ಕನ್ನಡಿಗರು ತಬ್ಬಲಿಗಳಾಗುವ ಮುಂಚೆ ನಮ್ಮ ಭಾಷೆಯನ್ನು ಉಳಿಸಬೇಕಾಗಿದೆ: ಸಿ.ಟಿ.ರವಿ

Update: 2018-11-12 16:55 GMT

ಚಿಕ್ಕಮಗಳೂರು, ನ.12: ಕನ್ನಡ ಭಾಷೆಗೆ ಕುತ್ತುಂಟಾದರೆ ಬೇರೆಯವರಿಗೂ ನಾವು ಪರಕೀಯರಂತೆ ಕಾಣುತ್ತೇವೆ. ಕನ್ನಡಿಗರು ತಬ್ಬಲಿಗಳಾಗುವ ಮುಂಚೆ ನಮ್ಮ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ನಗರದ ಗಾಂಧೀನಗರ ಬಡಾವಣೆಯಲ್ಲಿ ಮಹಾತ್ಮಗಾಂಧಿ ಆಟೋ ನಿಲ್ದಾಣ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಹಲವು ಆಕ್ರಮಣಗಳನ್ನು ಸಹಿಸಿಕೊಂಡು ಬೆಳೆಯಿತು. ಎಂದಿಗೂ ತನ್ನತನವನ್ನು ಕಳೆದುಕೊಂಡಿರಲಿಲ್ಲ. ಆದರೆ ಇಂದು ಬಹುತೇಕ ಕಡೆ ಕನ್ನಡ ಭಾಷೆ ಇಂಗ್ಲೀಷ್‍ನೊಂದಿಗೆ ಮಿಶ್ರಣಗೊಂಡು ಕಂಗ್ಲೀಷ್ ಭಾಷೆಯಾಗಿ ಪರಿವರ್ತನೆ ಆಗುತ್ತಿದೆ. ಇದು ವಿಷಾಧನೀಯ ಎಂದರು.

ಕನ್ನಡದ ಉಳಿವು ಹೇಗೆ ಎನ್ನುವ ಚಿಂತನೆ ಕಾಡುತ್ತಿದೆ. ಇಂಗ್ಲೀಷ್ ಭಾಷೆ ನೀಲಗಿರಿ ಮತ್ತು ಅಕೇಶಿಯಾ ರೀತಿಯಲ್ಲಿ ವ್ಯಾಪಿಸುತ್ತಿದೆ. ಇತರೆ ಭಾಷೆಗಳ ಸಾರವನ್ನೆಲ್ಲ ಹೀರಿಕೊಂಡು ನಾಶಪಡಿಸುತ್ತಿದೆ. ಹತ್ತಾರು ಭಾಷೆಗಳನ್ನು ಕಲಿತರೆ ತಪ್ಪಲ್ಲ. ಆದರೆ ನಮ್ಮ ಭಾಷೆ ಮತ್ತು ನಮ್ಮತನವನ್ನು ಕಳೆದುಕೊಳ್ಳಬಾರದು ಎಂದರು.

ಭಾಷೆ ಬರೇಸಂವಹನ ಮಾಧ್ಯಮವಲ್ಲ. ಅದು ಸಂಸ್ಕೃತಿಯ ಕೀಲಿಕೈ. ಭಾಷೆಯನ್ನು ಕಳೆದುಕೊಂಡರೆ ಸಂಸ್ಕೃತಿಯನ್ನೂ ಕಳೆದುಕೊಂಡಂತೆ. ಈ ಹಿನ್ನೆಲೆಯಲ್ಲಿ ಕನಿಷ್ಟ ನಮ್ಮ ಮನೆಗಳಲ್ಲಾದರೂ ಕನ್ನಡ ಭಾಷೆಯನ್ನು ಮಾತನಾಡಬೇಕು. ನಮ್ಮ ಸಹಿಯನ್ನಾದರೂ ಕನ್ನಡದಲ್ಲೇ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕಳೆದ 20 ವರ್ಷಗಳಿಂದ ನಾನು ಕನ್ನಡದಲ್ಲೇ ಸಹಿ ಮಾಡುತ್ತಿದ್ದೇನೆ ಎಂದರು.

ಕಳಸಾಪುರ ಕಾಲೇಜು ಪ್ರಾಂಶುಪಾಲ ನಾಗರಾಜರಾವ್ ಕಲ್ಕಟ್ಟೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ಭಾಷೆ ಎನ್ನುವುದು ಕೇವಲ ಜ್ಞಾನದ ವಾಹಿನಿಯೇ ಹೊರತು ಭಾಷೆಯೇ ಜ್ಞಾನವಲ್ಲ. ಆದರೆ ಭಾಷೆಯೇ ಜ್ಞಾನ ಎನ್ನುವ ಭ್ರಮೆಯನ್ನು ಇಂಗ್ಲೀಷ್ ಮೂಡಿಸಿದೆ. ಇದನ್ನು ಹೋಗಲಾಡಿಸಬೇಕಾದ ಅಗತ್ಯವಿದೆ. ನಮ್ಮ ಹಬ್ಬ ಹರಿದಿನ, ಆಚಾರ ವಿಚಾರ, ಗುರು ಹಿರಿಯರಿಗೆ ಗೌರವ ನೀಡುವುದನ್ನು ಮಕ್ಕಳಿಗೆ ಕನ್ನಡ ಭಾಷೆಯ ಜೊತೆಯಲ್ಲೇ ಕಲಿಸಿಕೊಡಬೇಕು ಎಂದರು.

ಗಾಂಧೀನಗರ ನಿವಾಸಿ ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರುಗಳಾದ ಅಪ್ಸರ್ ಅಹಮದ್, ಮುತ್ತಯ್ಯ ಮತ್ತು ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್.ಅನಿಲ್ ಕುಮಾರ್ ಮಹರ್ಷಿ ವಾಲ್ಮಿಕಿ ಸಂಘದ ಅಧ್ಯಕ್ಷರಾದ ಕೋಟೆ ಜಗದೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ನ ಗಾಯಕ ಮಲ್ಲಿಗೆ ಸುಧೀರ್ ಸ್ವಾಗತಿಸಿ ನಿರೂಪಿಸಿದರು, ಸ್ಥಳೀಯ ಯುವಕರುಗಳಾದ ಚಂದ್ರಯ್ಯ, ಹೊನ್ನೇಗೌಡ, ಕೃಷ್ಣಪ್ಪ, ದಯಾನಂದ್, ಶಾಂತ, ಜಾರ್ಜ್, ಕಿರಣ್ ಮತ್ತು ಶುಕ್ಕೂರ್ ಇತರರು ಭಾಗಹಿಸಿದ್ದರು. ಚಂದನ್ ಮೆಲೋಡಿಯಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News