ಸಮಾಜದಲ್ಲಿ ಕೋಮುದ್ವೇಷ ಬಿತ್ತುವ ಬಿಜೆಪಿಯವರಿಗೆ ಉಳಿಗಾಲವಿಲ್ಲ: ಸಚಿವ ಜಿ.ಟಿ.ದೇವೇಗೌಡ

Update: 2018-11-10 17:42 GMT

ಮೈಸೂರು,ನ.10: ಸಮಾಜದಲ್ಲಿ ಕೋಮು ದ್ವೇಷವನ್ನು ಬಿತ್ತುತ್ತಿರುವ ಬಿಜೆಪಿಯವರಿಗೆ ಉಳಿಗಾಲವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಾಗ್ದಾಳಿ ನಡೆಸಿದರು.

ನಗರದ ಕಲಾಮಂದಿರಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಹಜರತ್ ಟಿಪ್ಪು ಸುಲ್ತಾನ್ ಜಯಂತೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಟಿಪ್ಪು ಜಯಂತಿ ಮಹೋತ್ಸವದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಅವರು ಮಾತನಾಡಿದರು.

ಬಿಜೆಪಿಯವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜಾತಿ ಧರ್ಮದ ಹೆಸರಿನಲ್ಲಿ ಮತ ಕೇಳುವವರಿಗೆ ಹೆಚ್ಚು ದಿನ ಉಳಿಗಾಲವಿಲ್ಲ, ಅವರ ಆಟ ನಡೆಯುವುದಿಲ್ಲ. ಒಂದಲ್ಲ ಒಂದು ದಿನ ಅವರ ಬಣ್ಣ ಬಯಲಾಗಲಿದೆ ಎಂದು ಹೇಳಿದರು.

ಅಂಬೇಡ್ಕರ್, ಬಸವಣ್ಣ, ವಾಲ್ಮೀಕಿ, ಕನಕದಾಸ, ವಿಶ್ವಕರ್ಮ, ಭಗೀರಥ ಜಯಂತಿ ಆಚರಣೆ ಮಾಡುವ ರೀತಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಗುತ್ತಿದೆ. ಆದರೆ ಇದನ್ನು ಕೆಲವರು ಓಟ್ ಬ್ಯಾಂಕ್‍ಗಾಗಿ ವಿರೋಧಿಸುತ್ತಿದ್ದಾರೆ. ಸಂವಿಧಾನದ ಅಡಿಯಲ್ಲಿ ಎಲ್ಲಾ ಆಚರಣೆಗಳನ್ನು ಮಾಡಲಾಗುತ್ತಿದೆ. ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು, ಸಂವಿಧಾನಕ್ಕೆ ವಿರೋಧವಾಗಿ ನಡೆದುಕೊಂಡರೆ ಸಮಾಜ ಪ್ರತಿಯೊಂದನ್ನು ಗಮನಿಸುತ್ತಿರುತ್ತದೆ ಎಚ್ಚರಿಕೆಯಿಂದ ಇರಿ ಎಂದು ಬಿಜೆಪಿಯವರಿಗೆ ಎಚ್ಚರಿಸಿದರು.

ಟಿಪ್ಪು ಸುಲ್ತಾನ್ ಒಬ್ಬ ಸ್ವತಂತ್ರ ಸೇನಾನಿ. ಬ್ರಿಟಿಷರ ವಿರುದ್ಧ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾನೆ. ಆ ಕಾಲದಲ್ಲೇ ಟಿಪ್ಪು ಭೂ ಸುಧಾರಣೆ ತಂದು ಉಳುವವರಿಗೆ ಭೂಮಿ ಎಂಬ ಘೋಷಣೆ ಮಾಡಿದ್ದರು. ಪಟೇಲರು, ಶಾನುಭೋಗರ ಆಡಳಿತಕ್ಕೆ ಕೊನೆಗಾಣಿಸಿದ್ದರು. ಹಾಗೆ ಮೈಸೂರು ಪ್ರಾಂತ್ಯದಲ್ಲಿ 36 ಸಾವಿರ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿದ್ದರು. 16 ಸಾವಿರ ಬಾವಿ ತೆಗೆಸಿ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದ್ದರು ಎಂದು ಟಿಪ್ಪು ಅವರನ್ನು ಸ್ಮರಿಸಿದರು.

