ಹೊಸ ಔಷಧ ಕೂಡ ಗೆಳೆಯ ಅನಂತ್ ನನ್ನು ಬದುಕಿಸಲಿಲ್ಲ: ಸದಾನಂದ ಗೌಡ

Update: 2018-11-12 14:13 GMT

ಕಲಬುರಗಿ, ನ.12: ಶ್ವಾಸಕೋಶ ಕ್ಯಾನ್ಸರ್‌ನ್ನು ಗುಣಪಡಿಸಲು ಹೊಸದಾಗಿ ಅಭಿವೃದ್ಧಿಪಡಿಸಿರುವ ವಿಶೇಷ ಔಷಧ ಕೇಂದ್ರ ಸಚಿವ ಎಚ್.ಎನ್.ಅನಂತ್‌ ಕುಮಾರ್ ಅವರ ಜೀವ ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಜಾರಿ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಸೋಮವಾರ ಕಲಬುರಗಿಯಲ್ಲಿ ಶರಣಬಸವೇಶ್ವರ ವಸತಿ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾನ್ಸರ್ ಚಿಕಿತ್ಸೆ ಗುಣಪಡಿಸಲು ಈ ವರ್ಷ ಕಂಡುಹಿಡಿದ ವಿಶೇಷ ಔಷಧಿ ಮೂಲಕ ಕೂಡ ಅನಂತ್‌ ಕುಮಾರ್ ಅವರನ್ನು ಗುಣಪಡಿಸಲು ಸಾಧ್ಯವಾಗಲಿಲ್ಲ ಎಂದರು.

ಅನಂತ್‌ ಕುಮಾರ್ ಅವರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದರು. ಮೋದಿ ಸರಕಾರದ ವಿರುದ್ಧ ನಡೆದ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡನೆ ಸಮಯದಲ್ಲಿ ಅವರ ಕೆಲಸವನ್ನು ಮರೆಯಲು ಸಾಧ್ಯವಿಲ್ಲ. ಅವರ ಬುದ್ಧಿಮತ್ತೆಯಿಂದಾಗಿ ಅಂದಿನ ಅವಿಶ್ವಾಸ ನಿರ್ಣಯ ಯಾವುದೇ ಅಡೆತಡೆಗಳಿಲ್ಲದೆ ಶಾಂತವಾಗಿ ನಡೆದು ಸರಕಾರದ ಪರ ಹೆಚ್ಚು ವಿಶ್ವಾಸಮತಗಳು ಬಂದವು. ಆ ಸಮಯದಲ್ಲಿ ಅವರು ತಮ್ಮ ಆರೋಗ್ಯವನ್ನು ಅಲಕ್ಷಿಸಿ ಪಕ್ಷಕ್ಕಾಗಿ ದುಡಿದರು ಎಂದರು. ಆರಂಭದಲ್ಲಿ ಅವರಿಗೆ ನ್ಯುಮೋನಿಯಾಗೆ ಚಿಕಿತ್ಸೆ ನೀಡಲಾಯಿತು. ಮೂರನೆ ಹಂತದಲ್ಲಿದ್ದಾಗ ಅವರಿಗೆ ಕ್ಯಾನ್ಸರ್ ಇರುವುದು ಗೊತ್ತಾಯಿತು. ಬಹು ಅಂಗಾಂಗ ವೈಫಲ್ಯದಿಂದ ಕೂಡ ಅವರು ಬಳಲುತ್ತಿದ್ದರು ಎಂದರು.

10 ದಿನ ಹಿಂದೆ ಅವರನ್ನು ಆಸ್ಪತ್ರೆಗೆ ಹೋಗಿ ಭೇಟಿ ಮಾಡಿದ್ದೆ. ಆದರೆ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ನನ್ನನ್ನು ಗುರುತಿಸಿದರು. ನಾನು ಉತ್ತಮ ಸ್ನೇಹಿತನನ್ನು ಇಂದು ಕಳೆದುಕೊಂಡಿದ್ದೇನೆ, ಇದು ಪಕ್ಷಕ್ಕೆ ತುಂಬಲಾರದ ನಷ್ಟ ಎಂದಿರುವ ಸದಾನಂದ ಗೌಡ ತಮ್ಮ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News