ಚಿಕ್ಕಮಗಳೂರು: ಕೆರೆಯಲ್ಲಿ ರುಂಡವಿಲ್ಲದ ದೇಹ ಪತ್ತೆ ಪ್ರಕರಣ; ಹಚ್ಚೆ ಗುರುತಿನಿಂದ ಪ್ರಕರಣ ಭೇದಿಸಿದ ಪೊಲೀಸರು

Update: 2018-11-12 16:33 GMT

ಚಿಕ್ಕಮಗಳೂರು, ನ.12: ಇತ್ತೀಚೆಗೆ ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬುಕ್ಕನಕೆರೆಯಲ್ಲಿ ರುಂಡ ಕತ್ತರಿಸಿ ಮೃತದೇಹ ಕೆರೆಗೆ ಎಸೆದ ಆರೋಪಿಗಳನ್ನು ಬಂಧಿಸುವಲ್ಲಿ ಅಜ್ಜಂಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತ ವ್ಯಕ್ತಿಯನ್ನು ರುದ್ರಸ್ವಾಮಿ (32) ಎಂದು ಪೊಲೀಸರು ಪತ್ತೆ ಹಚ್ಚಿದ್ದು, ಈತ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕೆಂಗಟ್ಟೆ ಗ್ರಾಮದವರೆಂದು ತಿಳಿಸಿದ್ದಾರೆ.

ರುದ್ರಸ್ವಾಮಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಅಲ್ಲಿ ಅವರು ಐಶ್ವರ್ಯ ಕನ್ಸಲ್ಟನ್ಸಿ ಇಟ್ಟುಕೊಂಡು ಖಾಸಗಿ ಕೆಲಸ ಕೊಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಪೊಲೀಸರ ವಶದಲ್ಲಿದ್ದ ಮೃತದೇಹದ ಗುರುತನ್ನು ಕುಟುಂಬದವರು ಪತ್ತೆ ಹಚ್ಚಿದ್ದಾರೆ.

ಲೈಂಗಿಕ ಕಿರುಕುಳವೇ ಕೊಲೆಗೆ ಕಾರಣ?: ರುದ್ರಸ್ವಾಮಿ ಬೆಂಗಳೂರಿನಲ್ಲಿ ಐಶ್ವರ್ಯ ಕನ್ಸಲ್ಟನ್ಸಿ ಇಟ್ಟುಕೊಂಡು ಖಾಸಗಿ ಕೆಲಸ ಕೊಡಿಸುತ್ತಿದ್ದ. 6-7 ತಿಂಗಳಿಂದ ಬೆಂಗಳೂರಿನ ಚಾಮುಂಡೇಶ್ವರಿ ಬಡಾವಣೆಯ ಆಶಾ (25) ಎಂಬವರ ಮನೆಯ ಹತ್ತಿರ ವಾಸವಾಗಿದ್ದರು. ಆಶಾ ಅವರ ಪರಿಚಯ ಮಾಡಿಕೊಂಡ ಈತ ಆಶಾ ಸ್ನಾನ ಮಾಡುವಾಗ ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದಿದ್ದ ಎನ್ನಲಾಗಿದ್ದು, ಆ ವೀಡಿಯೊವನ್ನು ಆಶಾರಿಗೆ ತೋರಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದನಲ್ಲದೆ ಈತ ಲೈಂಗಿಕ ಕಿರುಕುಳ ನೀಡುತ್ತಿದ್ದು, ಕೊಲೆ ಬೆದರಿಕೆಯನ್ನೂ ಹಾಕಿದ್ದನೆಂದು ತನಿಖೆ ವೇಳೆ ತಿಳಿದು ಬಂದಿದೆ.

ಆಶಾ ಅವರು ತನ್ನ ತಂದೆ ವಿಜಯಕುಮಾರ್ (51) ಅವರಿಗೆ ವಿಷಯ ತಿಳಿಸಿದ್ದಾರೆ. ರುದ್ರಸ್ವಾಮಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ ವಿಜಯ್‌ ಕುಮಾರ್ ಈ ವಿಷಯವನ್ನು ತನ್ನ ಮಗನಿಗೂ ತಿಳಿಸಿದ್ದಾರೆ. ಅದರಂತೆ ನ.7ರಂದು ರುದ್ರಸ್ವಾಮಿಯನ್ನು ಆಶಾಳ ಸ್ವಂತ ಊರಾದ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಬೆಂಕಿಕೆರೆಗೆ ಕರೆಸಿಕೊಂಡಿದ್ದಾರೆ. ಮನೆಗೆ ಬಂದ ನಂತರ ಆಶಾ ಆಕೆಯ ತಂದೆ ವಿಜಯಕುಮಾರ್, ತಮ್ಮ ಭರತ(21) ಮತ್ತು ಆಶಾರ ತಾಯಿ ಪುಷ್ಪಾ(48) ರುದ್ರಸ್ವಾಮಿಯನ್ನು ತಮ್ಮ ತೋಟಕ್ಕೆ ಕರೆದುಕೊಂಡು ಹೋಗಿ ಕುಡುಗೋಲಿನಿಂದ ಕಡಿದು ಕೊಲೆ ಮಾಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ರುದ್ರಸ್ವಾಮಿ ಅವರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ಅಜ್ಜಂಪುರ ಸಮೀಪದ ಬುಕ್ಕನಕೆರೆಯಲ್ಲಿ ರುಂಡವಿಲ್ಲದ ಮೃತ ದೇಹಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ತಲೆ ಇಲ್ಲದ ವ್ಯಕ್ತಿಯ ಗುರುತು ಪತ್ತೆ ಅಸಾಧ್ಯ ಎಂಬಂತಾಗಿತ್ತು. ಶವ ಪರೀಕ್ಷೆ ವೇಳೆ ವ್ಯಕ್ತಿಯ ಮೈಮೇಲೆ ವಾಣಿ ಮತ್ತು ಐಶ್ವರ್ಯ ಎಂಬ ಹಚ್ಚೆ ಇದ್ದುದನ್ನು ಗಮನಿಸಿದ ಪೊಲೀಸರು, ಈ ಹೆಸರುಗಳ ನೆರವಿನಿಂದ ಮೃತ ವ್ಯಕ್ತಿ ದಾವಣಗೆರೆಯ ರುದ್ರಸ್ವಾಮಿ ಎಂಬುದನ್ನು ಪತ್ತೆ ಹಚ್ಚಿ, ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಸ್ವಿಯಾಗಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News