ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದರಿಂದಲೇ ಸಚಿವನಾದೆ: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು

Update: 2018-11-10 17:10 GMT

ಮಂಡ್ಯ, ನ.10: ಅಪ್ರತಿಮ ದೇಶಪ್ರೇಮಿ ಟಿಪ್ಪು ಸುಲ್ತಾನ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದಲೇ ನಾನು ಸಚಿವನಾದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಶನಿವಾರ ನಡೆದ ಮೈಸೂರು ಹುಲಿ ಟಿಪ್ಪು ಸುಲ್ತಾನ್‍ರವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ವದಂತಿ ಹರಡಲಾಗುತ್ತಿದೆ. ಆದರೆ, ಕಳೆದ ಬಾರಿ ನಾನು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದಲೇ ಇಂದು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ ಎಂದು ಪುಟ್ಟರಾಜು ಹೆಮ್ಮೆಯಿಂದ ಹೇಳಿಕೊಂಡರು. ಟಿಪ್ಪು ಸುಲ್ತಾನ್ ಅವರು ಸ್ವಾಭಿಮಾನ ಹಾಗೂ ದಿಟ್ಟತನದ ಬದುಕು ಸಾಗಿಸಿದವರು. ಬ್ರಿಟಿಷರನ್ನು ಸತತ ಐದು ವರ್ಷಗಳ ಕಾಲ ತಡೆದು ನಾಡನ್ನು ಸಂರಕ್ಷಿಸಿದವರು. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಪ್ರತಿಪಾದಿಸಿದರು. 

ಇವತ್ತು 25 ಕೋಟಿ ಕೊಟ್ಟರೆ ಶಾಸಕತನವನ್ನೇ ಮಾರಾಟ ಮಾಡುವಂತಹ ಪರಿಸ್ಥಿತಿಗೆ ರಾಜಕಾರಣಿಗಳು ಬಂದಿದ್ದೇವೆ. ಆದರೆ, ಆ ಕಾಲಕ್ಕೆ 24 ಲಕ್ಷ ಪಿಂಚಣಿ ತೆಗೆದುಕೊಂಡು ರಾಜನಾಗಿರು ಎಂದು ಹೇಳಿದರೂ ಅದನ್ನು ತಿರಸ್ಕರಿಸಿ ನಾನು ಹುಲಿ ರೀತಿ ಬದುಕಿ ಶ್ರೀರಂಗಪಟ್ಟಣದಲ್ಲಿ ಮಣ್ಣಾಗುತ್ತೇನೆ ಎಂದು ಟಿಪ್ಪು ಸ್ವಾಭಿಮಾನ ಮೆರೆದಿದ್ದರು ಎಂದು ಅವರು ಸ್ಮರಿಸಿದರು. 

