ಮನೆ ಕಟ್ಟುವ ಮೊದಲು ಸಂತ್ರಸ್ತರ ಮನಸ್ಸು ಕಟ್ಟಿ: ಸಾಹಿತಿ ಡಾ.ವೈದೇಹಿ

Update: 2018-11-11 18:04 GMT

ಮಡಿಕೇರಿ, ನ.11: ಸಂತ್ರಸ್ತರಿಗೆ ಮನೆ, ಕಟ್ಟಡ ನಿರ್ಮಿಸುವ ಮೊದಲು ಸಂತ್ರಸ್ತರ ಮನಸ್ಸು ಮತ್ತು ಬದುಕು ಕಟ್ಟುವುದು ಆದ್ಯತೆಯಾಗಬೇಕೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಪುರಸ್ಕೃತ ಹೆಸರಾಂತ ಸಾಹಿತಿ ಡಾ.ವೈದೇಹಿ ಸಲಹೆ ನೀಡಿದ್ದಾರೆ. ಕೊಡಗಿಗೆ ಒದಗಿರುವ ಮಹಾಸಂಕಟದ ಸಂದರ್ಭ ಕ್ಷಾತ್ರ ತೇಜಸ್ಸಿನ ಸ್ಥಳೀಯರು ಜೀವನ ಛಲ ಬೆಳೆಸಿಕೊಂಡ ರೀತಿ ಅನನ್ಯವಾದದ್ದು ಎಂದು ಅವರು ಶ್ಲಾಘಿಸಿದ್ದಾರೆ.

ಕಾಲೂರು ಗ್ರಾಮದಲ್ಲಿ ಪ್ರಾಜೆಕ್ಟ್ ಕೂರ್ಗ್ ಮತ್ತು ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತ ಮಹಿಳೆಯರು ಯಶಸ್ವಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ತಯಾರಿಸಿದ ವಿವಿಧ ಮಸಾಲೆ ಪದಾರ್ಥಗಳ ಕೂರ್ಗ್ ಫ್ಲೇವರ್ಸ್ ಉತ್ಪನ್ನಗಳನ್ನು ಲೋಕಾರ್ಪಣಗೊಳಿಸಿ ಅವರು ಮಾತನಾಡಿದರು.

ಪ್ರಕೃತಿ ವಿಕೋಪ ಎಂಬುದು ದಿಢೀರನೆ ಎದುರಾಗುವ ಯುದ್ಧದಂತೆ. ಆದರೆ ಕ್ಷಾತ್ರ ತೇಜಸ್ಸಿನ ಕೊಡಗಿನ ಜನರು ಇಂತಹ ಯುದ್ಧವನ್ನು ಆತ್ಮಸ್ಥೆರ್ಯದಿಂದ, ಛಲದಿಂದ ಹೊಸ ಹುಮ್ಮಸ್ಸಿನಿಂದ ಎದುರಿಸಿ ಗೆಲವು ಸಾಧಿಸಿದ ರೀತಿ ಎಲ್ಲರಿಗೂ ಮಾದರಿ ಎಂದು ಡಾ.ವೈದೇಹಿ ಶ್ಲಾಘಿಸಿದರು. ಚೇತನವೇ ಉಡುಗಿಹೋಗುವ ಮಹಾಸಂಕಟ ಕಾಲದಲ್ಲಿ ಕಾಲೂರು ಗ್ರಾಮಸ್ಥರು ಒಗ್ಗಟ್ಟಿನಿಂದ ಎದುರಾದ ದುರಂತವನ್ನು ಎದುರಿಸಿ ಇದೀಗ ಮಸಾಲೆ ಪದಾರ್ಥಗಳ ಉತ್ಪನ್ನಗಳನ್ನು ಮಾರಾಟ ಮಾಡಿ ಹೊಸ ವೃತ್ತಿಜೀವನ ಕಟ್ಟಿಕೊಳ್ಳಲು ಮುಂದಾಗಿದ್ದು ಹೆಮ್ಮೆಯ ವಿಚಾರ ಎಂದರು.

