ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧದ ತನಿಖಾ ವರದಿ ಸುಪ್ರೀಂಗೆ ಸಲ್ಲಿಸಿದ ಸಿವಿಸಿ

Update: 2018-11-12 07:02 GMT

  ಹೊಸದಿಲ್ಲಿ, ನ.12: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ವಿರುದ್ಧ ಲಂಚ ಸ್ವೀಕರಿಸಿದ ಆರೋಪ ಕುರಿತ ತನಿಖಾ ವರದಿಯನ್ನು ಕೇಂದ್ರ ಜಾಗ್ರತ ದಳ(ಸಿವಿಸಿ)ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೋರ್ಟ್‌ಗೆ ಇಂದು ಸಲ್ಲಿಸಿದೆ.

 ಮತ್ತೊಂದೆಡೆ ಹಂಗಾಮಿ ಸಿಬಿಐ ನಿರ್ದೇಶಕ ನಾಗೇಶ್ವರ್ ರಾವ್ ತೆಗೆದುಕೊಂಡಿರುವ ನಿರ್ಧಾರಗಳ ವರದಿಯನ್ನು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದೆ.

ತನ್ನನ್ನು ಕರ್ತವ್ಯದಿಂದ ವಿಮುಖಗೊಳಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಅಲೋಕ್ ವರ್ಮಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ.16ಕ್ಕೆ ನಡೆಸುವುದಾಗಿ ಸುಪ್ರೀಂಕೋರ್ಟ್ ಇಂದು ತಿಳಿಸಿದೆ.

ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾರೊಂದಿಗೆ ಸಂಘರ್ಷ ನಿರತವಾಗಿದ್ದ ಅಲೋಕ್ ವರ್ಮಾರನ್ನು ಕೇಂದ್ರ ಸರಕಾರ ಕಳೆದ ತಿಂಗಳು ಕಡ್ಡಾಯ ರಜೆ ಮೇಲೆ ಕಳುಹಿಸಿತ್ತು.

ಮಾಂಸ ರಫ್ತುದಾರ ಖುರೇಶಿಯಿಂದ ವರ್ಮಾ ಲಂಚ ಸ್ವೀಕರಿಸಿದ್ದಾರೆ ಎಂದು ಅಸ್ತಾನಾ ಆರೋಪಿಸಿದ್ದರು. ವರ್ಮಾ ಅವರು ಅಸ್ತಾನಾ ವಿರುದ್ಧ ಭ್ರಷ್ಟಾಚಾರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಪ್ರತ್ಯಾರೋಪ ಮಾಡಿದ್ದರು.

ಕೆವಿ ಚೌಧರಿ ನೇತೃತ್ವದ ಮೂವರು ಸದಸ್ಯರ ಸಿವಿಸಿ ಮುಂದೆ ವಿಚಾರಣೆಗೆ ಹಾಜರಾಗಿದ್ದ ವರ್ಮಾ ತನ್ನ ವಿರುದ್ಧ ರಾಕೇಶ್ ಮಾಡಿರುವ ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News