ರಾಜ್ಯದಲ್ಲಿ ಪ್ರತಿ 5 ದಿನಕ್ಕೊಮ್ಮೆ ಓರ್ವ ದಲಿತನ ಕಗ್ಗೊಲೆ !

Update: 2018-11-12 14:03 GMT

ಬೆಂಗಳೂರು, ನ.12: ಕರ್ನಾಟಕ ಎಸ್ಸಿ-ಎಸ್ಟಿ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ ಸಹಯೋಗದೊಂದಿಗೆ ಕರ್ನಾಟಕ ದಲಿತ ಮಹಿಳಾ ವೇದಿಕೆಯ 2017ನೇ ಸಾಲಿನ ದೌರ್ಜನ್ಯ ಪ್ರಕರಣಗಳ ವರದಿಯಲ್ಲಿ, ರಾಜ್ಯದಲ್ಲಿ ಪ್ರತಿ ಐದು ದಿನಕ್ಕೊಮ್ಮೆ ಓರ್ವ ದಲಿತನ ಕೊಲೆ ಆಗುತ್ತಿದೆ ಎನ್ನುವ ಆತಂಕದ ಅಂಶ ಹೊರಬಂದಿದೆ.

2017ನೇ ಸಾಲಿನಲ್ಲಿ ರಾಜ್ಯ ವ್ಯಾಪ್ತಿಯಲ್ಲಿ 2140 ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದು, ಜಾತಿನಿಂದನೆ, ಹಲ್ಲೆ ಸೇರಿದಂತೆ ಪ್ರತಿ ದಿನಕ್ಕೆ 5ರಿಂದ 6 ದೌರ್ಜನ್ಯ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿವೆ ಎನ್ನುವ ಅಂಶ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಕರ್ನಾಟಕ ದಲಿತ ಮಹಿಳಾ ವೇದಿಕೆ ಸಂಚಾಲಕಿ ಪಿ.ಯಶೋಧಾ, 2017ನಲ್ಲಿ ಬರೋಬ್ಬರಿ 190 ದಲಿತ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿವೆ. 73 ಕೊಲೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವಿವರಿಸಿದರು.

2,140 ದೌರ್ಜನ್ಯ ಪ್ರಕರಣಗಳಲ್ಲಿ 1809 ದೌರ್ಜನ್ಯ ಪ್ರಕರಣಗಳು ಎಸ್ಸಿ ಜನಾಂಗದವರ ಮೇಲೆ ನಡೆದಿದ್ದು, 3,70 ದೌರ್ಜನ್ಯ ಪ್ರಕರಣಗಳು ಎಸ್ಟಿ ಜನಾಂಗದವರ ಮೇಲೆ ನಡೆದಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿಯೇ 196 ದೌರ್ಜನ್ಯ ಪ್ರಕರಣಗಳು ನಡೆದಿರುವುದು ಗೊತ್ತಾಗಿದೆ ಎಂದು ತಿಳಿಸಿದರು.

ದಲಿತರ ಮೇಲಿನ ದೌರ್ಜನ್ಯ ತಡೆಗಾಗಿ ರಾಜ್ಯ ಪ್ರತಿ ಜಿಲ್ಲೆಯಲ್ಲೂ ಪ್ರತ್ಯೇಕ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಜೊತೆಗೆ ರಾಜ್ಯ ಸರಕಾರವು ದೌರ್ಜನ್ಯದ ಕುರಿತು ಸಂವೇದನೆಯುಳ್ಳ ನ್ಯಾಯಾಧಿಕಾರಿ ನೇಮಿಸಬೇಕು. ಅಸ್ಪಶ್ಯತೆಯ ರೂಪ, ಮಟ್ಟ ಮತ್ತು ತೀವ್ರತೆ ಬಗ್ಗೆ ಸಮೀಕ್ಷೆ ನಡೆಸಿ, ಇಂತಹ ಕ್ರೌರ್ಯವನ್ನು ತಡೆಯುವಂತೆ ಆಗಬೇಕು ಎಂದು ಯಶೋಧಾ ಒತ್ತಾಯ ಮಾಡಿದರು.