ಸ್ವಾತಂತ್ಯ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯರು ಪ್ರಕೃತಿ ವಿಕೋಪ ಪೀಡಿತವಾಗಿದ್ದ ಫರಿದಾಬಾದ್‌ನ್ನು ಕೇಂದ್ರವಾಗಿರಿಸಿಕೊಂಡು ಅಲ್ಲಿನ ಮಹಿಳೆಯರಿಗೆ ಮಸಾಲೆ ಪದಾರ್ಥಗಳನ್ನು ತಯಾರಿಸಲು ಹೇಳಿಕೊಟ್ಟು ಬದುಕನ್ನು ಹೇಗೆ ರೂಪಿಸಿದರೋ ಅದೇ ರೀತಿ ಕಾಲೂರಿನ ಸಂತ್ರಸ್ತ ಮಹಿಳೆಯರೂ ಇದೀಗ ವೈವಿಧ್ಯಮಯ ಮಸಾಲೆ ಪದಾರ್ಥಗಳನ್ನು ತಯಾರಿಸಿ ಬದುಕು ಕಂಡುಕೊಳ್ಳುತ್ತಿದ್ದಾರೆ ಎಂದು ಡಾ.ವೈದೇಹಿ ಅನಿಸಿಕೆ ವ್ಯಕ್ತಪಡಿಸಿದರು.

ಸಂತ್ರಸ್ತ ಮಹಿಳೆಯರಿಗಾಗಿ ಹೊಲಿಗೆ ತರಬೇತಿಯ ಎರಡನೇ ಘಟಕ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಸಂತ್ರಸ್ತರು ಎಲ್ಲಿಯೂ ನಿರಾಶರಾಗದೇ ತಮ್ಮತನ ಬಿಟ್ಟುಕೊಡದೇ ಸ್ವಾಭಿಮಾನಿ ಮತ್ತು ಸ್ವಾವಲಂಬಿಗಳಾಗಿ ಜೀವಿಸಬೇಕಾಗಿದೆ. ಕೊಡಗಿನ ಮೂಲ ಸಂಸ್ಕೃತಿ, ಆಚಾರಗಳನ್ನು ಶಾಶ್ವತವಾಗಿ ರಕ್ಷಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಕರೆ ನೀಡಿದರಲ್ಲದೆ, ಮಸಾಲೆ ಪದಾರ್ಥಗಳ ಗುಣಮಟ್ಟ ಕಾಪಾಡಿಕೊಳ್ಳುವ ಮೂಲಕ ಕಾಲೂರಿನ ಸಂತ್ರಸ್ತ ಮಹಿಳೆಯರ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂಥ ಕಾರ್ಯಕ್ಕೆ ಸ್ಥಳೀಯ ಮಹಿಳೆಯರು ಮುಂದಾಗಬೇಕಾಗಿದೆ ಎಂದರು.

ಭಾರತೀಯ ವಿದ್ಯಾಭವನ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್. ದೇವಯ್ಯ, ಕೊಡಗು ವಿದ್ಯಾನಿಧಿ ಅಧ್ಯಕ್ಷ ಕೆ.ಪಿ.ಉತ್ತಪ್ಪ,ಪ್ರಾಜೆಕ್ಟ್ ಕೂರ್ಗ್ ಸಂಚಾಲಕ ಬಾಲಾಜಿ ಕಶ್ಯಪ್, ಡಾ.ಎಂ.ಜಿ.ಪಾಟ್ಕರ್, ಸಲೀಲಾ ಪಾಟ್ಕರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೂರಿನ ಕಾಕೇರ ಕುಟುಂಬಸ್ಥರು ತಮ್ಮ ಕುಟುಂಬಕ್ಕೆ ಸೇರಿದ 20 ಸೆಂಟ್ ಜಾಗವನ್ನು ಮಹಿಳೆಯರ ತರಬೇತಿ ಕಾರ್ಯಗಳಿಗೆ ಬಳಕೆ ಮಾಡಲು ಉದ್ದೇಶಿತ ಕಟ್ಟಡಕ್ಕೆ ದಾನ ನೀಡುವುದಾಗಿ ಘೋಷಿಸಿದರು.  

ಕಾರ್ಯಕ್ರಮದಲ್ಲಿ ಪ್ರಾಜೆಕ್ಟ್ ಕೂರ್ಗ್ ಸದಸ್ಯರಾದ ಕೆ.ಎಸ್.ರಮೇಶ್ ಹೊಳ್ಳ, ವೇದಮೂರ್ತಿ, ಅನಿಲ್ ಎಚ್.ಟಿ. ತರಬೇತುದಾರರಾದ ನೀನಾ ಆರ್.ಶೆಟ್ಟಿ, ಆಶ್ರಫುನ್ನೀಸಾ ಮತ್ತು ಉಡುಪಿಯ ಶ್ರೀನಿವಾಸ ಮೂರ್ತಿ ಇದ್ದರು. ಸಾಹಿತಿ ನಾಗೇಶ್ ಕಾಲೂರು ನಿರೂಪಿಸಿ ಕಾಲೂರು ಗ್ರಾಮದ ಅಗತ್ಯತೆಗಳ ಮನವಿಯನ್ನು ಶಾಸಕರ ಮುಂದಿಟ್ಟರು. ಡಾ.ನಯನಾ ಕಶ್ಯಪ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News