ರಾಜ್ಯದ ಉದ್ದಗಲ್ಲಕ್ಕೂ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯುತ್ತಿದೆ. ಭಾರತಾಂಬೆಯ ಮಕ್ಕಳಾದ ನಾವು ಆಚಾರ, ವಿಚಾರಗಳಲ್ಲಿ ಭಿನ್ನತೆ ಇದ್ದರೂ ಒಟ್ಟಾಗಿ ಬಾಳುತ್ತಿದ್ದೇವೆ. ನಾಡಿಗೊಸ್ಕರ ಅಪಾರ ಕೊಡುಗೆಗಳನ್ನು ನೀಡಿದ ಮಹನೀಯರನ್ನು ಸ್ಮರಣೆ ಮಾಡಿಕೊಳ್ಳುವುದು ಎಲ್ಲರ ಜವಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇತಿಹಾಸದಲ್ಲಿ ಮರೆಯಲಾಗದ ವ್ಯಕ್ತಿ: 
ವಿಶೇಷ ಉಪನ್ಯಾಸ ನೀಡಿದ ಧಮೇಂದ್ರಕುಮಾರ್ ಅವರು, 1782 ರಿಂದ ಭಾರತದಲ್ಲಿ ಆಂಗ್ಲರ ವಿರುದ್ಧ ಹೋರಾಟ ಮಾಡಿದ ವೀರ ಟಿಪ್ಪು ಸುಲ್ತಾನ್ ಮೈಸೂರಿನ ಇತಿಹಾಸದಲ್ಲಿ ಮರೆಯಲಾಗದ ವ್ಯಕ್ತಿ. ಪ್ರೆಂಚ್‍ನವರ ಸಹಾಯದಿಂದ ರಾಕೆಟ್ ತಯಾರಿಸಿದ ಪ್ರಪಂಚದ ಮೊದಲಿಗ ವೀರ ಟಿಪ್ಪು ಸುಲ್ತಾನ್ ಅವರು ಸೈನಿಕ ಕವಾಯತು, ಸೈನಿಕರಲ್ಲಿ ಶಿಸ್ತನ್ನು ತಂದು ಯುದ್ಧ ಕೌಶಲ್ಯದ ಮೂಲಕ ಯುದ್ಧಗಳನ್ನು ಸುಲಭವಾಗಿ ಜಯಿಸುತ್ತಿದ್ದರು ಎಂದರು.

ಟಿಪ್ಪು ಸುಲ್ತಾನ್ ಅವರು ತನ್ನ ಆಡಳಿತದಲ್ಲಿ ಮದ್ಯಪಾನ ಹಾಗೂ ವೈಶ್ಯವಾಟಿಕೆಗಳಿಗೆ ನಿಷೇಧ ಹೇರಿ, ಉಳುವವನೆ ಭೂಮಿಯ ಒಡೆಯನನ್ನಾಗಿಸಿದ್ದರು. ತನ್ನ ನಾಡನ್ನು ಆರ್ಥಿಕವಾಗಿ ಹಾಗೂ ಖಜಾನೆ ತುಂಬಲು ಅನೇಕ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಟಿಪ್ಪು ಸುಲ್ತಾನ್ ಅವರಿಗೆ ಸಲ್ಲುತ್ತದೆ ಎಂದು ಅವರು ವಿವರಿಸಿದರು.

ಒಳಗಿನ ಶತ್ರುಗಳಿಂದ ಟಿಪ್ಪು ಸುಲ್ತಾನ್ ಅವರು ಸೋಲನ್ನು ಅಪ್ಪಿ ಮರಣ ಹೊಂದಬೇಕಾಯಿತು. ಇಲ್ಲದಿದ್ದರೆ ಬ್ರಿಟಿಷರು ಟಿಪ್ಪು ಸುಲ್ತಾನ್ ಅವರನ್ನು  ಸೋಲಿಸಲು ಸಾಧ್ಯಗುತ್ತಿರಲಿಲ್ಲ ಎಂದು ಅವರು ವಿಶ್ಲೇಷಿಸಿದರು. ಟಿಪ್ಪು ಸುಲ್ತಾನ್ ಪರಾಕ್ರಮ ಹಾಗೂ ಯುದ್ಧದ ಕೌಶಲ್ಯಗಳು ಕೇವಲ ಮೈಸೂರಿಗೆ ಸೀಮಿತವಾಗಿರದೇ ಇಡೀ ಪ್ರಪಂಚಕ್ಕೆ ಅವರ ಹೆಸರು ತಿಳಿದಿತ್ತು. ಈ ನಿಟ್ಟಿನಲ್ಲಿ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವುದು ಎಲ್ಲರ ಜವಬ್ದಾರಿ ಎಂದು ಅವರು ಅವರು ತಿಳಿಸಿದರು.

ಶಾಸಕ ಎಂ.ಶ್ರೀನಿವಾಸ್, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಉಪ ವಿಭಾಗಧಿಕಾರಿ ರಾಜೇಶ್ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News