ದಾವಣಗೆರೆ: ನರೇಗಾ ಕಾರ್ಮಿಕರಿಗೆ ಅನ್ಯಾಯ; ಸರಿಪಡಿಸುವಂತೆ ಆಗ್ರಹಿಸಿ ಧರಣಿ

Update: 2018-11-12 17:23 GMT

ದಾವಣಗೆರೆ,ನ.12: ಜಿಲ್ಲೆಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಮಿಕರಿಗೆ ಅನ್ಯಾಯವಾಗಿದ್ದು, ಸರಿಪಡಿಸುವಂತೆ ಆಗ್ರಹಿಸಿ ನಗರದಲ್ಲಿ ಸೋಮವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಮಿಕರ ಸಂಘ (ಎಐಟಿಯುಸಿ) ಆಶ್ರಯದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.  

ಇಲ್ಲಿನ ಜಯದೇವ ವೃತ್ತದಿಂದ ಉದ್ಯೋಗ ಖಾತರಿ ಕೂಲಿ ಕಾರ್ಮಿಕರು ಘೋಷಣೆ ಕೂಗುತ್ತಾ ಎಸಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು.  
ಕಾರ್ಮಿಕ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಉದ್ಯೋಗ ಖಾತರಿ ಕೂಲಿ ಕಾರ್ಮಿಕರು ಸೌಲಭ್ಯ ಪಡೆಯಲು 1.5.2017ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿ, ಮಂಡಳಿ ಸೌಲಭ್ಯ ಪಡೆಯಲು ಆದೇಶಿಸಿತ್ತು. ಆದರೆ, ಸರ್ಕಾರದ ಆದೇಶವಾಗಿ ಒಂದು ವರ್ಷ 6 ತಿಂಗಳಾಗುತ್ತಾ ಬಂದರೂ ನಮ್ಮ ಜಿಲ್ಲೆಯ ಉದ್ಯೋಗ ಖಾತರಿ ಕಾರ್ಮಿಕರಿಗೆ ಸದರಿ ಮಂಡಳಿಯಿಂದ ಯಾವುದೇ ರೀತಿ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ ಎಂದರು. 

ಮಂಡಳಿ ಸೌಲಭ್ಯ ಪಡೆಯಲು ಉದ್ಯೋಗ ಖಾತರಿ ಜಾಬ್ ಕಾರ್ಡ್ ಹೊಂದಿರುವವರಿಗೆ ಮೊದಲು ಸ್ಮಾರ್ಟ್ ಕಾರ್ಡ್ ಮಾಡಿಕೊಡುವಂತೆ ಮಂಡಳಿಯು ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಿರುವುದರಿಂದ ಖಾಸಗಿ ಏಜೆನ್ಸಿಯವರು ಸಿಬ್ಬಂದಿ ಕೊರತೆ ನೆಪ ಮಾಡಿಕೊಂಡು ವಿಳಂಬ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ ಖಾತರಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಕೊಟ್ಟಿಲ್ಲ. ಇದರಿಂದ ಜಿಲ್ಲೆಯ ಉದ್ಯೋಗ ಖಾತರಿ ಕಾರ್ಮಿಕರಿಗೆ ತೀವ್ರ ಅನ್ಯಾಯವಾಗಿದೆ ಎಂದು ಅವರು ದೂರಿದರು.  

ಸಂಘಟನೆ ಅಧ್ಯಕ್ಷ ಆವರಗೆರೆ ಚಂದ್ರು ಮಾತನಾಡಿ, ಉದ್ಯೋಗ ಖಾತರಿ ಕೂಲಿ ಕಾರ್ಮಿಕರು ಮಂಡಳಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ಸೌಲಭ್ಯಗಳನ್ನು ಪಡೆಯಲು ಸಾಕಷ್ಟು ವಿಳಂಬವಾಗುತ್ತಿದೆ. ಜಿಲ್ಲೆಯ ಎಲ್ಲಾ ಗ್ರಾಪಂಗೊಳಪಡುವ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ, ತಕ್ಷಣವೇ ಸ್ಮಾರ್ಟ್ ಕಾರ್ಡ್ ಕೊಡಬೇಕು ಅಥವಾ ಸ್ಮಾರ್ಟ್ ಕಾರ್ಡ್‍ಗೆ ವಿಳಂಬವಾದರೆ ನೇರವಾಗಿ ಫಲಾನುಭವಿಯೇ ಕಾರ್ಡನ್ನು ಕಾರ್ಮಿಕ ಇಲಾಖೆಯಿಂದ ಮಾಡಿಕೊಟ್ಟು, ಉದ್ಯೋಗ ಖಾತರಿ ಕಾರ್ಮಿಕರು ಮಂಡಳಿ ಸೌಲಭ್ಯ ಪಡೆಯಲು ಅನುವು ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು. 

ಸ್ಮಾರ್ಟ್ ಕಾರ್ಡ್ ಮಾಡಿಸಿಕೊಡಲು ಗುತ್ತಿಗೆ ಪಡೆದ ಏಜೆನ್ಸಿ ತಮ್ಮ ಸಿಬ್ಬಂದಿ ಹೆಚ್ಚಿಸಿಕೊಂಡು, ಎಲ್ಲಾ ಗ್ರಾಪಂಗೂ ತೆರಳಿ, ಉದ್ಯೋಗ ಖಾತರಿ ಕಾರ್ಮಿಕರಿಗೆ ತಕ್ಷಣವೇ ಸ್ಮಾರ್ಟ್ ಕಾರ್ಡ್ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತರಿ ಕಾರ್ಮಿಕರ ಜಾಬ್ ಕಾರ್ಡ್‍ಗಳಿಗೆ ಡಿಜಿಟಲ್ ನಂಬರ್ ನಮೂದಿಸಿ, ಫಲಾನುಭವಿಗಳಿಗೆ ವಿತರಿಸಲು ಗ್ರಾಪಂ ಸಿಬ್ಬಂದಿಗೆ ಸೂಚಿಸಬೇಕು. ರಾಜ್ಯದ ಎಲ್ಲಾ ಗ್ರಾಪಂ ಜನಪ್ರತಿನಿಧಿಗಳಿಗೆ ಜಿಪಂನಿಂದ ಸಭೆ ನಡೆಸಿ, ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದರು.  

ಪ್ರಧಾನ ಕಾರ್ಯದರ್ಶಿ ರಂಗನಾಥ್ ಹುಣಸೇಕಟ್ಟೆ, ನಳಿನಾಕ್ಷಿ, ರೇಣುಕಮ್ಮ, ಅವರಗೆರೆವಾಸು, ಮುದುಕಪ್ಪ, ರವಿಕುಮಾರ, ಎ.ಎಂ.ಸುಧಾ, ಪರಮೇಶ್ವರಪ್ಪ, ಬಿ.ರೇಖಾ, ಮಂಜಪ್ಪ, ಬಿ.ಎನ್.ಜ್ಯೋತಿ, ರಾಧಾ, ನಾಗಮ್ಮ, ಪ್ರೇಮಲೀಲ, ಎಸ್.ಬಿ.ಲೀಲಾವತಿ, ಎಸ್.ಎಸ್.ಏಕಾಂತಪ್ಪ, ಮಂಜಪ್ಪ, ಮೂರ್ತಿ, ಸಾಕಮ್ಮ, ತಿಪ್ಪಮ್ಮ, ಯು.ಪ್ರೇಮ, ಕೌಸಲ್ಯ, ದಿಲ್ಷಾದ್, ಲಕ್ಷ್ಮೀ, ನಾಗವೇಣಿ ಇತರರು ಪ್ರತಿಭಟನೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News