು ಉಂಬಳಿಯಾಗಿ ನೀಡಿದ್ದಾನೆ. ನಮ್ಮ ಕಣ್ಣಮುಂದೆಯೇ ಸತ್ಯವಿದ್ದರೂ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ವಿರೋಧಿಸುವುದು ಸರಿಯಲ್ಲ. ಆತ ಹಿಂದೂ ವಿರೋಧಿಯಲ್ಲ, ಕನ್ನಡ ವಿರೋಧಿಯಲ್ಲ ಎಂಬುದಕ್ಕೆ ಇಂದಿನ ಶೃಂಗೇರಿ ದೇವಾಲಯ, ಸೀಬಿ ನರಸಿಂಹಸ್ವಾಮಿ ದೇವಾಲಯಗಳೇ ಸಾಕ್ಷಿ. ಸತ್ಯ ಹೇಳಲು ಯಾರು ಅಂಜಬಾರದು. ಭಾರತ ದೇಶವನ್ನು ಕಟ್ಟಲು ಎಲ್ಲಾ ಜಾತಿ, ಜನಾಂಗದವರು ದುಡಿದಿದ್ದಾರೆ. ಅವರನ್ನು ನಾವು ಮರೆಯುವಂತಿಲ್ಲ ಎಂದರು.

ನಗರದ 13ನೇ ವಾರ್ಡಿನ ನಗರಪಾಲಿಕೆ ಸದಸ್ಯೆ ಶ್ರೀಮತಿ ಫರೀದಾ ಬೇಗಂ ಮಾತನಾಡಿ, ನಾವು ಇತಿಹಾಸವನ್ನು ಅವಲೋಕಿಸಿದಾಗ ಟಿಪ್ಪುವನ್ನು ನಾಯಕನೆಂದೇ ಬಿಂಬಿಸಲಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ಮಾತ್ರ ಆತ ಕಳನಾ ಯಕನಾಗಿದ್ದು ಹೇಗೆ ಎಂಬುದು ತಿಳಿಯದಾಗಿದೆ. ಸ್ವಾತಂತ್ರ ಹೋರಾಟದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭಾವನೆ ಗಳಿರಲಿಲ್ಲ. ಎಲ್ಲಾ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದರು. ಅವರಲ್ಲಿ ಕೆಲವರು ವೀರ ಮರಣವನ್ನಪ್ಪಿದರು. ಅಂತಹವರ ಸಾಲಿಗೆ ಟಿಪ್ಪು ಸೇರುತ್ತಾರೆ ಎಂದರು.

ವೇದಿಕೆಯಲ್ಲಿ ಮಾಜಿ ಶಾಸಕ ಎಸ್. ಶಪಿ ಅಹಮದ್, ನಗರಪಾಲಿಕೆ ಸದಸ್ಯರಾದ ಇನಾಯಿತ್ ಉಲ್ಲಾಖಾನ್, ಷಕೀಲ್ ಅಹಮದ್ ಷರೀಫ್, ಮಹೇಶ್, ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ಎಸ್.ಪಿ. ಡಾ.ದಿವ್ಯಾಗೋಪಿನಾಥ್, ಬಸವರಾಜಪ್ಪ ಆಪ್ಪಿನಕಟ್ಟೆ, ಉಪವಿಭಾಗಾಧಿಕಾರಿ ಶಿವಕುಮಾರ್, ತಹಶೀಲ್ದಾರ್ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ದಿಗೆ ದುಡಿದ 10 ಜನರನ್ನು ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News