ಟಿಪ್ಪುವಿನ ಬಗ್ಗೆ ಗೊಂದಲ ನಿವಾರಿಸಲು ತಜ್ಞರ ಸಮಿತಿ ನೇಮಿಸಿ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ದೇವರಾಜ್

Update: 2018-11-10 17:26 GMT

ಚಿಕ್ಕಮಗಳೂರು, ನ.10: ಟಿಪ್ಪು ಸುಲ್ತಾನ್ ಬಗ್ಗೆ ಪ್ರಸ್ತುತ ಎದ್ದಿರುವ ಭಿನ್ನಾಭಿಪ್ರಾಯ ಮತ್ತು ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ತಜ್ಞರ ಸಮಿತಿಯೊಂದನ್ನು ರಚಿಸಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮನವಿ ಮಾಡಿದ್ದಾರೆ.

ನಗರದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ರಚಿಸುವ ತಜ್ಞರ ಸಮಿತಿ ಟಿಪ್ಪುಸುಲ್ತಾನ್ ಬಗ್ಗೆ ಎದ್ದಿರುವ ಭಿನ್ನಾಭಿಪ್ರಾಯಗಳನ್ನು, ಗೊಂದಲಗಳನ್ನು ಪರಿಶೀಲಿಸಬೇಕು. ಇತಿಹಾಸವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಸತ್ಯ ಸಂಗತಿಯನ್ನು ರಾಜ್ಯದ ಜನತೆಗೆ ತಿಳಿಸಬೇಕೆಂದ ಅವರು, ಟಿಪ್ಪು ಸುಲ್ತಾನ್ ಬಗ್ಗೆ ಇರುವ ಪರ ಮತ್ತು ವಿರೋಧದ ಬಗ್ಗೆ ರಾಜ್ಯ ಸರಕಾರ ರಾಜ್ಯ ಮಟ್ಟದಲ್ಲಿ ವೈಜ್ಞಾನಿಕ ಚರ್ಚಾ ಗೋಷ್ಠಿಯನ್ನು ಏರ್ಪಡಿಸಬೇಕು ಎಂದರು.

ಸ್ವಾತಂತ್ರ್ಯ ಪ್ರೇಮಿ ಟಿಪ್ಪು ಸುಲ್ತಾನ್ ಅವರನ್ನು ದೇಶದ್ರೋಹಿ ಮತ್ತು ಮತಾಂಧನೆಂದು ಬಿಂಬಿಸುತ್ತಿರುವುದು ದುರಂತ ಎಂದ ಅವರು, ಶಾಲಾ ಪಠ್ಯ ಪುಸಕ್ತದಲ್ಲಿ ಟಿಪ್ಪುವಿನ ಬಗ್ಗೆ ಪಾಠವನ್ನು ಅನೇಕ ವರ್ಷಗಳ ಹಿಂದೆಯೇ ಸೇರಿಸಲಾಗಿದೆ. ಆತ ಸ್ವಾತಂತ್ರ್ಯ ಸೇನಾನಿ ಎಂದು ಹೇಳಲಾಗಿದೆ. ಬಿಜೆಪಿಗೆ ಆತ ಮತಾಂಧ ಎಂದು ಅನಿಸಿದ್ದರೆ ಅಂದೇ ವಿರೋಧ ವ್ಯಕ್ತಪಡಿಸಬೇಕಿತ್ತು. ಸರಕಾರ ಆತನ ಜಯಂತಿ ಆಚರಣೆಗೆ ಮುಂದಾದ ಸಂದರ್ಭದಲ್ಲಿ ಮಾತ್ರ ವಿರೋಧ ಮಾಡುತ್ತಿರುವುದರ ಹಿಂದೆ ಓಟ್‍ಬ್ಯಾಂಕ್ ರಾಜಕಾರಣದ ಹುನ್ನಾರ ಮಾತ್ರ ಅಡಗಿದೆ ಎಂದು ಟೀಕಿಸಿದ ಅವರು, ಟಿಪ್ಪುವಿನ ಸಾಧನೆಯನ್ನು ಗುರುತಿಸಿ ಅಂದಿನ ಮೈಸೂರು ಮಹಾರಾಜರು ಆತನಿಗೆ ಮೈಸೂರು ಹುಲಿ ಎಂದು ಬಿರುದು ನೀಡಿ ಗೌರವಿಸಿದ್ದಾರೆ. ಜಿಲ್ಲೆಯ ಶೃಂಗೇರಿ ಮಠವನ್ನು ರಕ್ಷಿಸಿದ ಕೀರ್ತಿ ಟಿಪ್ಪುವಿಗಿದೆ. ಅನೇಕ ಮಠ ಮಂದಿರಗಳಿಗೆ ಆತ ಉದಾರವಾಗಿ ಕೊಡುಗೆ ನೀಡಿದ್ದಾನೆ ಎಂಬುದಕ್ಕೆ ಐತಿಹಾನಿಕ ದಾಖಲೆಗಳು ಇಂದಿಗೂ ಇವೆ ಎಂದು ಅವರು ತಿಳಿಸಿದರು. 

ಜಯಂತಿ ಪ್ರಯುಕ್ತ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಜೆಡಿಎಸ್ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ನಿಸಾರ್ ಅಹ್ಮದ್, ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಮಂಜಪ್ಪ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಫೈರೋಝ್, ಧರ್ಮರಾಜ್, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News