×
Ad

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ: ರಾಜ್ಯ ರಾಜಕೀಯ ನಾಯಕರ ಸಂತಾಪ

Update: 2018-11-12 18:09 IST

ಬೆಂಗಳೂರು,ನ.12: ಇಂದು ಮುಂಜಾನೆ ನಿಧನರಾದ ಕೇಂದ್ರ ಸಚಿವ ಅನಂತ್ ಕುಮಾರ್ ಸಾವಿಗೆ ರಾಜ್ಯ ರಾಜಕೀಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಅನಂತ್‌ ಕುಮಾರ್ ನನ್ನ ಆತ್ಮೀಯರಾಗಿದ್ದು. ಅವರು ಇಷ್ಟು ಬೇಗ ನಿಧನರಾಗುತ್ತಾರೆ ಎಂದು ಅಂದುಕೊಂಡಿರಲಿಲ್ಲ, ಇದನ್ನು ಊಹೆ ಮಾಡಲು ಸಾಧ್ಯವಿಲ್ಲ. ಅವರ ಸಾವು ಕರ್ನಾಟಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಕೇಂದ್ರ ಸಚಿವರಾಗಿದ್ದರೂ, ಬೇರೆ ಪಕ್ಷದ ನಾಯಕರ ಬಗ್ಗೆ ಆತ್ಮೀಯತೆ ಇಟ್ಟುಕೊಂಡಿದ್ದರು. ಭಿನ್ನಾಭಿಪ್ರಾಯ ಇರಲಿಲ್ಲ. ನಾಡಿಗೆ ಅವರ ಸೇವೆ ಅವಶ್ಯಕವಾಗಿತ್ತು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಕೇಂದ್ರ ಸಚಿವ ಅನಂತಕುಮಾರ್ ಅಕಾಲಿಕ ಮರಣ ತುಂಬಾ ಬೇಸರ ತಂದಿದೆ. ಅವರು ಸರಳ ಸಜ್ಜನಿಕೆ ಸ್ವಭಾವದವರು. ಕೇಂದ್ರ ಸರಕಾರದಲ್ಲಿರುವಾಗ ಕರ್ನಾಟಕದ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಅವರು ಒಬ್ಬ ಒಳ್ಳೆ ಸ್ನೇಹಜೀವಿಯಾಗಿದ್ದರು. ಪಕ್ಷ ಬೇರೆ ರಾಜಕಾರಣ ಬೇರೆ ಮನುಷ್ಯ ಸಂಬಂಧಗಳು ಬೇರೆ. ಅವರ ಕುಟುಂಬಕ್ಕೆ ಸಾವಿನ ದುಃಖವನ್ನು ಭರಿಸುವ ಶಕ್ತಿ ದೊರಕಲಿ.

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಹಿರಿಯ ನೇತಾರ, ನಮ್ಮ ಜೊತೆಗಾರರಾಗಿದ್ದ ಅನಂತಕುಮಾರ್ ನಿಧನವು ಪಕ್ಷಕ್ಕೆ ಹಾಗೂ ನನಗೆ ವೈಯಕ್ತಿಕವಾಗಿ ಭಾರಿ ನಷ್ಟವಾಗಿದೆ. ಅವರನ್ನು ಕಳೆದುಕೊಂಡ ನಾವು ಬಡವಾಗಿದ್ದೇವೆ. ಪ್ರತಿನಿತ್ಯ ಪಕ್ಷದ ಸಂಘಟನೆಯನ್ನು ಬೆಳೆಸಲು ನಾವು ಸಮಾಲೋಚನೆ ಮಾಡುತ್ತಿದ್ದುದನ್ನು ಮರೆಯಲಾಗದು. ರಾಜಕೀಯವಾಗಿ ಬಹಳ ಬೇಗ ಉನ್ನತ ಸ್ಥಾನದವರೆಗೂ ಬೆಳೆದಿದ್ದ ಅವರು ರಾಜ್ಯ ರಾಜಕೀಯದಲ್ಲಿ ಕ್ಲಿಷ್ಟ ಸಂದರ್ಭದಲ್ಲಿ ಅತ್ಯುತ್ತಮ ಸಲಹೆಗಾರರಾಗಿದ್ದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ.

-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಕೇಂದ್ರ ಸಚಿವ ಅನಂತ ಕುಮಾರ್ ಬಿಜೆಪಿ ಪಕ್ಷದಲ್ಲಿದ್ದರೂ ನನಗೆ ಉತ್ತಮ ಸ್ನೇಹಿತರಾಗಿದ್ದರು. ಅನಂತ ಕುಮಾರ್ ಅವರ ಅಗಲಿಕೆ ವೈಯಕ್ತಿಯವಾಗಿ ದುಃಖ ತರಿಸಿದೆ. ಆರು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಸಾಕಷ್ಟು ಜನ ಪರ ಕೆಲಸ ಮಾಡಿದ್ದಾರೆ. ಪಕ್ಷಾತೀತವಾಗಿ ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರೊಬ್ಬ ಸಜ್ಜನ ರಾಜಕಾರಣಿಯಾಗಿದ್ದರು. ರಾಜಕೀಯ ಸಿದ್ಧಾಂತ ಬೇರೆಯೇ ಇದ್ದರೂ ಸಾರ್ವಜನಿಕ ಬದುಕಿನಲ್ಲಿ ಮಾದರಿಯಾಗಿದ್ದಾರೆ.