ಸಿಎಂ ಗೈರು ಅಸಮಧಾನ ಉಂಟುಮಾಡಿದೆ: 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ತನ್ವೀರ್ ಸೇಠ್ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯಿರಿ ಎಂದು ಹೇಳಿರುವುದು ಸರಿ. ಆದರೆ ಅವರು ಎಲ್ಲಿ ಇದ್ದಾರೋ ಅಲ್ಲೇ ಟಿಪ್ಪು ಜಯಂತಿಯಲ್ಲಿ ಭಾಗವಹಿಸಬೇಕಿತ್ತು. ಅವರು ಭಾಗವಹಿದೆ ಇರುವುದಕ್ಕೆ ನಮ್ಮ ಸಮುದಾಯದಲ್ಲಿ ಅಸಮಧಾನವಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ನಾವು ಅವರನ್ನು ನೆನಪಿಸಿಕೊಳ್ಳಬೇಕು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಇದೇ ಮೊದಲ ಬಾರಿಗೆ ಈಜಯಂತಿ ಆಚರಣೆ ಮಾಡುತ್ತಿರುವುದು. ಇಂತಹ ವೇಳೆ ಮುಖ್ಯಮಂತ್ರಿಗಳು ಗೈರಾಗಿರುವುದು ಬೇಸರವುಂಟು ಮಾಡಿದೆ. ಇದು ಸಮಾಜದಲ್ಲಿ ತಪ್ಪು ಸಂದೇಶವನ್ನು ಉಂಟುಮಾಡಲಿದೆ ಎಂದು ಹೇಳಿದರು.

ಗಾಂಧೀಜಿ ಕೊಂದವರಿಂದ ನೈತಿಕತೆ ಕಲಿಯಬೇಕಿಲ್ಲ: ಹಿಂದೂವಾದಿಗಳು ಎಂದು ಹೇಳುವವರು ಮಹಾತ್ಮ ಗಾಂಧೀಜಿಯನ್ನು ಏನು ಮಾಡಿದರು ಎಂದು ಪ್ರಶ್ನಿಸಿದ ತನ್ವೀರ್ ಸೇಠ್, ಮಹಾತ್ಮ ಗಾಂಧೀಜಿಯನ್ನು ಕೊಂದ ಜನರಿಂದ ನಾವು ನೈತಿಕತೆ ಕಲಿಯಬೇಕಿಲ್ಲ ಎಂದು ಸಂಘಪರಿವಾರ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದರು.

ಬಿಜೆಪಿಯವರು ಬಹಿರಂಗ ಚೆರ್ಚೆಗೆ ಬರಲಿ: ಟಿಪ್ಪು ಸುಲ್ತಾನ್ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ ಎಂದು ಶಾಸಕ ತನ್ವೀರ್ ಸೇಠ್ ಸವಾಲು ಹಾಕಿದರು. ಟಿಪ್ಪು ಬಗ್ಗೆ ಅಪಪ್ರಚಾರ ಮಾಡುತ್ತಿರುವ ಮಂದಿ ಟಿಪ್ಪು ಇತಿಹಾಸ ತಿಳಿದುಕೊಳ್ಳದೆ ಕೋಮು ಸಂಘರ್ಷಕ್ಕೆ ಕಾರಣರಾಗುತ್ತಿದ್ದಾರೆ. ಅವರಿಗೆ ನಿಜವಾಗಲು ನೈತಿಕತೆ ಇದ್ದರೆ ಬಹಿರಂಗ ಚೆರ್ಚೆಗೆ ಬರಲಿ ಎಂದು ಹೇಳಿದರು.

ಮೈಸೂರಿನಲ್ಲಿ ಟಿಪ್ಪು ಅಧ್ಯಯನ ಪೀಠ ಸ್ಥಾಪಿಸಿ: ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರು ವಿ.ವಿ.ಯಲ್ಲಿ ಟಿಪ್ಪು ಅಧ್ಯಯನ ಪೀಠ ಸ್ಥಾಪನೆ ಮಾಡುವುದಾಗಿ ಬಜೆಟ್‍ನಲ್ಲಿ ಘೊಷಿಸಿದ್ದರು. ಆದರೆ ಮೈಸೂರು ಪ್ರಾಂತ್ಯದಲ್ಲಿ ಟಿಪ್ಪು ವಾಸವಾಗಿದ್ದರಿಂದ ಮೈಸೂರು ವಿ.ವಿ.ಯಲ್ಲೇ ಟಿಪ್ಪು ಅಧ್ಯಯನ ಪೀಠ ಸ್ಥಾಪಿಸಿ ಎಂದು ಉನ್ನತ ಶಿಕ್ಷಣ ಹಾಗೂ ಮೈಸೂರು ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಡಿ.ಉಮಾಶಂಕರ್ ಮುಖ್ಯ ಭಾಷಣ ಮಾಡಿದರು. ಜಿ.ಪಂ. ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸಿಇಓ ಕೆ.ಜ್ಯೋತಿ, ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್, ಡಾ.ರಘುರಾಮ್ ವಾಜಪೇಯಿ, ಮಾಜಿ ಮೇಯರ್ ಗಳಾದ ಆರೀಫ್ ಹುಸೇನ್, ಅಯೂಬ್ ಖಾನ್, ಶ್ರೀಕಂಠಯ್ಯ, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News