ಪೊಲೀಸ್ ಠಾಣೆ ಮಟ್ಟದಲ್ಲಿ ನಡೆಸಬೇಕಾಗಿರುವ ದಲಿತ ದಿನವನ್ನು ತಪ್ಪದೆ ಕಾರ್ಯರೂಪಕ್ಕೆ ತರಬೇಕು. ಪ್ರತಿ ತಿಂಗಳ 2ನೆ ರವಿವಾರದಂದು ದೌರ್ಜನ್ಯ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದು ಅವರಿಗೆ ಸೂಕ್ತವಾದ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಅವರು ಹೇಳಿದರು.

ನ.13 ರಂದು ವರದಿ ಬಿಡುಗಡೆ

ಎಸ್ಸಿ-ಎಸ್ಟಿ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ ಹಾಗೂ ಕರ್ನಾಟಕ ದಲಿತ ಮಹಿಳಾ ವೇದಿಕೆ ಹೊರತಂದಿರುವ ಎಸ್ಸಿ-ಎಸ್ಟಿಗಳ (ದೌರ್ಜನ್ಯ ತಡೆ) 1989ರ ಅನುಷ್ಠಾನ-2017ನೇ ಸಾಲಿನ ವರದಿ ಅನ್ನು ನ.13 ರಂದು ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿರುವ ಎನ್‌ಜಿಒ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ. ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ ಕುಮಾರ್, ಸಂಸದ ಬಿ.ಎನ್.ಚಂದ್ರಪ್ಪ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

-ನ್ಯಾಯಾಲಯದಲ್ಲಿ ವಿಲೇವಾರಿಯಾದ ಪ್ರಕರಣಗಳ ಸಂಖ್ಯೆ-1,108

-ಶಿಕ್ಷೆಯಾದ ಪ್ರಕರಣಗಳ ಸಂಖ್ಯೆ-42 ಮಾತ್ರ

-ಖುಲಾಸೆಗೊಂಡ ಪ್ರಕರಣಗಳ ಸಂಖ್ಯೆ-983

-ಶಿಕ್ಷೆಯ ಪ್ರಮಾಣ-ಶೇ.3.79

-ಖುಲಾಸೆಗೊಂಡಿರುವ ಪ್ರಕರಣಗಳ ಪ್ರಮಾಣ-ಶೇ.75

-ಇತ್ಯರ್ಥವಾಗದ ಪ್ರಕರಣ-1,560

ಸಿಎಂ, ಡಿಸಿಎಂ ಕ್ಷೇತ್ರದಲ್ಲೇ ಹೆಚ್ಚು

ದಲಿತರ ಮೇಲಿನ ಅತ್ಯಾಚಾರ, ಗಂಭೀರ ಅಪರಾಧ ಪ್ರಕರಣ ವರದಿ ಪ್ರಕಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತವರು ಜಿಲ್ಲೆ ಹಾಸನ ವ್ಯಾಪ್ತಿಯಲ್ಲಿ 119 ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ 96 ಪ್ರಕರಣಗಳು ಈಗಲೂ ಇತ್ಯರ್ಥವಾಗದೆ ಉಳಿದಿವೆ. ಹಿರಿಯ ದಲಿತ ಮುಖಂಡರೂ ಆಗಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ಸೇರಿದಂತೆ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ 61 ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ 47 ಪ್ರಕರಣಗಳು ಇತ್ಯರ್ಥವಾಗಿಲ್ಲ.

-ಪಿ.ಯಶೋಧಾ, ಸಂಚಾಲಕಿ, ಕರ್ನಾಟಕ ದಲಿತ ಮಹಿಳಾ ವೇದಿಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News