ಪಾಂಡ್ಯಾ ಹತ್ಯೆಯ ಹಿಂದಿರುವ ರಾಜಕೀಯ ಪಾತಕಿಗಳು

Update: 2018-11-11 18:37 GMT

 ಪೊಲೀಸ್ ಇಲಾಖೆಗಳಿರುವುದು ಪಾತಕಿಗಳನ್ನು ಮಟ್ಟ ಹಾಕಲು. ಆದರೆ ಪೊಲೀಸರನ್ನೇ ಪಾತಕ ಕೆಲಸಗಳಿಗೆ ಸರಕಾರ ಬಳಸಿಕೊಂಡರೆ? ಈ ದೇಶದ ಕೋಮುಗಲಭೆಗಳಲ್ಲಿ ಪೊಲೀಸರ ಪಾತ್ರಗಳನ್ನು ತನಿಖಾ ತಂಡಗಳು ಗುರುತಿಸಿವೆ. ಗುಜರಾತ್ ಹತ್ಯಾಕಾಂಡದಲ್ಲಿ ಪೊಲೀಸರು ವಹಿಸಿದ ನಿರ್ಣಾಯಕ ಪಾತ್ರ ಈಗಾಗಲೇ ಜಾಹೀರಾಗಿದೆ. ಆದರೆ ಒಬ್ಬ ರಾಜಕಾರಣಿಯನ್ನು ಹತ್ಯೆಗೈಯಲೂ ಪೊಲೀಸ್ ಇಲಾಖೆಯನ್ನು ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳುವ ಮಟ್ಟಕ್ಕೆ ಮುಟ್ಟಿದರೆ ಖಾಕಿ ಘನತೆ ಏನಾಗಬಹುದು? ಇಂತಹದೊಂದು ಪ್ರಶ್ನೆ ಹರೇನ್ ಪಾಂಡ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಯೆತ್ತಿದೆ. 2003ರಲ್ಲಿ ಹತ್ಯೆಗೀಡಾದ ಮಾಜಿ ಸಚಿವ ಪಾಂಡ್ಯಾ ಹತ್ಯೆಯ ಹಿಂದೆ ಪೊಲೀಸರ ಕೈಗಳಿರುವುದು ಬೆಳಕಿಗೆ ಬರುತ್ತಿದೆ. ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ, ಹರೇನ್ ಪಾಂಡ್ಯಾ ಬಿಜೆಪಿಯ ಬಂಡಾಯ ನಾಯಕನಾಗಿ ಗುರುತಿಸಿಕೊಂಡಿದ್ದರು. ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಮೋದಿಯನ್ನು ತೀವ್ರವಾಗಿ ಟೀಕಿಸಿದವರು ಪಾಂಡ್ಯಾ.

ಈ ಹತ್ಯಾಕಾಂಡದಲ್ಲಿ ಸರಕಾರದ ನೇರ ಪಾತ್ರವಿದೆ ಎಂದು ಅವರು ಆರೋಪಿಸಿದ್ದರು. ಇಂತಹ ಪಾಂಡ್ಯಾ 2003ರಲ್ಲಿ ನಿಗೂಢವಾಗಿ ಕೊಲೆಯಾಗಿದ್ದರು. ಬುಲೆಟ್‌ಗಳಿಂದ ಛಿದ್ರವಾದ ಪಾಂಡ್ಯಾ ಅವರ ಮೃತದೇಹವು ಅಹ್ಮದಾಬಾದ್‌ನಲ್ಲಿ ಜನಪ್ರಿಯ ಉದ್ಯಾನವನದ ಹೊರಭಾಗದಲ್ಲಿ 2003ರ ಮಾರ್ಚ್ 26ರಂದು ಪತ್ತೆಯಾಗಿತ್ತು. ಸಿಬಿಐ ಬಂಧಿಸಿದ್ದ ಹರೇನ್ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಆನಂತರ ದೋಷಮುಕ್ತಿಗೊಳಿಸಿತ್ತು. ಪಾಂಡ್ಯಾ ಅವರಿಗೆ ತಾಗಿದ ಗುಂಡುಗಳ ಸಂಖ್ಯೆ, ಬಳಸಲಾದ ಪಿಸ್ತೂಲ್‌ಗಳು ಹಾಗೂ ಹಂತಕರ ಸಂಖ್ಯೆ ಮತ್ತು ಹತ್ಯೆ ನಡೆದ ಸ್ಥಳದ ಬಗ್ಗೆ ಸಿಬಿಐ ಸ್ಪಷ್ಟವಾದ ವಿವರಣೆ ನೀಡಲು ವಿಫಲವಾಗಿದೆಯೆಂದು ಗುಜರಾತ್ ನ್ಯಾಯಾಲಯ ಕೇಂದ್ರ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಇದೀಗ, ಪಾಂಡ್ಯಾರಂತಹ ರಾಜಕೀಯ ನಾಯಕನೊಬ್ಬನ ಕೊಲೆಯ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ಯಾಕೆ ವಿಫಲವಾಯಿತು ಎನ್ನುವುದಕ್ಕೆ ಉತ್ತರ ಸ್ಪಷ್ಟವಾಗುತ್ತಿದೆ. ಕೊಲೆಯ ಹಿಂದಿರುವವರೇ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಾದರೂ ಹೇಗೆ?