-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ

ಅನಂತಕುಮಾರ್ ಅವರು ನನ್ನ ಪರಮಾಪ್ತ ಸ್ನೇಹಿತರಲ್ಲಿ ಒಬ್ಬರಾಗಿದ್ದರು. ಅಷ್ಟೇ ಅಲ್ಲದೇ, ರಾಜ್ಯ ಕಂಡ ಅತ್ಯುತ್ತಮ ಸಂಸದೀಯ ಪಟು. ಎಲ್ಲರ ಬಗ್ಗೆ ಅನಂತಕುಮಾರ್ ಅವರು ತೋರುತ್ತಿದ್ದ ಪ್ರೀತಿ ಮತ್ತು ವಿಶ್ವಾಸ, ವಿಶೇಷವಾಗಿ ಹಿರಿಯರಿಗೆ ನೀಡುತ್ತಿದ್ದ ಗೌರವ, ಅವಿಸ್ಮರಣೀಯವಾದುದು. ಸಂಸತ್ತಿನೊಳಗೆ ಏರು ಧ್ವನಿಯಲ್ಲಿ ಚರ್ಚೆ ನಡೆಸಿ ವಿರಾಮದ ವೇಳೆಯಲ್ಲಿ ಹೊರಬಂದಾಗ, ಅದೇಕೆ ಇಷ್ಟು ಸಿಟ್ಟು ಇಷ್ಟು ಮುನಿಸು ಎಂದು ಎಳೆ ನಗೆ ಬೀರಿ ಮತ್ತೆ ತನ್ನತ್ತ ಸೆಳೆಯುತ್ತಿದ್ದ ಅಯಸ್ಕಾಂತಿಕ ಶಕ್ತಿ ಅವರಲ್ಲಿತ್ತು.

-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್ ನಾಯಕ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆರಿಸಿ ಬರುತ್ತಿದ್ದ ಅನಂತಕುಮಾರ್ ಅವರು ಸ್ನೇಹಜೀವಿಯಾಗಿದ್ದರು. ಪಕ್ಷಾತೀತವಾದ ವರ್ಚಸ್ಸನ್ನು ಬೆಳೆಸಿಕೊಂಡಿದ್ದ ಅವರ ಅಕಾಲಿಕ ನಿಧನದಿಂದ ನಾಡು ಒಬ್ಬ ಸಮರ್ಥ ನೇತಾರನನ್ನು ಕಳೆದುಕೊಂಡಿದೆ. ಸಮಾಜಸೇವಾ ಚಟುವಟಿಕೆಗಳಲ್ಲೂ ಅವರು ತಮ್ಮನ್ನು ಇತ್ತೀಚಿನ ವರ್ಷಗಳಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರಿಗೆ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಬರಲು ಕಾರಣಕರ್ತರಾದ ಹಲವರಲ್ಲಿ ಅನಂತಕುಮಾರ್ ಪ್ರಮುಖರಾಗಿದ್ದರು.

-ಆರ್.ವಿ.ದೇಶಪಾಂಡೆ, ಕಂದಾಯ ಸಚಿವ

ಅನಂತ ಕುಮಾರ್ ನಾನು ಪ್ರಧಾನಿ ಆದ ಸಂದರ್ಭದಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾಗಿ ಅಂದಿನಿಂದ ಇಂದಿನವರೆಗೂ ಸಮಾಜಕ್ಕೆ ಉತ್ತಮ ಸೇವೆಸಲ್ಲಿಸುತ್ತಿದ್ದರು. ನಾವೆಲ್ಲ ಒಬ್ಬ ಸೃಜನಶೀಲ ವ್ಯಕ್ತಿಯನ್ನು ಕಳೆದುಕೊಂಡಿದ್ದೀವಿ. ನನ್ನ ಮತ್ತು ಅವರ ಸಂಬಂಧ ಸುಮಾರು 3 ದಶಕಗಳದ್ದು. ನಾನಿಂದು ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೀನಿ. ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾಗದ ನಷ್ಟವುಂಟಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ.

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಮಂತ್ರಿ

ಕೇಂದ್ರ ಸಚಿವರಾಗಿದ್ದ ಮತ್ತು ಮೂಲತಃ ನಮ್ಮ ಹುಬ್ಬಳ್ಳಿಯವರಾದ ಅನಂತಕುಮಾರ್ ಸಾವಿನ ಸುದ್ದಿ ಆಘಾತವನ್ನು ಉಂಟುಮಾಡಿದೆ. ಇವರ ಹಗಲಿಕೆಯು ಭಾರತ ಸಂಸದೀಯ ವ್ಯವಸ್ಥೆಗೆ ತುಂಬಲಾರದ ನಷ್ಟ. ರಾಜ್ಯದ ಯಾವುದೇ ಸಮಸ್ಯೆಗಳಿಗೆ ರಾಜ್ಯ ಸರಕಾರದ ಜೊತೆ ಪಕ್ಷಭೇದ ಮರೆತು ಸದಾ ನಿಲ್ಲುತ್ತಿದ್ದರು. ಅವರ ಕುಟುಂಬಕ್ಕೆ ಸಾವಿನ ನೋವನ್ನು ಭರಿಸುವ ಶಕ್ತಿ ಸಿಗಲಿ.

-ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸಭಾಪತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News