ರಾಜಕೀಯವಾಗಿ ಬೆಳೆಯಲು ಅನಂತ್ ಕುಮಾರ್ ಕಾರಣ: ಶಾಸಕ ಸಿ.ಟಿ.ರವಿ

Update: 2018-11-12 17:16 GMT

ಚಿಕ್ಕಮಗಳೂರು, ನ.12: ಕೇಂದ್ರ ಸಚಿವ ಅನಂತ್‍ ಕುಮಾರ್ ಅಕಾಲಿಕ ಸಾವು ರಾಷ್ಟ್ರ ಹಾಗೂ ರಾಜ್ಯದ ರಾಜಕಾರಣಕ್ಕೆ ತುಂಬಲಾರದ ನಷ್ಟ. ಅವರು ಪ್ರಧಾನಿ ಹಾಗೂ ಕೇಂದ್ರದ ಎಲ್ಲ ಸಚಿವರೊಂದಿಗೆ ನೇರವಾಗಿ ಮಾತನಾಡುವಷ್ಟರ ಮಟ್ಟಿಗೆ ಪ್ರಭಾವಿಯಾಗಿದ್ದರು. ರಾಜ್ಯದ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರದೊಂದಿಗೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ ಅವರ ಸಾವು ಪಕ್ಷಕ್ಕೆ ಭಾರೀ ನಷ್ಟ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿಲ್ಲದ ಸರದಾರನಾಗಿ ವಿರೋಧಿ ಪಕ್ಷಗಳ ನಿದ್ದೆಗೆಡಿಸಿದ್ದ ಅವರು 39ನೇ ವಯಸ್ಸಿಗೆ ಕೇಂದ್ರದ ಸಂಸದರಾಗಿ ಸಚಿವರಾಗಿದ್ದ ರಾಜಕೀಯ ಪ್ರತಿಭೆಯಾಗಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಹೋರಾಟಗಾರರಾಗಿದ್ದ ಅವರು, ಸೆರೆಮನೆ ವಾಸದ ರುಚಿಯನ್ನೂ ಕಂಡವರು. ತಮ್ಮ ಪ್ರಾಮಾಣಿಕತೆ, ಪ್ರತಿಭೆಯಿಂದ ಬಹುಬೇಗನೆ ಪಕ್ಷದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದ ಅನಂತ್‍ ಕುಮಾರ್, ತಳಮಟ್ಟದ ಕಾರ್ಯಕರ್ತರನ್ನು ಬೆಳೆಸಿದ ರೀತಿ ಬೆರಗು ಹುಟ್ಟಿಸುವಂತದ್ದು. ತಾನೂ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಅವರ ಗರಡಿಯಲ್ಲಿ ಪಳಗಿದ್ದು, ತಾನು ರಾಜಕೀಯವಾಗಿ ಬೆಳೆಯಲೂ ಅವರೇ ಕಾರಣ ಎಂದರು.

ವಾಜಪೇಯಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಅವರು, ನರೇಂದ್ರ ಮೋದಿಗೂ ಆಪ್ತರಾಗಿದ್ದರು. ರಾಷ್ಟ್ರ ರಾಜಕಾರಣದಲ್ಲಿದ್ದರೂ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಪಕ್ಷಪಾತ ರಾಜಕೀಯ ಮಾಡಿದವರಲ್ಲ. ಮಹದಾಯಿ, ಕಾವೇರಿ ನೀರಿನ ಹೋರಾಟದ ವಿಚಾರದಲ್ಲೂ ಅವರು ರಾಜ್ಯದ ಪರವಾಗಿ ಕೇಂದ್ರದೊಂದಿಗೆ ವ್ಯವಹರಿಸಿದ್ದಾರೆ ಎಂದ ಅವರು, ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ಅವರ ಪಾತ್ರ ಸ್ಮರಣೀಯ. ತಂತ್ರಗಾರಿಕೆಗೆ ಹೆಸರಾಗಿದ್ದ ಅವರು, ಪಕ್ಷದ ಬಲವರ್ಧನೆಯ ಹಿನ್ನೆಲೆಯಲ್ಲಿ ಹಿಂದುಳಿದ, ದಲಿತ ವರ್ಗಗಳ ನಾಯಕರನ್ನು ಗುರುತಿಸಿ ಬೆಳಸಿದರು. ಈ ತಂತ್ರಗಾರಿಕೆ ಫಲವಾಗಿ ಬಿಜೆಪಿ ಪಕ್ಷದ ಮೊದಲ ಬಾರಿಗೆ ಕರ್ನಾಟಕದಲ್ಲಿ 70-80 ಸ್ಥಾನ ಪಡೆಯಲು ಸಾಧ್ಯವಾಯಿತು. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬ್ರಾಂಡ್ ಮಾಡಿದವರು ಅನಂತ್ ಕುಮಾರ್ ಎಂದರು.

ಬಿಜೆಪಿ ಕಟ್ಟಾಳು ಆಗಿದ್ದ ಅನಂತ್‍ ಕುಮಾರ್ ಎಲ್ಲ ಪಕ್ಷದ ಮುಖಂಡರೊಂದಿಗೂ ಸಲುಗೆ ಹೊಂದಿದ್ದ ವಿಶಿಷ್ಟ ವ್ಯಕ್ತಿತ್ವದವರು. ಈ ಕಾರಣಕ್ಕೆ ಪಾರ್ಲಿಮೆಂಟ್‍ನಲ್ಲೂ ಅವರ ವಾದಗಳಿಗೆ ವಿರೋಧ ಪಕ್ಷದವರೂ ತಲೆದೂಗುತ್ತಿದ್ದರು ಎಂದ ಅವರು, ಸಚಿವರಾಗಿ ಅವರು ಆರೋಗ್ಯ ಕ್ಷೇತ್ರದಲ್ಲಿ ಜಾರಿಗೆ ತಂದ ಸುಧಾರಣೆಗಳು ಮಾದರಿಯಾಗಿದೆ. ರಸಗೊಬ್ಬರ ಖಾತೆ ಸಚಿವರಾಗಿ ರೈತರ ಪರವಾಗಿ ಸಾಕಷ್ಟು ಸುಧಾರಣೆಗಳನ್ನು ಜಾರಿ ಮಾಡಿದ್ದರ ಫಲವಾಗಿ ಪ್ರಕಸ್ತ ರಸಗೊಬ್ಬರ ಸಂಬಂಧಿ ಸಮಸ್ಯೆಗಳು ಇಲ್ಲದಂತಾಗಿವೆ. ಇಂತಹ ರಾಜಕಾರಣಿ ಅಪರೂಪ. ಅವರ ಅಗಲಿಕೆ ಪಕ್ಷ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಭಾರೀ ನಷ್ಟ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News