ಸೊಹ್ರಾಬುದ್ದೀನ್ ಹಾಗೂ ಆತನ ಪತ್ನಿ ಕೌಸರ್‌ಬಿ ಮತ್ತು ಸಹಚರ ತುಳಸಿರಾಮ್ ಪ್ರಜಾಪತಿಯ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಸಾಕ್ಷಿಯಾಗಿದ್ದ ಅಝಂಖಾನ್, ಶನಿವಾರ ಸಿಬಿಐ ನ್ಯಾಯಾಲಯದ ಮುಂದೆ ನೀಡಿದ ಹೇಳಿಕೆಯಲ್ಲಿ, ಗುಜರಾತ್‌ನ ಮಾಜಿ ಐಪಿಎಸ್ ಅಧಿಕಾರಿ ಡಿ.ಜಿ.ವಂಝಾರ ಅವರು ಹರೇನ್ ಪಾಂಡ್ಯಾ ಅವರನ್ನು ಹತ್ಯೆಗೈಯಲು ತನಗೆ ಆದೇಶ ನೀಡಿದ್ದಾರೆಂದು ಸೊಹ್ರಾಬುದ್ದೀನ್ ತನ್ನೊಂದಿಗೆ ಹೇಳಿಕೊಂಡಿದ್ದನೆಂಬುದನ್ನು ಬಹಿರಂಗಪಡಿಸಿದ್ದಾನೆ. ಪಾಂಡ್ಯಾ ಅವರನ್ನು ಹತ್ಯೆಗೈಯಲು ರಾಜಕೀಯ ಸಂಚೊಂದು ನಡೆದಿರುವ ಬಗ್ಗೆ ಸ್ವತಃ ವಂಝಾರಾ ಸಿಬಿಐಗೆ ವರದಿ ಮಾಡಿದ್ದರು. ಆದರೆ ಪಾಂಡ್ಯಾ ಹತ್ಯೆಗೆ ಕೆಲವೇ ದಿನಗಳ ಮುನ್ನ ಅವರಿಗೆ ಒದಗಿಸಲಾಗಿದ್ದ ಭದ್ರತಾ ವ್ಯವಸ್ಥೆಯನ್ನು ಹಿಂದೆೆಗೆದುಕೊಳ್ಳಲಾಗಿತ್ತು. ಸರಕಾರದ ಈ ಕ್ರಮವೇ ಮುಂದೆ ಪಾಂಡ್ಯಾ ಹತ್ಯೆಗೆ ಕಾರಣವಾಯಿತು. ಆದುದರಿಂದ ಈ ಕೊಲೆಯ ಹಿಂದೆ ರಾಜಕೀಯ ಶಕ್ತಿಗಳಿರುವುದರ ಬಗ್ಗೆ ಅನುಮಾನ ಹುಟ್ಟುವುದು ಸಹಜ. ಸೊಹ್ರಾಬುದ್ದೀನ್ ಸಾವು ಯಾರಿಗೆ ಅತ್ಯಗತ್ಯವಾಗಿತ್ತು ಎನ್ನುವುದನ್ನೂ ಈ ಪ್ರಕರಣದಿಂದ ನಾವು ಊಹಿಸಬಹುದು. ಹರೇನ್ ಪಾಂಡ್ಯಾ ಅವರ ಸಾವಿನ ಗುಟ್ಟು ಗೊತ್ತಿರುವ ವ್ಯಕ್ತಿಗಳನ್ನು ಕೊಲ್ಲುವುದು ಪೊಲೀಸರಿಗೂ ರಾಜಕೀಯ ನಾಯಕರಿಗೂ ಅತ್ಯಗತ್ಯವಾಗಿತ್ತು. ಪೊಲೀಸರ ಮೂಲಕವೇ ತಮ್ಮ ಮುಂದಿರುವ ಅಡ್ಡಿಯನ್ನು ಅಂದಿನ ಗುಜರಾತ್ ಸರಕಾರ ನಿವಾರಿಸಿತು ಎಂದು ನಾವು ಭಾವಿಸಬಹುದಾಗಿದೆ. ಸೊಹ್ರಾಬುದ್ದೀನ್ ಪ್ರಕರಣದ ವಿಚಾರಣೆ ನಡೆಸುವಲ್ಲಿ ಸಿಬಿಐ ಕೂಡ ಎಡವಿದೆ. ಈ ಪ್ರಕರಣದಲ್ಲಿ ದೋಷಾರೋಪ ಹೊರಿಸಲ್ಪಟ್ಟಿದ್ದ ಬಿಜೆಪಿ ಅಧ್ಯಕ್ಷ ಅಮಿತ್‌ಶಾ ಮತ್ತಿತರರನ್ನು ದೋಷಮುಕ್ತಿ ಗೊಳಿಸಿದ ತೀರ್ಪಿನ ವಿರುದ್ಧವೂ ಮೇಲ್ಮನವಿ ಸಲ್ಲಿಸಲು ಏಜೆನ್ಸಿ ನಿರಾಕರಿಸಿತ್ತು.

