ಚಿಕ್ಕಮಗಳೂರು: ಪೊಲೀಸರ ಅಚ್ಚುಮೆಚ್ಚಿನ ಶ್ವಾನ ‘ಡೈಸಿ’ ಮೃತ್ಯು

Update: 2018-11-12 16:52 GMT

ಚಿಕ್ಕಮಗಳೂರು, ನ.12: ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನದಳದಲ್ಲಿ ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಅನೇಕ ಮಹತ್ವದ ಪ್ರಕರಣಗಳನ್ನು ಬೇಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಪೊಲೀಸರ ಅಚ್ಚು ಮೆಚ್ಚಿಗೆ ಪಾತ್ರವಾಗಿದ್ದ ಶ್ವಾನವೊಂದು ಅನಾರೋಗ್ಯದಿಂದ ಮೃತಪಟ್ಟಿದ್ದು, ಸೋಮವಾರ ಶ್ವಾನದ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು.

ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ವಾನ ‘ಡೈಸಿ’ ಕಳೆದ ಮೂರು ತಿಂಗಳಿನಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದೆಂದು ತಿಳಿದು ಬಂದಿದ್ದು, ಇಲಾಖೆ ವತಿಯಿಂದ ಶ್ವಾನಕ್ಕೆ ಅಗತ್ಯ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

ಪೊಲೀಸ್ ಇಲಾಖೆಯ ಶ್ವಾನದಳದಲ್ಲಿ ಕಳೆದ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಡೈಸಿ ನೂರಾರು ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರಿಗೆ ನೆರವಾಗಿತ್ತು. ಡೈಸಿಯು ಚಿಕ್ಕಮಗಳೂರು ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಎಂಟು ಕೊಲೆ ಪ್ರಕರಣ ಬೇಧಿಸಿದ್ದು, 15 ಕಳ್ಳತನ ಪ್ರಕರಣ ಹಾಗೂ 30 ವಿವಿಧ ಪ್ರಕರಣಗಳಲ್ಲಿ ಸುಳಿವು ನೀಡಿರುವುದೂ ಸೇರಿದಂತೆ ಒಟ್ಟು 105 ಮಹತ್ವದ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸ್ ಇಲಾಖೆಗೆ ನೆರವು ನೀಡಿತ್ತು ಎಂದು ತಿಳಿದು ಬಂದಿದೆ.

ಮೃತ ಶ್ವಾನದ ಅಂತ್ಯಕ್ರಿಯೆಯು ಸರಕಾರಿ ಗೌರವದೊಂದಿಗೆ ನಡೆದಿದ್ದು, ಅಂತ್ಯಸಂಸ್ಕಾರಕ್ಕೂ ಮುನ್ನ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತೆಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News