ಹನೂರು: ವನ್ಯಜೀವಿ ಸಂರಕ್ಷಣಾ ಕಾರ್ಯಗಾರ

Update: 2018-11-10 17:05 GMT

ಹನೂರು,ನ.10: ಸಮಾಜಕ್ಕೆ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಅರಿವನ್ನು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ತರ ಮತ್ತು ಹಿರಿದಾದದ್ದು ಎಂದು ಅರಣ್ಯ ಸಂರಕ್ಷಣಾಧಿಕಾರಿ ಏಳುಕುಂಡಲು ತಿಳಿಸಿದರು.

ಹನೂರು ಸಮೀಪದ ಎಲ್ಲೇಮಾಳ ಹೊಳೆಮತ್ತಿ ಮಾಹಿತಿ ಕೇಂದ್ರದಲ್ಲಿ ನೇಚರ್ ಕನ್ಸರ್ವೇಶನ್ ಪೌಂಡೇಶನ್ ವತಿಯಿಂದ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಪತ್ರಿಕಾ ವರದಿಗಾರರಿಗೆ ಹಾಗೂ ವಾರ್ತಾ ಮಾಧ್ಯಮಗಳ ವರದಿಗಾರರಿಗೆ ಏರ್ಪಡಿಸಲಾಗಿದ್ದ ಒಂದು ದಿನದ ವನ್ಯಜೀವಿ ಸಂರಕ್ಷಣಾ ಕಾರ್ಯಗಾರದಲ್ಲಿ ಮಾತನಾಡಿದ ಅವರು, ವನ್ಯಜೀವಿಗಳ ನಾಶದಿಂದ ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತದೆ. ಅರಣ್ಯದೂಳಗೆ ಅತಿಕ್ರಮಣ ಪ್ರದೇಶ ಹಾಗೂ ಕಳ್ಳಬೇಟೆಯಿಂದ ಅಮೂಲ್ಯವಾದ ಅರಣ್ಯ ಹಾಗೂ ವನ್ಯಜೀವಿಗಳು ನಶಿಸಿ ಹೋಗುತ್ತಿವೆ. ವನ್ಯಜೀವಿಗಳ ಆವಾಸಸ್ಥಾನಕ್ಕೆ ತೊಂದರೆ ಮಾಡದೇ ಅವುಗಳ ಸಂತಾನ್ಪೋತ್ಪತ್ತಿಗೆ ಅವಕಾಶ ಮಾಡಿಕೊಡಬೇಕು ಎಂದರು.  

ನೇಚರ್ ಕನ್ಸರ್ವೇಷನ್ ಫೌಂಡೇಶನ್ ಸಂಸ್ಥೆಯ ಸಂಜಯ್‍ ಗುಬ್ಬಿ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಬಂಡಿಪುರ, ಬಿಳಿಗಿರಿರಂಗನಬೆಟ್ಟ, ಮಲೈಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳಿದ್ದು, ಹೆಗ್ಗಳಿಕೆಗೆ ಪಾತ್ರವಾಗಿದೆ. ವನ್ಯಜೀವಿ ಸಂರಕ್ಷಣಾ ದೃಷ್ಠಿಯಲ್ಲಿ ಚಾಮರಾಜನಗರ ಕರುನಾಡಿನ ಕಿರೀಟವಾಗಿದ್ದು, ವನ್ಯಜೀವಿಗಳ ಪಥಗಳ ಸಂಚಾರಕ್ಕೆ ಅನುಕೂಲವಾಗಿರುವ ಕಾರಿಡಾರ್ ಗಳನ್ನು ರಕ್ಷಿಸಬೇಕು ಎಂದರು.

ಈ ಸಂದರ್ಭ ತಾಲೂಕಿನ ಕಾಡಂಚಿನ ಗ್ರಾಮಗಳಿಗೆ ಮೂಲಭೂತಸೌಕರ್ಯ ಒದಗಿಸುವುದು, ಬಂಡಳ್ಳಿ ಗುಡ್ಡದ ಇತಿಹಾಸವನ್ನು ಅರಿತು ಚಾರಣಾ ಕೇಂದ್ರವನ್ನಾಗಿ ಮಾಡುವಂತೆ ಮತ್ತು ಚಿಕ್ಕಲ್ಲೂರಿನಿಂದ ಮುತ್ತತ್ತಿ ದೇವಸ್ಥಾನಕ್ಕೆ ಕಾವೇರಿ ವನ್ಯ ಜೀವಿಧಾಮದ ಅರಣ್ಯದೊಳಗೆ ಈ ಭಾಗದ ಜನರು ತೆರಳುವ ಕುರಿತು ಪತ್ರಕರ್ತರು ಮತ್ತು ಅರಣ್ಯಾಧಿಕಾರಿಗಳ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಹನೂರು ಬಫರ್ ವಲಯ ಅರಣ್ಯ ಸಂರಕ್ಷಣಾಧಿಕಾರಿ ರುಕಿಯಾ ಫರ್ವಿನ್, ನೇಚರ್ ಕನ್ಸರ್ವೇಷನ್ ಪೌಂಡೇಶನ್ ಸಂಸ್ಥೆಯ ಹರೀಶ್, ಸಂತೋಷ್, ಸ್ವಯಂ ಸೇವಕ ಸಿಬ್ಬಂದಿಗಳು, ಕೊಳ್ಳೇಗಾಲ ಹನೂರು ತಾಲೂಕು ಪತ್ರಿಕಾ ವರದಿಗಾರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News