ಇದೀಗ ಸಾಕ್ಷಿಯ ಹೇಳಿಕೆಯು ಸೊಹ್ರಾಬುದ್ದೀನ್ ಹತ್ಯೆಯ ಕುರಿತಂತೆ ಮಾತ್ರವಲ್ಲದೆ, ಪಾಂಡ್ಯಾ ಹತ್ಯೆಯ ಮರುತನಿಖೆಗೆ ಆಗ್ರಹಿಸುತ್ತಿದೆ. ತನಿಖಾ ತಂಡಗಳು ಈವರೆಗೆ ನಡೆಸಿದ ತನಿಖೆಯ ಪ್ರಾಮಾಣಿಕತೆಯನ್ನು ಪಾಂಡ್ಯಾ ಕುಟುಂಬ ಪ್ರಶ್ನಿಸುತ್ತಲೇ ಬಂದಿದೆ. ಹಂತಕರು, ಇನ್ನೂ ತಲೆಮರೆಸಿಕೊಂಡಿದ್ದ್ಜಾರೆಂದು ಕುಟುಂಬ ಸದಸ್ಯರು ಆರೋಪಿಸುತ್ತಿದ್ದಾರೆ. ಆದಾಗ್ಯೂ ಸಿಬಿಐ ತಾನು ತಪ್ಪಾದ ದಾರಿಯಲ್ಲಿ ತನಿಖೆ ನಡೆಸಿದ್ದೇನೆಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ. ಗುಜರಾತ್ ಹತ್ಯಾಕಾಂಡ, ಆ ಬಳಿಕ ನಡೆದ ಪಾಂಡ್ಯಾ ಹತ್ಯೆ, ಇದಾದ ಬಳಿಕ ನಡೆದ ಸೊಹ್ರಾಬುದ್ದೀನ್ ಮತ್ತು ಆತನ ಸಹಚರರ ಹತ್ಯೆ ಒಂದಕ್ಕೊಂದು ಸಂಬಂಧವನ್ನು ಹೊಂದಿದೆ. ಈ ಎಲ್ಲ ಹತ್ಯೆಯ ಹಿಂದಿರುವ ಶಕ್ತಿ ಒಂದೇ ಆಗಿದೆ ಮತ್ತು ಆ ಶಕ್ತಿ ಹಿಂದೆ ಗುಜರಾತ್ ಸರಕಾರದೊಳಗೆ ಇದ್ದರೆ, ಇಂದು ಈ ದೇಶವನ್ನು ಆಳುವ ಸರಕಾರದೊಳಗಿದೆ ಎನ್ನುವುದನ್ನು ಮೇಲ್ನೋಟಕ್ಕೆ ಅಂದಾಜಿಸಬಹುದು. ಆದುದರಿಂದಲೇ ಪಾಂಡ್ಯಾ ಕೊಲೆ ಆರೋಪಿಗಳು ಯಾರೆನ್ನುವುದು ಬಯಲಾಗುವುದು ಕಷ್ಟ ಸಾಧ್ಯ. ಫೆಬ್ರವರಿ 27, 2002ರಂದು ನರೇಂದ್ರ ಮೋದಿ ಆಯೋಜಿಸಿದ್ದ ಸಭೆಯ ಬಗ್ಗೆ ಹರೇನ್ ಪಾಂಡ್ಯಾ ಔಟ್‌ಲುಕ್ ಪತ್ರಿಕೆಗೆ ಮಹತ್ವದ ವಿವರಗಳನ್ನು ನೀಡಿದ್ದರು. ಗಲಭೆಕೋರರ ಬಗ್ಗೆ ಮೃದುವಾಗಿ ವರ್ತಿಸುವಂತೆ ಮುಖ್ಯಮಂತ್ರಿ ನರೇಂದ್ರ ಮೋದಿ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು ಹಾಗೂ ಹಿಂದೂಗಳಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕೆಂದು ಹೇಳಿದ್ದರೆಂಬುದಾಗಿ ಬಹಿರಂಗಪಡಿಸಿದ್ದರು.

