ವಿಶ್ರಾಂತಿ ನೆಪದಲ್ಲಿ ಟಿಪ್ಪು ಜಯಂತಿಯಲ್ಲಿ ಭಾಗವಹಿಸದೆ ಕುಮಾರಸ್ವಾಮಿ ನಾಪತ್ತೆ: ಶಾಸಕ ರೇಣುಕಾಚಾರ್ಯ
ದಾವಣಗೆರೆ,ನ.10: ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದರೆ ಟೀಕೆಗೆ ಗುರಿಯಾಗುತ್ತೇನೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಶ್ರಾಂತಿ ನೆಪದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಾರೋಗ್ಯದ ನೆಪವೊಡ್ಡಿ ಸಿಎಂ ಕುಮಾರಸ್ವಾಮಿ ಟಿಪ್ಪು ಜಯಂತಿಗೆ ಗೈರಾಗುವ ಮೂಲಕ ಕಾಣೆಯಾಗಿದ್ದಾರೆ. ಈ ಮೂಲಕ ಕುಮಾರಸ್ವಾಮಿ ದ್ವಿಮುಖ ನೀತಿ ಅನುಸರಿಸಿದ್ದಾರೆ. ಕುಮಾರಸ್ವಾಮಿಯದ್ದು ಏಕಪಾತ್ರಾಭಿನಯವಲ್ಲ. ಏನಿದ್ದರೂ ದ್ವಿಪಾತ್ರಾಭಿನಯ ಅಷ್ಟೇ ಎಂದು ವ್ಯಂಗ್ಯವಾಡಿದ ಅವರು, ಕುಮಾರಸ್ವಾಮಿ ಆರೋಗ್ಯ ನಿಜಕ್ಕೂ ಹದಗೆಟ್ಟಿದ್ದರೆ ಶೀಘ್ರವೇ ಗುಣಮುಖರಾಗಲೆಂದು ಹಾರೈಸುತ್ತೇನೆ. ನಾಳೆ ಸಿಎಂ ಖುರ್ಚಿ ಆಲುಗಾಡುತ್ತದೆಂಬುದು ಗೊತ್ತಾದರೆ, ಎಂತಹದ್ದೇ ಅನಾರೋಗ್ಯವಿದ್ದರೂ ಕುಮಾರಸ್ವಾಮಿ ಎದ್ದು ಬರುತ್ತಾರೆ. ಮುಖ್ಯಮಂತ್ರಿಗಳು ಟಿಪ್ಪು ಜಯಂತಿ ರದ್ದುಪಡಿಸಿದ್ದರೆ ನಾನೇ ಶಾಲು ಹೊದಿಸಿ, ಸನ್ಮಾನಿಸುತ್ತೇನೆ ಎಂದರು.
ನಾವು ಮುಸ್ಲಿಂ ವಿರೋಧಿಗಳಲ್ಲ. ಟಿಪ್ಪು ಜಯಂತಿ ಮಾಡಿದರೆ ಆ ಸಮಾಜ ಉದ್ಧಾರವಾಗಲ್ಲ. ಶೈಕ್ಷಣಿಕ, ಆರ್ಥಿಕವಾಗಿ ಮುಸ್ಲಿಂ ಸಮುದಾಯವನ್ನು ಸಬಲರನ್ನಾಗಿಸಲಿ. ಅದನ್ನು ಬಿಟ್ಟು ಕೈಯಲ್ಲಿ ಖಡ್ಗ ಹಿಡಿದು ಕೂಗಾಡಿದ ತಕ್ಷಣವೇ ಮುಸ್ಲಿಂ ಸಮುದಾಯದವರ ಅಭಿವೃದ್ಧಿ ಸಾಧ್ಯವೂ ಇಲ್ಲ ಎಂದರು.