ಈ ವಿಷಯವನ್ನು ಔಟ್‌ಲುಕ್ ಆನಂತರ ಹೀಗೆ ವರದಿ ಮಾಡಿತ್ತು. ‘‘ ತನ್ನ ಗುರುತನ್ನು ಯಾವುದೇ ಸಂದರ್ಭದಲ್ಲಿ ಬಹಿರಂಗಪಡಿಸದಂತೆ ಮಾಜಿ ಸಚಿವರು,ತಮಗೆ ಶರ್ತ ವಿಧಿಸಿದ್ದರು. ಬಾಯ್ಮತಿನ ಮೂಲಕವೂ ನನ್ನ ಗುರುತನ್ನು ಬಹಿರಂಗಪಡಿಸದಿರಿ. ಯಾವುದೇ ಕಥೆಯಲ್ಲೂ ನನ್ನ ಹೆಸರು ಉಲ್ಲೇಖಗೊಳ್ಳಕೂಡದು. ಸಚಿವನಾಗಿಯೂ ಅಥವಾ ಬಿಜೆಪಿ ನಾಯಕನೆಂದೂ ನನ್ನನ್ನು ಗುರುತಿಸದಿರಿ. ಬಿಜೆಪಿ ನಾಯಕನೆಂಬುದಾಗಿ ನೀವು ಬರೆದರೂ ನಾನು ಸಾಯುತ್ತೇನೆ. ಸಚಿವನೆಂದು ನೀವು ಬರೆದರೂ ನಾನು ಸಾಯುತ್ತೇನೆ.’’ಇದಾದ ಏಳು ತಿಂಗಳುಗಳ ಬಳಿಕ ಪಾಂಡ್ಯಾ ಅವರ ಕೊಲೆಯಾಯಿತು. ತನ್ನ ರಾಜೀನಾಮೆ ಪತ್ರದಲ್ಲಿ, ವಂಝಾರ ‘ನಾನು ಮುಳುಗಿದರೆ ನನ್ನ ಜೊತೆಗೆ ಇನ್ನಷ್ಟು ಜನರು ಮುಳುಗುತ್ತಾರೆ’ ಎಂದು ಬರೆಯುವ ಮೂಲಕ ಸರಕಾರದ ಆದೇಶವನ್ನು ತಾನು ಪಾಲಿಸಿದ್ದೇನೆ ಎಂದು ಪರೋಕ್ಷವಾಗಿ ಹೇಳಿದ್ದರು. ಇದು ಮೋದಿ ಮತ್ತು ಅಮಿತ್ ಶಾ ಅವರಿಗೆ ನೀಡಿದ ಎಚ್ಚರಿಕೆಯೂ ಆಗಿತ್ತು. ಈ ನಿಟ್ಟಿನಲ್ಲಿ ಪಾಂಡ್ಯಾ ಕೊಲೆಯ ತನಿಖೆ ಸರಕಾರಿ ವ್ಯವಸ್ಥೆಯನ್ನು ಸುತ್ತಿಕೊಂಡಿರುವ ಪಾತಕಿಗಳ ನಿಜ ಮುಖವನ್ನು ಬಯಲಿಗೆಳೆಯಬಹುದು. ಪಾಂಡ್ಯಾ ಹತ್ಯೆ ಮರುತನಿಖೆಯಾಗದೇ, ಸೊಹ್ರಾಬುದ್ದೀನ್ ಹತ್ಯೆಯ ಹಿಂದಿರುವ ಕರಾಳ ಮುಖಗಳನ್ನು ಹೊರಗೆಳೆಯಲು ಸಾಧ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News